ಚಿಕ್ಕಬಳ್ಳಾಪುರ: ಅಕ್ರಮ ಗಾಂಜಾ ಮಾರಾಟ ಆರೋಪಿಗೆ 6 ವರ್ಷ ಸಜೆ, 60 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ತೀರ್ಪು ನೀಡಿದ್ದಾರೆ.
ಗೌರಿಬಿದನೂರು ನಗರದ ನೆಹರೂಜಿ ಕಾಲೋನಿಯ ನಿವಾಸಿ ಫಿರೋಜ್ ಖಾನ್ ಶಿಕ್ಷೆಗೊಳಗಾದ ಅಪರಾಧಿ.ಆರೋಪಿ ಫಿರೋಜ್ ಖಾನ್ 2020ರ ಸೆಪ್ಟೆಂಬರ್ 17ರಂದು ಕಾನೂನು ಬಾಹಿರವಾಗಿ ಗಾಂಜಾ ಪಾಕೆಟ್‌ಗಳನ್ನು ಪಡೆದುಕೊಂಡು ಬಂದು ಮಾರಾಟ ಮಾಡುವ ಸಲುವಾಗಿ ತನ್ನ ಮನೆಯಲ್ಲಿಯೇ ಕಾನೂನು ಬಾಹಿರವಾಗಿ ಶೇಖರಿಸಿಕೊಂಡಿದ್ದನು. ಗೌರಿಬಿದನೂರು ನಗರ ಪೊಲೀಸರು ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದಾಗ ಸುಮಾರು 6,72,200 ರು.ಗಳ ಬೆಲೆಬಾಳುವ 16.800 ಕೆ.ಜಿ ತೂಕದ ಗಾಂಜಾ ಸಿಕ್ಕಿದ್ದು, ಅವುಗಳನ್ನು ವಶಪಡಿಸಿಕೊಂಡು ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ನಂತರ ಸದರಿ ಪ್ರಕರಣವು ಚಿಕ್ಕಬಳ್ಳಾಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸ್ಪೆಷಲ್ ಸಿ ಸಂಖ್ಯೆ 141/2020 ರಂತೆ ವಿಚಾರಣೆ ನಡೆದಿದ್ದು,ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಬಿ.ಅರುಣಾಕ್ಷಿ ಅವರು ವಾದವನ್ನು ಮಂಡಿಸಿದ್ದರು.