ಸಾರಾಂಶ
ತಾನು, ತನ್ನದು ಎಂಬ ಸ್ವಾರ್ಥ ಮನೋಭಾವ ತ್ಯಜಿಸಿ, ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಸನ್ಮಾರ್ಗದ ನಡೆ ಹಾಗೂ ಮಾನವೀಯತೆಯು ದೈವತ್ವದಷ್ಟೇ ಮಿಗಿಲಾದುದು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಕಲಿಯುಗದಲ್ಲಿ ಮನುಷ್ಯ ತಾನು ಮಾಡಿದ ಪಾಪ, ಪುಣ್ಯವನ್ನು ತಾನೇ ಅನುಭವಿಸಬೇಕು, ಹುಟ್ಟು- ಸಾವಿನ ನಡುವಿನ ಜೀವನದ ಜಂಜಾಟದಲ್ಲಿ ಮನುಷ್ಯ ಸನ್ಮಾರ್ಗದಲ್ಲಿ ನಡೆದು ಬದುಕಿನ ಸಾರ್ಥಕತೆ ಪಡೆಯಬೇಕು, ಅದೇ ನಿಜವಾದ ಮನುಷ್ಯ ಧರ್ಮವಾಗಿದೆ ಎಂದು ಚಿತ್ರದುರ್ಗ ಬೃಹನ್ಮಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಚಲ್ಲಾಪುರ ಗ್ರಾಮದಲ್ಲಿ ನಡೆದ ದಿ. ರಂಗಪ್ಪ ಅವರ ಶಿವಗಣಾರಾಧನಾ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬದುಕಿರವವರೆಗೂ ಮನುಷ್ಯ ತಾನು ಮಾಡಿದ ಸತ್ಕಾರ್ಯಗಳಿಂದ ತನ್ನ ಮರಣದ ನಂತರವೂ ಒಳ್ಳೆಯತನ ಮೇಳೈಸಿದಾಗ ಮನುಷ್ಯ ಜನ್ಮ ಸಾರ್ಥಕತೆ ಪಡೆಯುತ್ತದೆ, ದಿ. ರಂಗಪ್ಪ ಅವರು ಕೂಡ ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದರೂ ಎಲ್ಲರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರು, ಅಹಂ ಇಲ್ಲದ ವ್ಯಕ್ತಿತ್ವ ಅವರದ್ದಾಗಿತ್ತು, ಪ್ರೀತಿ, ವಿಶ್ವಾಸದಿಂದ ವ್ಯವಹರಿಸುವ ಸಾದ್ವಿಕ ಮನಸ್ಸುಳ್ಳವರಾಗಿದ್ದರು, ಭಗವಂತನ ಕೃಪೆಗೆ ಪಾತ್ರರಾಗಲು ಒಳ್ಳೆಯತನವಿದ್ದರೆ ಸಾಕು ಎಂದರು.
ಹಿರಿಯೂರು ಮಠದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ತಾನು, ತನ್ನದು ಎಂಬ ಸ್ವಾರ್ಥ ಮನೋಭಾವ ತ್ಯಜಿಸಿ, ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಸನ್ಮಾರ್ಗದ ನಡೆ ಹಾಗೂ ಮಾನವೀಯತೆಯು ದೈವತ್ವದಷ್ಟೇ ಮಿಗಿಲಾದುದು ಎಂದರು.ಶಾಸಕ ಕೆ. ಎಂ. ಶಿವಲಿಂಗೇಗೌಡ ಮಾತನಾಡಿ, ನಿಸ್ವಾರ್ಥ ಮನೋಭಾವದಿಂದ ಬದುಕಿದ್ದ ರಂಗಪ್ಪನವರ ಸಾವು ತುಂಬಾ ನೋವು ತಂದಿದೆ, ಗುತ್ತಿಗೆದಾರರಾಗಿದ್ದ ಅವರಿಗೆ ಪ್ರಾಮಾಣಿಕತೆ ಉಸಿರಾಗಿತ್ತು, ಅವರ ಸನ್ನಡತೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಮಹೇಶ್ ಬಾಣಾವರ, ದಲಿತ ಮುಖಂಡ ಶಂಕರ್ ರಾಜ್, ಗ್ರಾಪಂ ಸದಸ್ಯ ಯತೀಶ್ ಕುಮಾರ್, ಜಿಪಂ ಮಾಜಿ ಸದಸ್ಯೆ ವತ್ಸಲ ಶೇಖರಪ್ಪ, ಶಿವಮೂರ್ತಿ, ಗ್ರಾಮದ ಹಲವರು ಉಪಸ್ಥಿತರಿದ್ದರು.