ಸಾರಾಂಶ
ಜೋಯಿಡಾ: ತಾಲೂಕಿನ ಆಮಶೇತ- ಕೊಲೆಮಾಳ ಗ್ರಾಮದಲ್ಲಿ ಗುರುವಾರ ವ್ಯಕ್ತಿಯೋರ್ವ ಸ್ವಂತ ತಮ್ಮನ ಹೆಂಡತಿಯನ್ನೇ ಗುದ್ದಲಿಯಿಂದ ಹೊಡೆದು ಕೊಂದು ಹಾಕಿರುವ ಘಟನೆ ನಡೆದಿದೆ.
ಭಾಗ್ಯಶ್ರೀ ಸೋನು ವರಕ (35) ಹತ್ಯೆಯಾದ ಮಹಿಳೆ. ಧೊಂಡು ಗಂಗಾರಾಮ ವರಕ (50) ಕೊಲೆ ಮಾಡಿ ಪರಾರಿಯಾದ ಆರೋಪಿ.ದೇವರ ತೆಂಗಿನಕಾಯಿ ಯಾರ ಮನೆಯಲ್ಲಿ ಇರುತ್ತೋ ಅವರಿಗೆ ಒಳಿತಾಗಲಿದೆ ಎಂದು ಆರೋಪಿ ಭಾವಿಸಿದ್ದ. ಆ ತೆಂಗಿನಕಾಯಿಯನ್ನು ತನಗೆ ನೀಡುವಂತೆ ಹೇಳಿದರೂ ಸಹೋದರ ಕೊಟ್ಟಿರಲಿಲ್ಲ. ಕೆಲವು ದಿನಗಳ ನಂತರ ಆರೋಪಿಯ ಪುತ್ರನಿಗೆ ಅನಾರೋಗ್ಯ ಕಾಡುತ್ತಿತ್ತು. ದೇವರ ತೆಂಗಿನಕಾಯಿ ಮನೆಯಲ್ಲಿ ಇರದಿರುವುದಕ್ಕೇ ಮಗನಿಗೆ ಅನಾರೋಗ್ಯವೆಂದು ದೂರಿ, ಸಹೋದರನೊಂದಿಗೆ ಜಗಳ ಮಾಡಿದ್ದ. ಸಹೋದರ ತೆಂಗಿನಕಾಯಿ ಕೊಡದಿರುವುದಕ್ಕೆ ಆತನ ಹೆಂಡತಿಯೇ ಕಾರಣವೆಂದು ಆರೋಪಿ ಭಾವಿಸಿದ್ದ. ಗುರುವಾರ ಸಹೋದರ ಬೇರೊಂದು ಊರಿಗೆ ತೆರಳಿದ್ದ. ಆರೋಪಿ ತಮ್ಮನ ಮನೆಗೆ ತೆರಳಿ ಆತನ ಹೆಂಡತಿಗೆ ಗುದ್ದಲಿಯಿಂದ ಹೊಡೆದು ಕೊಂದು ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ರಾಮನಗರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಫಾರೆನ್ಸಿಕ್ ತಂಡದ ಸಹಾಯದಿಂದ ಸ್ಥಳದ ಪಂಚನಾಮೆ ನಡೆಸಿ ಮುಂದಿನ ತನಿಖೆ ಆರಂಭಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ಮುಂದುವರಿದಿದ್ದು, ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಸಂದರ್ಭದಲ್ಲಿ ಕಾರವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ ಎಂ.ಎನ್., ದಾಂಡೇಲಿ ಡಿವೈಎಸ್‌ಪಿ ಶಿವಾನಂದ ಎಂ., ಜೋಯಿಡಾ ಸಿಪಿಐ ಹರಿಹರ, ರಾಮನಗರ ಪಿಎಸ್‌ಐ ಮಹಾಂತೇಶ ನಾಯಕ ಸೇರಿದಂತೆ ಹಲವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.