ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಮಂಡಲ ಅಧ್ಯಕ್ಷರಾಗಿ ಹೆಚ್ಚಿನ ಜವಾಬ್ದಾರಿ ನೀಡಲಿದ್ದು ಮನೆ-ಮನೆಗೂ ಹೋಗಿ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬುವ ಮೂಲಕ ಪಕ್ಷ ಸಂಘಟಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ತಿಳಿಸಿದರು. ನಗರದ ಗುರುಕುಲಾನಂದಾಶ್ರಮದಲ್ಲಿ ನಡೆದ ಬಿಜೆಪಿ ನೂತನ ಮಂಡಲ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತಿಯ ಜನತಾ ಪಕ್ಷದ ಸಂವಿಧಾನದ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ಮಂಡಲ, ಜಿಲ್ಲೆ ಹಾಗೂ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವುದರ ಮೂಲಕ ಪಕ್ಷದ ಸ್ವರೂಪ ರೂಪಿಸುವ ಕೆಲಸವನ್ನು ಮಾಡಲಾಗುತ್ತದೆ. ಈಗ ತುಮಕೂರು ಜಿಲ್ಲೆಯ ಎಲ್ಲ ಮಂಡಲಗಳಲ್ಲಿಯೂ ಸದಸ್ಯತ್ವವನ್ನು ವಿಸ್ತರಿಸಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಕೇಂದ್ರದಲ್ಲಿ ಕಳೆದ ಹನ್ನೊಂದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಸಿದ ಆಡಳಿತ ಮಾದರಿಯಾಗಿದ್ದು ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಸಾಧನೆಯನ್ನು ಮಾಡಲಾಗಿದೆ. ಈ ಸಾಧನೆಯನ್ನು ಮನೆ-ಮನೆಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದು ತಿಳಿಸಿದರು.ಮಾಜಿ ಸಚಿವ ಬಿ.ಸಿ. ನಾಗೇಶ್ ಮಾತನಾಡಿ ನೂತನ ಮಂಡಲ ಅಧ್ಯಕ್ಷರುಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ತಾಲೂಕಿನಲ್ಲಿ ಬಿಜೆಪಿ ಬೆಳಸಿ ಮುನ್ನಡೆಸಬೇಕು. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅಲ್ಲಿ ಹಿರಿಯರ, ಮಾಜಿ ಅಧ್ಯಕ್ಷರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಯಶಸ್ವಿಯಾಗಿ ಪಕ್ಷ ಸಂಘಟನೆ ಮಾಡಬೇಕು. ನಮ್ಮ ಪಕ್ಷದಲ್ಲಿ ಕಾರ್ಯಕರ್ತರೇ ಸುಪ್ರೀಂ. ಶೀಘ್ರದಲ್ಲಿಯೇ ಎಲ್ಲ ಸಮಿತಿಗಳೂ ರಚನೆಯಾಗಲಿದ್ದು ಎಲ್ಲರ ಜವಾಬ್ದಾರಿಯೂ ಹೆಚ್ಚಲಿದೆ. ಪ್ರತಿ ಕಾರ್ಯಕರ್ತರೂ ನಾನೇ ಅಧ್ಯಕ್ಷ ಎಂಬ ಭಾವನೆಯೊಂದಿಗೆ ಕೆಲಸ ಮಾಡಬೇಕು. ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸೀಟುಗಳನ್ನು ಗೆಲ್ಲುವಂತೆ ಪಕ್ಷ ಸಂಘಟಿಸಬೇಕು ಎಂದು ತಿಳಿಸಿದರು.
ಪಕ್ಷದ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಪೂರ್ಣಿಮಾ ಪ್ರಕಾಶ್ ಮಾತನಾಡಿ, ತುಮಕೂರು ಜಿಲ್ಲೆಯ ಮಂಡಲ ಅಧ್ಯಕ್ಷರ ಚುನಾವಣೆಯನ್ನು ತಿಪಟೂರಿನಿಂದಲೇ ಪ್ರಥಮವಾಗಿ ಪ್ರಾರಂಭಿಸಲಾಗಿದ್ದು ಜಿಲ್ಲೆಯ ಎಲ್ಲ ಮಂಡಲಗಳಲ್ಲೂ ಆಯ್ಕೆ ಮಾಡಲಾಗುತ್ತದೆ. ನಮ್ಮ ಪಕ್ಷದಲ್ಲಿ ಯಾವುದೇ ಹುದ್ದೆ ಅಥವಾ ಸಂಬಳ ಬರುವ ಅಧಿಕಾರವಿಲ್ಲ. ಕೇವಲ ಜವಾಬ್ದಾರಿ ಮಾತ್ರವಿರುತ್ತದೆ. ಪಕ್ಷವು ಬೂತ್ ಮಟ್ಟದಲ್ಲಿಯೂ ಕೆಲಸ ಮಾಡಲು ಕಾರ್ಯಕರ್ತರನ್ನು ನೇಮಿಸಲಿದ್ದು ಅವರ ಕಾರ್ಯವೈಖರಿಯನ್ನು ಕಾಲ್‌ಸೆಂಟರ್ ಮೂಲಕ ಪರಿಶೀಲಿಸುವ ಕೆಲಸ ನಿರಂತರವಾಗಿ ನಡೆಯುತ್ತದೆ. ಸಂಘಟನೆ ವಿಚಾರ ಬಂದಾಗ ರಾಜಕೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ನಮ್ಮ ಪಕ್ಷ ಮಾಡುತ್ತದೆ. ನೂತನ ಅಧ್ಯಕ್ಷರುಗಳು ಸ್ವಿಚ್ಛೆಯಿಚಿದ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ನೂತನ ನಗರ ಅಧ್ಯಕ್ಷ ಜಗದೀಶ್ ಹಳೇಪಾಳ್ಯ ಹಾಗೂ ಗ್ರಾಮಾಂತರ ಅಧ್ಯಕ್ಷ ಸತೀಶ್ ಚಿಕ್ಕಮಾರ್ಪನಹಳ್ಳಿ ಇವರಿಗೆ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ಎಸ್‌ಟಿ ಮೋರ್ಚಾದ ಶಂಕರಪ್ಪ ಆಯರಹಳ್ಳಿ, ಮಾಜಿ ಅಧ್ಯಕ್ಷ ಸುರೇಶ್, ಮುಖಂಡ ಬಿಸಲೇಹಳ್ಳಿ ಜಗದೀಶ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.