- ಅಕ್ರಮ ಸ್ಫೋಟಕಗಳ ಸಂಗ್ರಹದ ಆರೋಪಿ
- ತಮಿಳುನಾಡಿನ ಭವಾನಿಸಾಗರದಲ್ಲಿ ಬಂಧನ----
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಅಕ್ರಮವಾಗಿ ಸ್ಫೋಟಕಗಳ ಸಂಗ್ರಹ, ಬಳಕೆ ಆರೋಪಗಳ ಮೇಲೆ 18 ವರ್ಷಗಳಿಂದ ಕಣ್ಮರೆಯಾಗಿ ಪೊಲೀಸರ ನಿದ್ದೆಗೆಡಿಸಿದ್ದ ಆರೋಪಿಯನ್ನು ಕೊನೆಗೂ ಕೊಳ್ಳೇಗಾಲ ಪೊಲೀಸರು ಪತ್ತೆಹಚ್ಚಿದ್ದು, ಸೆರೆಹಿಡಿದಿದ್ದಾರೆ.
ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ರಾಜಕಣ್ಣನ್ ಎಂಬುವರ ಪುತ್ರ ವೇಲುಸ್ವಾಮಿ (ಗೆಂದೆ) ಆರೋಪಿಯು ತಮಿಳುನಾಡಿನ ಭವಾನಿಸಾಗರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಕೊಳ್ಳೇಗಾಲದ ಅಪರಾಧ ಪತ್ತೆ ದಳ ತಂಡವು ಅಲ್ಲಿಗೇ ತೆರಳಿ ವೇಲುಸ್ವಾಮಿಯನ್ನು ಬಂಧಿಸಿದೆ.
ವೇಲುಸ್ವಾಮಿ ಪ್ರಕರಣ:
ವೇಲುಸ್ವಾಮಿಯು 2008ರ ಏ.17ರಂದು 41 ಸ್ಫೋಟಕ ಕೇಪು, 4 ತೋಪುಗಳು, 29 ಅಡಿ ವೈಯರ್ ಸೇರಿ ಅಕ್ರಮ ಸ್ಫೋಟಕ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಎಂದು ಅಂದಿನ ಎಎಸ್‌ಐ ಗೋವಿಂದಯ್ಯ ಅವರು ದಾಳಿ ಮಾಡಿದ್ದರು. ಈ ವೇಳೆ ವೇಲುಸ್ವಾಮಿಯನ್ನು ಬಂಧಿಸಿ, ಸ್ಫೋಟಕಗಳನ್ನು ವಶಪಡಿಸಿಕೊಂಡು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯವು ವೇಲುಸ್ವಾಮಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಆ ಬಳಿಕ ವೇಲುಸ್ವಾಮಿ ತಲೆಮರೆಸಿಕೊಂಡಿದ್ದ.ಪೊಲೀಸರ ಕಾರ್ಯಾಚರಣೆ:18 ವರ್ಷಗಳ ಬಳಿಕ ವೇಲುಸ್ವಾಮಿಯು ತಮಿಳುನಾಡಿನಲ್ಲಿ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಪೊಲೀಸರು ತಂಡ ರಚಿಸಿಕೊಂಡು, ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಧಮೇಂದ್ರ ಅವರ ನೇತೃತ್ವದಲ್ಲಿ ಉಪ ವಿಭಾಗ ಅಪರಾಧ ಪತ್ತೆ ದಳ ಸಿಬ್ಬಂದಿ ಎಎಸ್‌ಐ ತಖಿಉಲ್ಲಾ, ಮುಖ್ಯಪೇದೆ ರವಿಕುಮಾರ್, ವೆಂಕಟೇಶ್, ಪೇದೆ ಬಿಳಿಗೌಡ, ಶಿವಕುಮಾರ್ ಅವರ ತಂಡವು ದಾಳಿ ನಡೆಸಿದೆ. ಈ ವೇಳೆ ವೇಲುಸ್ವಾಮಿ ಸೆರೆಯಾಗಿದ್ದು, ಕೋರ್ಟ್ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.