ರಾಮನಗರ: ಮಂಚನಬೆಲೆ ಜಲಾಶಯದ ಬಲದಂಡೆ ನಾಲೆಯಲ್ಲಿ ನೀರು ಹರಿಯಲು ತೊಡಕಾಗಿರುವ ಸ್ಥಳವನ್ನು ಶಾಸಕ ಇಕ್ಬಾಲ್ ಹುಸೇನ್ ರವರು ಎಂಜಿನಿಯರ್ ಗಳೊಂದಿಗೆ ಗುರುವಾರ ವೀಕ್ಷಣೆ ಮಾಡಿದರು.
ಮಂಚನಬೆಲೆ ಜಲಾಶಯದ ಸನಿಹದ ಗುಡ್ಡದಲ್ಲಿ ಹಾದು ಹೋಗಿರುವ ಬಲದಂಡೆ ನಾಲೆ ಮೇಲೆ ಹಾಕಿರುವ ಸ್ಲ್ಯಾಬ್ ಗಳು ಮುರಿದು ಬಿದ್ದಿರುವುದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ನಾಲೆಯ ಸ್ಥಿತಿಗತಿ ವೀಕ್ಷಿಸಿದರು.ಜಲಾಶಯದಿಂದ ಸುಮಾರು 400 ಮೀಟರ್ ವರೆಗಿನ ಬಲದಂಡೆ ನಾಲೆ ದುಸ್ಥಿತಿಯಲ್ಲಿದ್ದು, ನಾಲೆಯೊಳಗೆ ಸ್ಲ್ಯಾಬ್ ಗಳು, ಕಲ್ಲು ಮಣ್ಣು ತುಂಬಿಕೊಂಡಿದೆ. ಅದನ್ನು ತೆರವುಗೊಳಿಸಿ ನಾಲೆಯನ್ನು ದುರಸ್ಥಿ ಪಡಿಸಿದ ಬಳಿಕವಷ್ಟೇ ನೀರು ಸರಾಗವಾಗಿ ಹರಿಯಲಿದ್ದು, ಈ ಸಂಬಂಧ ಶಾಸಕರು ಮಂಚನಬೆಲೆ ಯೋಜನಾ ವಿಭಾಗದ ಎಇಇ ಉಮೇರಾ ಅವರಿಗೆ ಕೆಲ ಸೂಚನೆಗಳನ್ನು ನೀಡಿದರು.
ಈಗಾಗಲೇ ಕಸಬಾ ಹೋಬಳಿ ವ್ಯಾಪ್ತಿಯ ರೈತರ ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲು ಎಡದಂಡೆ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಅದೇ ರೀತಿಯಲ್ಲಿ ಬಲದಂಡೆ ನಾಲೆಯನ್ನು ದುರಸ್ಥಿ ಪಡಿಸಿ ಕೂಡಲೇ ನೀರು ಹರಿಸುವಂತೆ ಶಾಸಕರು ಎಂಜಿನಿಯರ್ ಗೆ ತಾಕೀತು ಮಾಡಿದರು.ಈ ಬಲ ಮತ್ತು ಎಡ ದಂಡೆ ನಾಲೆಗಳನ್ನು ಸುಮಾರು 70 ಲಕ್ಷ ರುಪಾಯಿ ವೆಚ್ಚದಲ್ಲಿ ದುರಸ್ಥಿ ಪಡಿಸಲಾಗಿದ್ದು, ಈಗಾಗಲೇ ಎಡದಂಡೆ ನಾಲೆಯಲ್ಲಿ ಸುಮಾರು 20 ಕಿ.ಮೀ.ವರೆಗೆ ನೀರು ಹರಿಯುತ್ತಿದೆ. ಬಲದಂಡೆ ನಾಲೆಯಲ್ಲಿ ಸುಮಾರು 400 ಮೀಟರ್ ವರೆಗೆ ಸಮಸ್ಯೆ ಎದುರಾಗಿದ್ದು, ಅದನ್ನು ಸರಿಪಡಿಸಿದ ಬಳಿಕವಷ್ಟೇ ಅಡೆತಡೆಯಿಲ್ಲದೆ ನಾಲೆಯಲ್ಲಿ ನೀರು ಹರಿಯಲಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ಸಾಗುವಳಿ ಸಮಿತಿ ಸದಸ್ಯ ಕೆ.ರವಿ, ಕೆಡಿಪಿ ಸದಸ್ಯ ಮುಕುಂದ, ಯುವ ಕಾಂಗ್ರೆಸ್ ಮುಖಂಡರಾದ ಗುರುಪ್ರಸಾದ್ , ರಂಜಿತ್ ಮತ್ತಿತರರು ಹಾಜರಿದ್ದರು.
------------------------
4ಕೆಆರ್ ಎಂಎನ್ 5.ಜೆಪಿಜಿಮಂಚನಬೆಲೆ ಜಲಾಶಯ ಸಮೀಪ ಬಲದಂಡೆ ನಾಲೆಯನ್ನು ಶಾಸಕ ಇಕ್ಬಾಲ್ ಹುಸೇನ್ ವೀಕ್ಷಣೆ ಮಾಡಿದರು.
-------------------------