ಕೋವಿಡ್‌ನಿಂದ ಮನುಷ್ಯನಿಗೆ ಆಕ್ಸಿಜನ್ ಬೆಲೆ ಗೊತ್ತಾಯ್ತು: ಅಪರ ಡಿಸಿ ಬಿ.ಟಿ.ಕುಮಾರಸ್ವಾಮಿ

| Published : Jun 29 2024, 12:32 AM IST

ಕೋವಿಡ್‌ನಿಂದ ಮನುಷ್ಯನಿಗೆ ಆಕ್ಸಿಜನ್ ಬೆಲೆ ಗೊತ್ತಾಯ್ತು: ಅಪರ ಡಿಸಿ ಬಿ.ಟಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ಸಿದ್ದಾರ್ಥ ಬಡಾವಣೆ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯುರ್ವೇದ ವನಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಆಕ್ಸಿಜನ್ ಎಂದರೆ ಬಹುತೇಕರು ಗಾಳಿ ಎಂದಷ್ಟೇ ತಿಳಿದುಕೊಂಡಿದ್ದರು. ಕೋವಿಡ್ ಬಂದಾಗ ಅದರ ನಿಜವಾದ ಬೆಲೆ ಗೊತ್ತಾಯಿತೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರಸಭೆ, ಅರಣ್ಯ ಇಲಾಖೆ, ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಶ್ರೀವಿದ್ಯಾಗಣಪತಿ ಸೇವಾ ಸಮಿತಿ, ಅಮೃತ ಆಯುರ್ವೇದ ಕಾಲೇಜು ಆಶ್ರಯದಲ್ಲಿ ಶುಕ್ರವಾರ ಸಿದ್ದಾರ್ಥ ಬಡಾವಣೆ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಆಯುರ್ವೇದ ವನಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದೆ ನಮ್ಮ ಪೂರ್ವಿಕರು ಒಂದು ಮರ ಕಡಿದರೆ ಮತ್ತೊಂದನ್ನು ನೆಡುತ್ತಿದ್ದರು. ಇದನ್ನು ನಾವೆಲ್ಲರೂ ಮಾಡಬೇಕು. ಸರ್ಕಾರ ಕಾಡು ಬೆಳೆಸಲು ಎಲ್ಲಾ ಪ್ರಯತ್ನ ಮಾಡುತ್ತದೆ. ಯಾರೇ ಆಗಲಿ ಪರಿಸರ ಉಳಿಸುವ ಒಳ್ಳೆಯ ಕೆಲಸ ಮಾಡಿದರೆ ಅದಕ್ಕೆ ಬೆಂಬಲ ನೀಡಬೇಕು. ಪ್ರಕೃತಿ ಮಡಿಲಲ್ಲಿ ಗಾಳಿ, ನೀರು, ಭೂಮಿ, ಆಕಾಶದ ಸಂಬಂಧೊಂದಿಗೆ ನಾವು ಬದುಕುತ್ತಿದ್ಧೇವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಕೃತಿ ಪ್ರೀತಿಸಿ, ಗೌರವಿಸಿ ಸಂರಕ್ಷಿಸಬೇಕು. ಜೊತೆಗೆ ಆಯುರ್ವೇದ ವನ ನಿರ್ಮಾಣ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಮತ್ತು ಶ್ರೇಷ್ಠವಾದ ಕೆಲಸ ಎಂದರು.

ಕಾಡು ಬೆಳೆದರೆ ನಾಡು ಬೆಳೆಯುತ್ತದೆ. ಜೊತೆಗೆ ಪ್ರತಿಗಿಡಗಳು ಕೂಡ ಆಯುರ್ವೇದ ಗುಣ ಹೊಂದಿರುತ್ತವೆ. ಚಿತ್ರದುರ್ಗದಲ್ಲಿ ಆಯುರ್ವೇದ ವನ ನಿರ್ಮಾಣ ಮಾಡುವ ಮಹತ್ವದ ಸಂಕಲ್ಪ ಮತ್ತು ಗುರಿ ಹೊಂದಿರುವುದು ಸಂತಸದ ಸಂಗತಿ. ಆಯುರ್ವೇದ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ಇದೊಂದು ಉಪಯುಕ್ತ ಸಸ್ಯಕ್ಷೇತ್ರವಾಗಲಿ. ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ನೇತೃತ್ವದಲ್ಲಿ ಆಯುರ್ವೇದ ವನ ನಿರ್ಮಾಣ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಅದೆಷ್ಟೋ ಪಾರ್ಕ್‌ಗಳಿದ್ದು ಉಪಯುಕ್ತವಾಗುವುದು ಮುಖ್ಯ. ಕೇವಲ ಜೂನ್ ತಿಂಗಳಲ್ಲಿ ಪರಿಸರ ದಿನಾಚರಣೆ ಮಾಡುವ ಬದಲು ಹೀಗೆ ಉದ್ಯಾನವನ್ನು ಆಯುರ್ವೇದ ಕ್ಷೇತ್ರವನ್ನಾಗಿ ಮಾಡುವುದು ಒಳ್ಳೆಯ ಪ್ರಯತ್ನ. ಅರಣ್ಯ ಇಲಾಖೆ ಮತ್ತು ಆಯುಷ್ ಹಾಗೂ ಎಲ್ಲರ ಸಹಕಾರದೊಂದಿಗೆ ಎಲ್ಲಾ ಬಗೆಯ ಆಯುರ್ವೇದ ಗಿಡ ಬೆಳೆಸಬೇಕು. ಈ ವರ್ಷ 5 ಕೋಟಿ ಗಿಡ ಬೆಳೆಸಲು ಸರ್ಕಾರ ತೀರ್ಮಾನಿಸಿರುವುದು ಮಹತ್ವದ ಕಾರ್ಯ. ಆದರೆ ಸರ್ಕಾರದೊಂದಿಗೆ ಸಾರ್ವಜನಿಕರೂ ಕೈ ಜೋಡಿಸಿದಾಗ ಮಾತ್ರ ಯೋಜನೆಗಳು ಯಶಸ್ವಿಯಾಗುತ್ತದೆ.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಡಾ.ಎಂ.ಸಿ ನರಹರಿ, ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಆಡಳಿತಾಧಿಕಾರಿ ಮಾಲತೇಶ್ ಅರಸ್, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ ಟಿ.ರುದ್ರಮುನಿ ಮಾತನಾಡಿದರು. ನಗರಸಭೆ ಸದಸ್ಯ ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ದುರ್ಗೇಶ್, ಸಿದ್ದಾರ್ಥ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಸಂಚಾಲಕ ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ್, ಅಮೃತ ಆಯುರ್ವೇದ ಕಾಲೇಜಿನ ಉಪನ್ಯಾಸಕ ಡಾ.ನವೀನ್ ಸಜ್ಜನ್, ನಗರಸಭೆ ಪರಿಸರ ಇಂಜಿನಿಯರ್ ನಾಗರಾಜ್, ಅರಣ್ಯ ಅಧಿಕಾರಿ ಉಷಾರಾಣಿ ಇದ್ದರು.