ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನಿಂದ ಸಂಚರಿಸುವ ನಗರ ಸಾರಿಗೆ ಹೊರತಾದ ಎಲ್ಲ ಖಾಸಗಿ ಬಸ್‌ಗಳು ಕಡ್ಡಾಯವಾಗಿ ಬಾಗಿಲು ಅಳವಡಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಗಡುವು ವಿಧಿಸಲಾಗಿದೆ.ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧ್ಯಕ್ಷರಾದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.
ಪ್ರಯಾಣಿಕರ ಸುರಕ್ಷತೆ ಸಲುವಾಗಿ ಬಸ್‌ಗಳು ಸಂಚರಿಸುವ ವೇಳೆ ಬಾಗಿಲು ಹಾಕಿಕೊಳ್ಳುವುದು ಕಡ್ಡಾಯ. ಈ ಬಗ್ಗೆ ಹಲವು ಬಾರಿ ಸೂಚನೆ ನೀಡಿದರೂ ಪಾಲನೆಯಾಗುತ್ತಿಲ್ಲ. ಹೀಗಾಗಿ ತಕ್ಷಣದಿಂದಲೇ ಬಾಗಿಲು ಅಳವಡಿಸಲು ಎಲ್ಲ ಖಾಸಗಿ ಬಸ್‌ಗಳು ಕ್ರಮ ಕೈಗೊಳ್ಳಬೇಕು. ನಗರ ಸಾರಿಗೆ ಬಸ್‌ಗಳಿಗೆ ಡೋರ್ ಅಳವಡಿಕೆ ಕುರಿತಂತೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಉಳಿದಂತೆ ಎಲ್ಲ ಖಾಸಗಿ ಬಸ್‌ಗಳು ಡೋರ್ ಅಳವಡಿಕೆಯನ್ನು ಡಿ.10ರೊಳಗೆ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ತಪ್ಪಿದಲ್ಲಿ ಸಾರಿಗೆ ನಿಯಮದ ಉಲ್ಲಂಘನೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಜಿಪಿಎಸ್ ಅಳವಡಿಕೆಗೆ ಸೂಚನೆ:
ಮಂಗಳೂರಲ್ಲಿ ಸ್ಮಾರ್ಟ್‌ಸಿಟಿಯ ಕಮಾಂಡಿಂಗ್ ಕಂಟ್ರೋಲ್ ಕೇಂದ್ರ ಇದೆ. ಇದರ ಸುಪರ್ದಿಯಲ್ಲಿ ಖಾಸಗಿ ಬಸ್‌ಗಳು ಕೂಡ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದೆ. ಪಿಎಸ್ ಅಳವಡಿಸಿ ಸ್ಮಾರ್ಟ್‌ಸಿಟಿ ಕಂಟ್ರೋಲ್ ರೂಂ ಜೊತೆ ಸಂಪರ್ಕ ಸಾಧಿಸಬೇಕು. ಇದರಿಂದ ಬಸ್‌ಗಳು ಎಲ್ಲೆಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿ ಸುಲಭದಲ್ಲಿ ಸಿಗುತ್ತದೆ. ಇದು ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿರ್ದೇಶನ ನೀಡಿದರು.ಖಾಸಗಿ ಹಾಗೂ ಸರ್ಕಾರಿ ಸಾರಿಗೆಗಳಲ್ಲಿ ಅಂಧರಿಗೆ ಅನುಕೂಲವಾಗಲು ಪ್ರತಿ ನಿಲ್ದಾಣದ ಅನೌನ್ಸ್‌ಮೆಂಟ್ ವ್ಯವಸ್ಥೆಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಪ್ರೀಪೇಯ್ಡ್ ಆಟೋ ಬಗ್ಗೆ ಪ್ರತ್ಯೇಕ ಸಭೆ:ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರಾತ್ರಿ ವೇಳೆ ಪ್ರೀಪೇಯ್ಡ್ ಆಟೋರಿಕ್ಷಾ ಸಂಚಾರ ಇಲ್ಲದೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ಕೆಸಿಸಿಐ ಪ್ರತಿನಿಧಿಯೊಬ್ಬರು ಪ್ರಸ್ತಾಪಿಸಿದರು. ಈ ಬಗ್ಗೆ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ರೈಲ್ವೆ ಅಧಿಕಾರಿಗಳು, ಆಟೋರಿಕ್ಷಾ ಸಂಘಟನೆಗಳು ಹಾಗೂ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳನ್ನು ಒಳಗೊಂಡಂತೆ ಪ್ರತ್ಯೇಕ ಸಭೆ ಕರೆಯುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಆನಂದ್, ಜಿಲ್ಲಾ ಎಸ್ಪಿ ಯತೀಶ್, ಸಂಚಾರಿ ಡಿಸಿಪಿ ದಿನೇಶ್ ಕುಮಾರ್, ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಇದ್ದರು. ಬಾಕ್ಸ್----ಕೆಎಸ್ಸಾರ್ಟಿಸಿ ಹೊಸ ರೂಟ್ ಪರವಾನಿಗೆಗೆ ಖಾಸಗಿ ಬಸ್ ಮಾಲೀಕರ ವಿರೋಧ ಮಂಗಳೂರು-ಕಾರ್ಕಳ, ಬಜಪೆ-ತಲಪಾಡಿ ಸೇರಿದಂತೆ ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆ ನೀಡುವಂತೆ ಕೆಎಸ್ಆರ್‌ಟಿಸಿ ಅಧಿಕಾರಿಗಳು ಬೇಡಿಕೆ ಮುಂದಿಟ್ಟಿದ್ದಾರೆ. ಇದಕ್ಕೆ ಖಾಸಗಿ ಬಸ್ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಖಾಸಗಿ ಬಸ್ ಮಾಲೀಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಬಳಿ 15 ದಿನಗಳ ಗಡುವು ಕೇಳಿದ್ದಾರೆ.
ಸಾರ್ವಜನಿಕ ಬೇಡಿಕೆ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ವಿವಿಧ ಮಾರ್ಗಗಳಲ್ಲಿ ಈ ಹಿಂದೆ 56 ಸಿಂಗಲ್ ಟ್ರಪ್‌ಗಳಿಗೆ ಪರವಾನಿಗೆ ಕೇಳಿತ್ತು. ಕೋರ್ಟ್ ತಡೆಯ ಕಾರಣ ಪರವಾನಿಗೆ ಸಿಕ್ಕಿಲ್ಲ. ಬಳಿಕ 8 ಟ್ರಿಪ್‌ಗಳ ಬೇಡಿಕೆಯಲ್ಲಿ ಕೇವಲ 3 ಟ್ರಿಪ್‌ಗೆ ಅವಕಾಶ ನೀಡಲಾಗಿದೆ. ಸ್ಟೇಟ್‌ಬ್ಯಾಂಕ್‌ನಿಂದ ಬಸ್ ಓಡಾಟಕ್ಕೆ ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯದ ತಡೆಯಾಜ್ಞೆ ಹಾಗೂ ವಿವಿಧ ಕೋರ್ಟ್‌ಗಳಲ್ಲಿ ಆಕ್ಷೇಪಣೆ ಇರುವುದರಿಂದ ಹೊಸ ಪರವಾನಿಗೆ ನೀಡಬಾರದು ಎಂದು ವಾದ ಮಂಡಿಸಿದರು.ಪ್ರಸ್ತುತ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣವನ್ನು ‘ಸ್ಟೇಟ್ ಬ್ಯಾಂಕ್ ಸೆಂಟ್ರಲ್ ನಿಲ್ದಾಣ’ ಎಂದು ಮರು ನಾಮಕರಣ ಮಾಡುವಂತೆ ಖಾಸಗಿ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್‌ರಾಜ್ ಆಳ್ವ ಪ್ರಸ್ತಾಪಿಸಿದರು.