ಸಾರಾಂಶ
ಅಯೋಧ್ಯಾ ರಾಮ ಮಂದಿರದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ದಿನಾ ನಡೆಯುತ್ತಿವೆ. 48 ದಿನಗಳ ಮಂಡಲೋತ್ಸವದ ಅಂಗವಾಗಿ ಭಾನುವಾರ ಉತ್ತರ ಭಾರತದಲ್ಲಿ ಕಾಣಸಿಗದ, ಕರಾವಳಿ ಪ್ರದೇಶದ ದೇವಳಗಳಲ್ಲಿರುವಂತೆ ಅಟ್ಟೆ ಪ್ರಭಾವಳಿಯಲ್ಲಿ ಶ್ರೀರಾಮದೇವರ ಉತ್ಸವ ಮೂರ್ತಿಯನ್ನು ಅಲಂಕರಿಸಿ ಶ್ರೀಗಳು ಉತ್ಸವ ನಡೆಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಅಯೋಧ್ಯಾ ರಾಮ ಮಂದಿರದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲೋತ್ಸವದ ಅಂಗವಾಗಿ ನಿತ್ಯ ಸಂಜೆ ರಾಮನಿಗೆ ಪಲ್ಲಕ್ಕಿ ಉತ್ಸವ, ವಸಂತ ಪೂಜೆಗಳನ್ನು ನಡೆಸಲಾಗುತ್ತಿದೆ.ಈ ಪೂಜೆಯಲ್ಲಿ ಉತ್ತರ ಭಾರತದಲ್ಲಿ ಕಾಣಸಿಗದ, ಕರಾವಳಿ ಪ್ರದೇಶದ ದೇವಳಗಳಲ್ಲಿರುವಂತೆ ಅಟ್ಟೆ ಪ್ರಭಾವಳಿಯಲ್ಲಿ ಶ್ರೀರಾಮದೇವರ ಉತ್ಸವ ಮೂರ್ತಿಯನ್ನು ಅಲಂಕರಿಸಿ ಶ್ರೀಗಳು ಉತ್ಸವ ನಡೆಸುತ್ತಿರುವುದು ವಿಶೇಷವಾಗಿದೆ.‘ಶೋಭಾ ರಾಮಾಯಣ’ ಬಿಡುಗಡೆ:
ಕನ್ನಡ ತುಳು ಸಾಹಿತ್ಯ ವೇದಿಕೆ ಉಡುಪಿ ಜಿಲ್ಲೆ ವಾಟ್ಸಾಪ್ ಬಳಗದಲ್ಲಿ ಪ್ರಸಾರವಾದ, ಶೋಭಾ ಹರಿಪ್ರಸಾದ್ ಅವರು ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ಆಧಾರವಾಗಿರಿಸಿ, ತನ್ನದೇ ಚಿಂತನೆ ಅಭಿಪ್ರಾಯಗಳನ್ನು ಅಳವಡಿಸಿ ಬರೆದ 3991 ಭಾಮಿನೀ ಷಟ್ಪದಿಗಳನ್ನು ಹೊಂದಿದ ‘ಶೋಭಾ ರಾಮಾಯಣ’ ಗ್ರಂಥವನ್ನು ರಾಮ ಪ್ರಾಣ ಪ್ರತಿಷ್ಠೆಯಂದು ಬಿಡುಗಡೆ ಮಾಡಲಾಯಿತು.ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಅವರ ಪುತ್ರ ಅನ್ವಿತ್ ಹರಿಪ್ರಸಾದ್ ಗ್ರಂಥವನ್ನು ಬಿಡುಗಡೆ ಮಾಡಿದರು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಪಾಲ್ಗೊಂಡು ಮಾತನಾಡಿ, ಭಗವಂತನ ಕೆಲಸ ಅವನ ಮಹಿಮೆಯಿಂದಲೇ ಅನುಗ್ರಹಿತವಾಗುತ್ತದೆ. ಶೋಭಾ ಅವರು ನಿರಂತರವಾಗಿ ವಾಟ್ಸಾಪ್ ಬಳಗದಲ್ಲಿ ಧಾರಾವಾಹಿಯಾಗಿ ಉತ್ತರಕಾಂಡ ಸಹಿತ ಬರೆದ ಸಂಪೂರ್ಣ ರಾಮಾಯಣ ಮೂಲಸಂಕಲ್ಪಗಳಿಗೆ ಪೂರಕವಾಗಿ ಯಾವುದೇ ಗೊಂದಲಗಳಿಲ್ಲದೇ ಸಿದ್ಧವಾಗಿದೆ ಎಂದು ಶ್ಲಾಘಿಸಿದರು.
ಶ್ರೀ ದೇವಳದ ಆಡಳಿತಾಧ್ಯಕ್ಷ ಬಿ.ಶ್ರೀನಿವಾಸ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ವಾಟ್ಸಾಪ್ ವೇದಿಕೆಯ ಸದಸ್ಯೆ ಜಯಶ್ರೀ ಭಟ್ ಗ್ರಂಥಾವಲೋಕನ ಮಾಡಿಸಿದರು.ಸಾಹಿತ್ಯ ಸಂಘಟಕ ಭುವನ ಪ್ರಸಾದ ಹೆಗ್ಡೆ ಮಣಿಪಾಲ, ದೇವಳದ ಆಡಳಿತ ಮೋಕ್ತೇಸರ ಡಾ.ಜಯರಾಮ ಶೆಟ್ಟಿಗಾರ್, ಸಾಹಿತಿ ಗಿರೀಶ್ ಶೆಟ್ಟಿಗಾರ್ ವಿಟ್ಲ . ಹರಿಪ್ರಸಾದ್ ದಂಪತಿ ವೇದಿಕೆಯಲ್ಲಿ ಇದ್ದರು. ಪಿ.ಸಚ್ಚಿದಾನಂದ ನಾಯಕ್ ಬೆಲ್ಪತ್ರೆ ಸ್ವಾಗತಿಸಿದರು, ಚೇಂಪಿ ದಿನೇಶ ಆಚಾರ್ಯ ನಿರೂಪಿಸಿದರು. ಪದ್ಮನಾಭ ಪೂಜಾರಿ ನೇರಂಬೋಳು ವಂದಿಸಿದರು.