ತನ್ನ ಪತ್ನಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನಲೆಯಲ್ಲಿ ಆಟೋ ಮೊಬೈಲ್ ಮಾರಾಟಗಾರನನ್ನು ನಡುರಸ್ತೆಯಲ್ಲಿಯೇ ಅಡ್ಡಗಟ್ಟಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಮೃತನ ಸ್ನೇಹಿತನನ್ನು ಜೆ.ಜೆ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತನ್ನ ಪತ್ನಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನಲೆಯಲ್ಲಿ ಆಟೋ ಮೊಬೈಲ್ ಮಾರಾಟಗಾರನನ್ನು ನಡುರಸ್ತೆಯಲ್ಲಿಯೇ ಅಡ್ಡಗಟ್ಟಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಮೃತನ ಸ್ನೇಹಿತನನ್ನು ಜೆ.ಜೆ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ದೇವರಾಜ್ ಅರಸು ನಗರದ ನಿವಾಸಿ ಅಕ್ರಂಪಾಷಾ (45) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಪರಿಚಿತ ಉಮರ್ ಖಲೀದ್‌ನ ಬಂಧನವಾಗಿದೆ. ಮನೆ ಸಮೀಪ ಬುಧವಾರ ನಸುಕಿನಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಪಾಷನನ್ನು ಅಡ್ಡಗಟ್ಟಿ ಉಮರ್ ಚಾಕುವಿನಿಂದ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದ. ಕೂಡಲೇ ಕೃತ್ಯದ ಬಗ್ಗೆ ಮಾಹಿತಿ ಪಡೆದು ತನಿಖೆಗಿಳಿದ ಪೊಲೀಸರು, ಕೆಲವೇ ತಾಸಿನಲ್ಲಿ ಆತನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದೇ ಏರಿಯಾದಲ್ಲಿ ಉಮರ್ ಹಾಗೂ ಪಾಷ ನೆಲೆಸಿದ್ದು, ಹಲವು ವರ್ಷಗಳಿಂದ ಪರಸ್ಪರ ಮಧ್ಯೆ ಸ್ನೇಹವಿತ್ತು. ಇತ್ತೀಚಿಗೆ ತನ್ನ ಪತ್ನಿ ಜತೆ ಪಾಷ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಉಮರ್ ಸಿಟ್ಟಿಗೆದ್ದಿದ್ದ. ಇದೇ ವಿಷಯವಾಗಿ ಹಲವು ಬಾರಿ ಗಲಾಟೆಗಳು ನಡೆದಿದ್ದವು. ಆದರೂ ಅಕ್ರಮ ಸಂಬಂಧ ಮುಂದುವರೆದಿತ್ತು. ಇದರಿಂದ ಕೆರಳಿದ ಆತ, ಕೊನೆಗೆ ಪಾಷನ ಹತ್ಯೆಗೆ ನಿರ್ಧರಿಸಿದ್ದ ಎಂದು ತಿಳಿದು ಬಂದಿದೆ.ಅಂತೆಯೇ ಸಂಬಂಧಿಕರ ಮನೆ ಕಾರ್ಯಕ್ರಮಕ್ಕೆ ಮಂಗಳವಾರ ರಾತ್ರಿ ಪಾಷ ಹೋಗಿರುವ ಸಂಗತಿ ಉಮರ್ ತಿಳಿಯಿತು. ಆಗ ಆ ಕಾರ್ಯಕ್ರಮ ಮುಗಿಸಿ ಬರುವವರೆಗೆ ಕಾದು ಆರೋಪಿ ಹತ್ಯೆ ಮಾಡಿದ್ದಾನೆ. ಟಿಪ್ಪು ಚೌಕ ಸಮೀಪ ಪಾಷನ ಬೈಕ್ ಅಡ್ಡಗಟ್ಟಿ ಬುಧವಾರ ಮುಂಜಾನೆ ಆತ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.