ಕಲೆ ವ್ಯಾಪಾರವಲ್ಲ ಸಮಾಜದ ಪ್ರಜ್ಞೆ

| Published : Feb 03 2024, 01:50 AM IST

ಸಾರಾಂಶ

ಪಾಶ್ಚಾತ್ಯ ದೇಶಗಳಲ್ಲಿ ರಂಗಭೂಮಿ ಸೇರಿದಂತೆ ಪ್ರದರ್ಶಕ ಕಲೆಗಳಿಗೆ ಹೆಚ್ಚು ಮಹತ್ವವನ್ನು ಪ್ರೇಕ್ಷಕರು ನೀಡುತ್ತಾರೆ. ಅದರಂತೆ ನಮ್ಮಲ್ಲಿಯೂ ಕಲೆಗಳ ಬಗ್ಗೆ ಆಸಕ್ತಿ, ಪ್ರೋತ್ಸಾಹ ಹೆಚ್ಚಬೇಕು. ಸಿನಿಮಾಗಿಂತಲೂ ಹೆಚ್ಚು ಹಣವನ್ನು ರಂಗಕಲೆಗಳಿಗೆ ಪಾಶ್ಚಾತ್ಯ ದೇಶಗಳಲ್ಲಿ ವ್ಯಯಿಸುತ್ತಾರೆ. ಹೆಚ್ಚು ಜನರು ರಂಗಮಂದಿರಗಳಿಗೆ ಬರುತ್ತಾರೆ. ಆದರೆ, ಭಾರತದಲ್ಲಿ ವಿರುದ್ಧವಾಗಿದೆ

- ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ----ಕನ್ನಡಪ್ರಭ ವಾರ್ತೆ ಮೈಸೂರು

ಕಲೆ ವ್ಯಾಪಾರವಲ್ಲ. ಅದೊಂದು ಸಮಾಜದ ಪ್ರಜ್ಞೆ ಹಾಗೂ ಎಚ್ಚರವಾಗಿ ಕೆಲಸ ಮಾಡುತ್ತದೆ. ಜ್ಞಾನ ಹಾಗೂ ಆಲೋಚನಾ ವಿಧಾನವನ್ನು ಕಲಿಸುತ್ತದೆ. ಕಲಾ ಶಿಕ್ಷಣವನ್ನು ಪಡೆಯಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ತಿಳಿಸಿದರು.

ನಗರದ ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜಿನಲ್ಲಿ ಗುಬ್ಬಿ ವೀರಣ್ಣ ಪೀಠ, ಭಾರತೀಯ ರಂಗಶಿಕ್ಷಣ ಕೇಂದ್ರ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಸಹಯೋಗದಲ್ಲಿ ಆಯೋಜಿಸಿರುವ ರಂಗಭೂಮಿ ಮತ್ತು ರಂಗಭೂಮಿ ಪೂರಕ ಕಲೆಗಳ ಉಪನ್ಯಾಸ ಮಾಲಿಕೆಯನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಪಾಶ್ಚಾತ್ಯ ದೇಶಗಳಲ್ಲಿ ರಂಗಭೂಮಿ ಸೇರಿದಂತೆ ಪ್ರದರ್ಶಕ ಕಲೆಗಳಿಗೆ ಹೆಚ್ಚು ಮಹತ್ವವನ್ನು ಪ್ರೇಕ್ಷಕರು ನೀಡುತ್ತಾರೆ. ಅದರಂತೆ ನಮ್ಮಲ್ಲಿಯೂ ಕಲೆಗಳ ಬಗ್ಗೆ ಆಸಕ್ತಿ, ಪ್ರೋತ್ಸಾಹ ಹೆಚ್ಚಬೇಕು. ಸಿನಿಮಾಗಿಂತಲೂ ಹೆಚ್ಚು ಹಣವನ್ನು ರಂಗಕಲೆಗಳಿಗೆ ಪಾಶ್ಚಾತ್ಯ ದೇಶಗಳಲ್ಲಿ ವ್ಯಯಿಸುತ್ತಾರೆ. ಹೆಚ್ಚು ಜನರು ರಂಗಮಂದಿರಗಳಿಗೆ ಬರುತ್ತಾರೆ. ಆದರೆ, ಭಾರತದಲ್ಲಿ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ಕಲೆಗಳನ್ನು ಕಲಿಸುವ ಅಧ್ಯಯನ ಕೇಂದ್ರ, ಕಾಲೇಜುಗಳಿಗೆ ಸೇರುವ ಆಸಕ್ತರ ಸಂಖ್ಯೆಯೂ ದೇಶದ ಶಿಕ್ಷಣ ಕೇಂದ್ರಗಳಲ್ಲಿ ಕಡಿಮೆಯಾಗುತ್ತಿದೆ. ಅವರಲ್ಲಿಯೂ ಎಲ್ಲರೂ ಕಲಾವಿದರಾಗಬೇಕೆಂದೇ ಬಯಸುತ್ತಾರೆ. ರಂಗ ತಂತ್ರಜ್ಞರು, ಸಂಗೀತ ನಿರ್ದೇಶಕರು ಆಗುವತ್ತಲೂ ಯೋಚಿಸಬೇಕು. ಪ್ರತಿಭೆಗೆ ಪೂರಕವಾದ ಕೌಶಲಗಳನ್ನು ಅಧ್ಯಯನ ಕೇಂದ್ರದಲ್ಲಿ ಕಲಿಯಬೇಕು ಎಂದು ಅವರು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ರಂಗಭೂಮಿಯು ಎಲ್ಲಾ ಸಾಂಸ್ಕೃತಿಕ ಕಲೆಗಳನ್ನು ಪೊರೆಯುವ ತಾಯಿಯಾಗಿದೆ. ಸಂಗೀತ, ನೃತ್ಯ, ಜಾನಪದ, ಸಾಹಿತ್ಯ ಎಲ್ಲವನ್ನೂ ಒಳಗೊಂಡಿರುತ್ತದೆ. ಎಲ್ಲಾ ಕಲೆಗಳೊಂದಿಗೆ ಸಮನ್ವಯ ಸಾಧಿಸುವ ಈ ಅನ್ವಯಿಕ ಕಲೆಯಾದ ರಂಗಭೂಮಿಯಲ್ಲಿ ಸಾಂಸ್ಕೃತಿಕ ಮನಸ್ಸುಗಳು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ, ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿಟಾ ವಿಮ್ಲಾ ಬ್ರ್ಯಾಗ್ಸ್, ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಭಾರತೀಯ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಎಸ್. ರಾಮನಾಥ, ರಂಗ ತಂತ್ರಜ್ಞ ಅರಸೀಕೆರೆ ಯೋಗಾನಂದ ಇದ್ದರು.

ಸ್ವಾತಂತ್ರ್ಯ ಹೋರಾಟದಲ್ಲೂ ಪ್ರದರ್ಶಕ ಕಲೆಗಳ ಕಲಾವಿದರು ಜಾಗೃತಿ ಮೂಡಿಸಿದ್ದಾರೆ. ಕಲೆಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದಿಂದ ಎದುರಾಗಿರುವ ಸವಾಲುಗಳ ಮಧ್ಯೆ ನಮ್ಮ ಅಭಿಜಾತ ಹಾಗೂ ಜಾನಪದ ಕಲೆಗಳನ್ನು ಉಳಿಸಿಕೊಳ್ಳಬೇಕಿದೆ.

- ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಕುಲಪತಿ, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ

ಮೊಬೈಲ್ ನಲ್ಲಿ ಸಿಗುವ ಮಾಹಿತಿಯೇ ಜ್ಞಾನವೆಂದು ಪ್ರಸ್ತುತ ಪೀಳಿಗೆಯು ಅಂದುಕೊಂಡಿದೆ. ಸಾಹಿತ್ಯ, ಕಲೆ ಹಾಗೂ ರಂಗಭೂಮಿಗಳ ಕಡೆಗೆ ಗಮನ ಹರಿಸಬೇಕು. ವಿಶ್ವವಿದ್ಯಾನಿಲಯದ ಓದಿನ ಜೊತೆಗೆ ತೊಡಗಿಸಿಕೊಳ್ಳಬೇಕು. ಅದು ನಮ್ಮನ್ನು ಗಟ್ಟಿ ಮಾಡುತ್ತದೆ.

- ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಜಂಟಿ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ