ಮಾದರಿ ಶಿಕ್ಷಕರಾಗಲು ಸಾಮರ್ಥ್ಯಭಿವೃದ್ಧಿ ಮುಖ್ಯ

| Published : Aug 02 2025, 12:00 AM IST

ಸಾರಾಂಶ

ಕಲಿಕೆ ಪ್ರಕ್ರಿಯೆಯು ನಿರಂತರವಾದದ್ದು. ನಾವು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳಿಕೊಟ್ಟಾಗ ಉತ್ತಮ ನಾಗರೀಕ ಸಮಾಜವನ್ನು ನಾವು ನಿರ್ಮಿಸಲು ಸಾಧ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಮಾದರಿ ಶಿಕ್ಷಕರಾಗಲು ಸಾಮರ್ಥ್ಯಭಿವೃದ್ಧಿ ಮುಖ್ಯ ಎಂದು ಮೈಸೂರು ವಿವಿಯ ಸಮಾಜ ಕಾರ್ಯ ಅಧ್ಯಯನ ವಿಭಾಗದ ಪ್ರೊ.ಎಚ್.ಪಿ. ಜ್ಯೋತಿ ಹೇಳಿದರು.

ನಗರದ ಮಾನಸ ಗಂಗೋತ್ರಿಯ ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಕೆ ಪ್ರಕ್ರಿಯೆಯು ನಿರಂತರವಾದದ್ದು. ನಾವು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳಿಕೊಟ್ಟಾಗ ಉತ್ತಮ ನಾಗರೀಕ ಸಮಾಜವನ್ನು ನಾವು ನಿರ್ಮಿಸಲು ಸಾಧ್ಯವಾಗುತ್ತದೆ. ಮಾದರಿ ಶಿಕ್ಷಕರಾಗಲು ಸಾಮರ್ಥ್ಯಾಭಿವೃದ್ಧಿ ಮುಖ್ಯ. ಪ್ರತಿನಿತ್ಯ ನೀವು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿರಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರಿಣಾಮಕಾಗಿ ಶಿಕ್ಷಣ ನೀಡಲು ಇದೆಲ್ಲವೂ ಸಹಕಾರಿ ಆಗಲಿದೆ ಎಂದರು.

ಶಾರದಾವಿಲಾಸ ಬಿ.ಇಡಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಚ್.ಎನ್. ವಿಶ್ವನಾಥ್ ಮಾತನಾಡಿ, ಇತರರಿಗೆ ಶಿಕ್ಷಣ ಕಲಿಸುವುದು ಒಂದು ಕಲೆ. ಅದನ್ನು ಸಿದ್ಧಿಸಿಕೊಳ್ಳಲು ಶ್ರಮಿಸಬೇಕು. ವೃತ್ತಿಯ ಬಗ್ಗೆ ಅಪಾರ ಗೌರವದ ಜೊತೆಗೆ, ಕಲಿಸುವ ಕ್ಷಣವನ್ನು ಸಂತೋಷದಿಂದ ಅನುಭವಿಸಬೇಕು. ಮಾಡುವ ಕೆಲಸದಲ್ಲಿ ಬದ್ಧತೆ ಇರಬೇಕು ಎಂದರು.

ವ್ಯಕ್ತಿಗಳ ನಡುವೆ ಧನಾತ್ಮಕ ಸಂಬಂಧ ಸೃಷ್ಟಿಸುವಂತ ನಡವಳಿಕೆ ನಮ್ಮದಾಗಬೇಕು. ವಿದ್ಯಾರ್ಥಿಗಳನ್ನು ತಮ್ಮ ಪ್ರಭಾವ ವಲಯದತ್ತ ಆಕರ್ಷಿಸುವ ಜ್ಞಾನ, ಕೌಶಲ, ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಪುರಾತತ್ವ, ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಎ. ದೇವರಾಜು, ಕಾವಾ ಆಡಳಿತಾಧಿಕಾರಿ ನಿರ್ಮಲಾ ಮಠಪತಿ, ಶೈಕ್ಷಣಿಕ ಸಂಯೋಜಕ ಎ.ಪಿ. ಚಂದ್ರಶೇಖರ್, ಐಕ್ಯುಎಸಿ ಸಂಯೋಜಕ ಡಾ.ಜೆ. ಲೋಹಿತ್ ಪಾಲ್ಗೊಂಡಿದ್ದರು.