ಗಣೇಶ ವಿಗ್ರಹವನ್ನೂ ಕದ್ದೊಯ್ದರು!

| Published : Sep 15 2024, 01:52 AM IST

ಸಾರಾಂಶ

ದುಷ್ಕರ್ಮಿಗಳು ದೇವಸ್ಥಾನಗಳಲ್ಲಿ ಚಿನ್ನ, ಬೆಳ್ಳಿ, ಹುಂಡಿ ಹಣ ಕಳವು ಮಾಡಿರುವುದನ್ನು ಕೇಳಿದ್ದೇವೆ. ಆದರೆ, ಗೌರಿ-ಗಣೇಶ ಹಬ್ಬದ ಪ್ರಯುಕ್ತ ರಸ್ತೆ ಬದಿ ಮಾರಾಟಕ್ಕೆ ಇರಿಸಿದ್ದ ಮಣ್ಣಿನ ಗಣಪತಿ ವಿಗ್ರಹ ಕಳವು ಮಾಡಿರುವ ಅಪರೂಪ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದುಷ್ಕರ್ಮಿಗಳು ದೇವಸ್ಥಾನಗಳಲ್ಲಿ ಚಿನ್ನ, ಬೆಳ್ಳಿ, ಹುಂಡಿ ಹಣ ಕಳವು ಮಾಡಿರುವುದನ್ನು ಕೇಳಿದ್ದೇವೆ. ಆದರೆ, ಗೌರಿ-ಗಣೇಶ ಹಬ್ಬದ ಪ್ರಯುಕ್ತ ರಸ್ತೆ ಬದಿ ಮಾರಾಟಕ್ಕೆ ಇರಿಸಿದ್ದ ಮಣ್ಣಿನ ಗಣಪತಿ ವಿಗ್ರಹ ಕಳವು ಮಾಡಿರುವ ಅಪರೂಪ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆಂಧ್ರಹಳ್ಳಿ ಮುಖ್ಯರಸ್ತೆಯಲ್ಲಿ ಸೆ.12ರಂದು ರಾತ್ರಿ 12.45ಕ್ಕೆ ಈ ಘಟನೆ ನಡೆದಿದೆ. ವ್ಯಾಪಾರಿಯೊಬ್ಬರು ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆಂಧ್ರಹಳ್ಳಿಯ ಮುಖ್ಯರಸ್ತೆ ಬದಿ ಸುಮಾರು 30 ಗಣೇಶ ವಿಗ್ರಹಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದರು. ಸೆ.12ರಂದು ಸಂಜೆ ವರೆಗೂ ವ್ಯಾಪಾರ ಮಾಡಿ ಬಳಿಕ ಗಣೇಶ ವಿಗ್ರಹಗಳಿಗೆ ಟಾರ್ಪಲ್‌ ಹೊದಿಸಿ ಮನೆಗೆ ತೆರಳಿದ್ದಾರೆ.

ಅಂದು ರಾತ್ರಿ 12.45ಕ್ಕೆ ದ್ವಿಚಕ್ರ ವಾಹನದಲ್ಲಿ ಬಂದಿರುವ ಇಬ್ಬರು ದುಷ್ಕರ್ಮಿಗಳು, ಟಾರ್ಪಲ್‌ ತೆಗೆದು ಒಂದು ಗಣೇಶ ವಿಗ್ರಹವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಕಳವು ದೃಶ್ಯ ಘಟನಾ ಸ್ಥಳದ ಪಕ್ಕದ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.