ಮ್ಯಾನೇಜ್‌ಮೆಂಟ್ ಎಂಬ ಪದವು ಇಟಾಲಿಯನ್ ಮೂಲದಿಂದ ಬಂದಿದ್ದು, ಅದರ ಅರ್ಥ ಕುದುರೆಗೆ ತರಬೇತಿ ನೀಡುವುದು ಎಂದಾಗಿದ್ದು ಜೊತೆಗೆ ಜನರನ್ನು ಸಮರ್ಥವಾಗಿ ಹಾಗೂ ಚಾತುರ್ಯದಿಂದ ಮುನ್ನಡೆಸುವ ಕೌಶಲ್ಯವೇ ನಿಜವಾದ ನಿರ್ವಹಣೆ ಎಂದು ದಾವಣಗೆರೆಯ ಯು.ಬಿ.ಡಿ.ಟಿ. ಕಾಲೇಜಿನ ಸಿ.ಎಸ್.ಇ. ವಿಭಾಗದ ಡಾ. ಶ್ರೀಧರ್ ತಿಳಿಸಿದರು.
ಕನ್ನಡಪ್ರಭವಾರ್ತೆ ತಿಪಟೂರು
ಮ್ಯಾನೇಜ್‌ಮೆಂಟ್ ಎಂಬ ಪದವು ಇಟಾಲಿಯನ್ ಮೂಲದಿಂದ ಬಂದಿದ್ದು, ಅದರ ಅರ್ಥ ಕುದುರೆಗೆ ತರಬೇತಿ ನೀಡುವುದು ಎಂದಾಗಿದ್ದು ಜೊತೆಗೆ ಜನರನ್ನು ಸಮರ್ಥವಾಗಿ ಹಾಗೂ ಚಾತುರ್ಯದಿಂದ ಮುನ್ನಡೆಸುವ ಕೌಶಲ್ಯವೇ ನಿಜವಾದ ನಿರ್ವಹಣೆ ಎಂದು ದಾವಣಗೆರೆಯ ಯು.ಬಿ.ಡಿ.ಟಿ. ಕಾಲೇಜಿನ ಸಿ.ಎಸ್.ಇ. ವಿಭಾಗದ ಡಾ. ಶ್ರೀಧರ್ ತಿಳಿಸಿದರು.ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ. ವಿಭಾಗದ ವತಿಯಿಂದ ೨೦೨೩-೨೦೨೫ನೇ ಸಾಲಿನ ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪದವೀಧರ ವಿದ್ಯಾರ್ಥಿಗಳಲ್ಲಿ ಉತ್ತಮ ಚಿಂತನೆಗಳು ತಮ್ಮ ಮನಸ್ಸಿಗೆ ಬರಲಿ. ಎಂಬಿಎ ಪದವಿಯಿಂದ ಸಾಕಷ್ಟು ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ಭವಿಷ್ಯದಲ್ಲಿ ಸ್ವಂತ ವ್ಯವಹಾರ, ಉದ್ದಿಮೆಗಳನ್ನು ಆರಂಬಿಸಿ ಸಾಕಷ್ಟು ಯುವಕರಿಗೆ ಕೆಲಸ ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿಬಹುದು. ಸಾಧಿಸುವ ಛಲ ಇಟ್ಟುಕೊಂಡು ಮುಂದಿನ ಯಾವುದೇ ಸಾಧನೆ ಮಾಡಿ. ಒಬ್ಬ ಉತ್ತಮ ವ್ಯವಸ್ಥಾಪಕನ ಕೆಲಸವೆಂದರೆ ಕೇವಲ ಕೆಲಸ ಮಾಡಿಸಿಕೊಳ್ಳುವುದಲ್ಲ, ಬದಲಾಗಿ ಪ್ರೇರೇಪಣೆ ನೀಡುವುದು, ಮಾರ್ಗದರ್ಶನ ಮಾಡುವುದು ಹಾಗೂ ನಾಯಕತ್ವ ವಹಿಸುವುದಾಗಿದೆ. ಒಬ್ಬ ಸಮರ್ಥ ವ್ಯವಸ್ಥಾಪಕ ನರಕವನ್ನೇ ಸ್ವರ್ಗವನ್ನಾಗಿ ಪರಿವರ್ತಿಸಬಲ್ಲನು. ಉದ್ಯೋಗಿಗಳೊಂದಿಗೆ ಆತ್ಮೀಯ ಸಂಬಂಧ ಬೆಳೆಸುವುದರಿಂದ ವಿಶ್ವಾಸ ಮತ್ತು ಸಂಘಟನಾ ಬಲ ಹೆಚ್ಚುತ್ತದೆ ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ಹಾಗೂ ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜು ಅವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಸಮರ್ಪಣೆ ಮತ್ತು ಶ್ರಮವನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಂಡು, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವೃತ್ತಿಪರರಾಗಬೇಕು ಎಂದು ಕಿವಿಮಾತು ಹೇಳಿದರು. ಖಜಾಂಚಿ ಟಿ.ಎಸ್. ಶಿವಪ್ರಸಾದ್, ಕಾರ್ಯದರ್ಶಿಗಳಾದ ಜಿ.ಎಸ್. ಉಮಾಶಂಕರ್, ಎಂ.ಆರ್. ಸಂಗಮೇಶ್ ಅವರು ಶಿಕ್ಷಣವು ಕೇವಲ ಜ್ಞಾನ ನೀಡುವುದಲ್ಲ, ವ್ಯಕ್ತಿತ್ವ ನಿರ್ಮಾಣಕ್ಕೂ ಸಹಕಾರಿಯಾಗಬೇಕು. ವಿದ್ಯಾರ್ಥಿಗಳು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಬೇಕು ಎಂದು ಆಶಿಸಿದರು. ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ದೀಪ್ತಿಅಮಿತ್ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳ ಕುರಿತು ಮಾತನಾಡಿದರು. ಐಐಸಿ ಮುಖ್ಯಸ್ಥರಾದ ಡಾ. ಮಿಟ್ಟಾ ಶೇಖರ ಗೌಡ ಅವರು ವಿದ್ಯಾರ್ಥಿಗಳು ಹೊಸ ಆವಿಷ್ಕಾರಶೀಲ ಉದ್ಯಮಿಗಳಾಗಿ ಬೆಳೆಯಬೇಕೆಂದು ಪ್ರೇರೇಪಿಸಿದರು. ಈ ಸಂದರ್ಭದಲ್ಲಿ ಎಂ.ಬಿ.ಎ. ಪದವೀಧರರಿಗೆ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ವಿ.ಎಸ್. ಉಪಾಧ್ಯಕ್ಷರಾದ ಬಿ.ಎಸ್. ಉಮೇಶ್, ಜಿ.ಪಿ.ದೀಪಕ್, ಟಿ.ಎಸ್. ಬಸವರಾಜು, ಕಾರ್ಯದರ್ಶಿಗಳಾದ ಸುಧಾಕರ್ ಎಚ್.ಜಿ., ಹಾಗೂ ಟಿ.ಯು.ಜಗದೀಶಮೂರ್ತಿ, ಪ್ರಾಂಶುಪಾಲರಾದ ಡಾ. ಹೆಚ್.ಸಿ. ಸತೀಶ್ ಕುಮಾರ್, ಹಂಸಲೇಖ ಎಸ್., ಸುಜಾತ ಎನ್. ಶೀರಿ, ನವೀನ್ ಕುಮಾರ್ ಟಿ.ಎಸ್., ರಚನಾ ಎಸ್. ಹಾಗೂ ಭಾಗ್ಯಲಕ್ಷ್ಮೀ ಆರ್. ಕೃತಿಕಾ ಎಸ್. ಕುಮಾರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.