ಸಾರಾಂಶ
ಉಡುಪಿ ಜಿಲ್ಲಾ ಶ್ರೀ ವಿಶ್ವಕರ್ಮ ಎಜುಕೇಶನಲ್ ಟ್ರಸ್ಟ್ ವತಿಯಿಂದ ೨೦೨೩-೨೪ನೇ ಸಾಲಿಗೆ 163 ವಿದ್ಯಾರ್ಥಿಗಳಿಗೆ 7.26 ಲಕ್ಷ ರು.ಗಳ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ಶ್ರೀ ವಿಶ್ವಕರ್ಮ ಎಜುಕೇಶನಲ್ ಟ್ರಸ್ಟ್ ವತಿಯಿಂದ ೨೦೨೩-೨೪ನೇ ಸಾಲಿಗೆ 163 ವಿದ್ಯಾರ್ಥಿಗಳಿಗೆ 7.26 ಲಕ್ಷ ರು.ಗಳ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನವನ್ನು ನಗರದ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಿತರಿಸಲಾಯಿತು.ಟ್ರಸ್ಟ್ ಅಧ್ಯಕ್ಷ ಬಿ.ಎ. ಆಚಾರ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಮಧೂರು ಶ್ರೀ ಕಾಳಿಕಾಂಬಾ ಮಠದ ಅಧ್ಯಕ್ಷ ಪ್ರಭಾಕರ ಆಚಾರ್ಯ ಕೋಟೆಕಾರ್ ಉದ್ಘಾಟಿಸಿದರು. ಧಾರವಾಡದ ಡಾ. ಗುರುನಾಥ ಬಡಿಗೇರ್ ಮತ್ತು ಇಸ್ರೋದ ತಾಂತ್ರಿಕ ಸಹಾಯಕ ರಮೇಶ್ ಆಚಾರ್ಯರು ಮುಖ್ಯ ಅತಿಥಿಗಳಾಗಿದ್ದರು.
ಬಂಗಾಳ ಮೂಲದ ಬುಡಕಟ್ಟು ಜನಾಂಗದ ಸಮಾಜಕಾರ್ಯದ ವಿದ್ಯಾರ್ಥಿನಿ ಲಕ್ಷ್ಮಿನ್ ಪೂರ್ಜಾಗೆ ೨೦೨೩-೨೪ನೇ ಸಾಲಿನ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಡಾಕ್ಟರೇಟ್ ಪಡೆದಿರುವ ಡಾ. ಸುಷ್ಮಾ ಶಿವಪ್ರಸಾದ್ ನಿಟ್ಟೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಜಿ.ರಾಮಕೃಷ್ಣ ಆಚಾರ್ಯರನ್ನು ಸನ್ಮಾನಿಸಲಾಯಿತು.ಶೈಕ್ಷಣಿಕ ವರ್ಷದಲ್ಲಿ ಅಗಲಿದ ಪೋಷಕರಾಗಿದ್ದ ಮಾಧವ ಕೆ. ಪಡುಬಿದ್ರಿ, ಡಾ. ಶಶಿಕಲಾ ಎಚ್.ಎಂ., ಟ್ರಸ್ಟ್‌ನ ಕಾರ್ಯದರ್ಶಿ ಗಣಪತಿ ಆಚಾರ್ಯ ಹಾಗೂ ಶ್ಯಾಮರಾಯ ಆಚಾರ್ಯ ಬಾಳ್ಕಟ್ಟ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಟ್ರಸ್ಟ್‌ನ ಹಿರಿಯ ವಿದ್ಯಾರ್ಥಿಗಳಾದ ಕಿರಣ ಕುಮಾರ್ ಕಾಡೂರು ಹಾಗೂ ಶ್ರೀನಿಧಿ ಆಚಾರ್ಯ ಶುಭಾಶಂಸನೆಗೈದರು. ಟಿ.ಜಿ.ಆಚಾರ್ಯ ಹೆಬ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳ ಪಟ್ಟಿಯನ್ನು ಉಷಾ ಬಿ. ಆಚಾರ್ಯ ಹಾಗೂ ಪ್ರಕಾಶ್ ಆಚಾರ್ಯ ನೇರಂಬಳ್ಳಿ ವಾಚಿಸಿದರು. ಗೀತಾಚಂದ್ರ ಹಾಗೂ ಡಾ. ಪ್ರತಿಮಾ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಪ್ರೊ.ಭಾಸ್ಕರ ಆಚಾರ್ಯ ವಂದಿಸಿದರು.ಇದೇ ಸಂದರ್ಭ ಪೂರ್ಣಿಮಾ ಉದಯ ಆಚಾರ್ಯ ಕರ್ಜೆ ಹಾಗೂ ಪ್ರಜ್ಞಾ ಆಚಾರ್ಯ ಚಿತ್ರದುರ್ಗ ಅವರ ಚಿತ್ರಕಲಾಕೃತಿಗಳ ಪ್ರದರ್ಶನವನ್ನು ಉಡುಪಿಯ ಚಿತ್ರಕಲಾ ಮಂದಿರ ಕಲಾವಿದ್ಯಾಲಯದ ಮುಖ್ಯಸ್ಥ ಡಾ. ನಿರಂಜನ್ ಉದ್ಘಾಟಿಸಿದರು.
ಮಧ್ಯಾಹ್ನ ಪೋಷಕರ ಸಮಾವೇಶ ಜರುಗಿತು. ಉಡುಪಿ ಚಿನ್ನ-ಬೆಳ್ಳಿ ಕೆಲಸಗಾರರ ಸಂಘ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ಸಮಾವೇಶದ ಮುಖ್ಯ ಅತಿಥಿಯಾಗಿದ್ದರು.