ಸಾರಾಂಶ
ಶಶಿಕಾಂತ ಮೆಂಡೆಗಾರ
ವಿಜಯಪುರ : ಯಾರದ್ದೋ ಆಸ್ತಿಯನ್ನು ಇನ್ಯಾರೋ ಕೊಳ್ಳೆ ಹೊಡೆಯಬಾರದು, ಸ್ಥಿರಾಸ್ತಿ ವ್ಯವಹಾರದಲ್ಲಿ ಅಕ್ರಮಗಳು ನಡೆಯಬಾರದು ಎಂಬ ಉದ್ದೇಶದಿಂದ ಸರ್ಕಾರ ಇ-ಖಾತಾ ವ್ಯವಸ್ಥೆ ಕಡ್ಡಾಯಗೊಳಿಸಿದೆ. ಆದರೆ, ಸಂಬಂಧಿಸಿದ ಇಲಾಖೆಗಳಲ್ಲಿನ ಸ್ಥಿರಾಸ್ತಿಗಳಿಗೆಲ್ಲ ಇ-ಖಾತಾ (ಡಿಜಿಟಲ್ ಖಾತಾ) ಆಗುವ ಮೊದಲೇ ಈ ನಿಯಮ ಜಾರಿಗೆ ತಂದಿದ್ದು ರಾಜ್ಯಾದ್ಯಂತ ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡರ ಈ ನಿಯಮ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದಂತಾಗಿದೆ.
ರಾಜ್ಯಾದ್ಯಂತ ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿ ಕಂದಾಯ ಇಲಾಖೆಯಿಂದ ಆದೇಶಿಸಲಾಗಿದೆ. ಆದರೆ, ಇದುವರೆಗೂ ಸ್ಥಿರಾಸ್ತಿಗಳಿಗೆ ಡಿಜಿಟಲ್ ಖಾತೆಯೇ ಆಗದಿರುವುದರಿಂದ ಎಲ್ಲ ವ್ಯವಹಾರಗಳು ನಿಂತುಹೋಗಿ ಜನರು ಪರದಾಡುತ್ತಿದ್ದಾರೆ. ಎಲ್ಲ ಸ್ಥಿರಾಸ್ತಿಗಳು ಡಿಜಿಟಲೀಕರಣ ಆಗುವ ಮೊದಲೇ ಆಸ್ತಿಗಳ ವ್ಯವಹಾರಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡರು ತರಾತುರಿಯಲ್ಲಿ ಇ-ಖಾತಾ ನಿಯಮ ಕಡ್ಡಾಯ ಮಾಡಿದ್ದರಿಂದಾಗಿ ರಾಜ್ಯಾದ್ಯಂತ ನಿತ್ಯ ನಡೆಯುತ್ತಿದ್ದ ಸ್ಥಿರಾಸ್ತಿ ವ್ಯವಹಾರಗಳಲ್ಲಿ ಅರ್ಧಕ್ಕರ್ಧ ವ್ಯವಹಾರಗಳು ನಿಂತುಹೋಗಿವೆ. ಇದರಿಂದಾಗಿ ಒಂದೆಡೆ ಸಾರ್ವಜನಿಕರು ಪರದಾಡುತ್ತಿದ್ದರೆ ಮತ್ತೊಂದೆಡೆ ಸರ್ಕಾರಕ್ಕೆ ಬರುತ್ತಿದ್ದ ಆದಾಯದಲ್ಲಿಯೂ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಮೊದಲೆಲ್ಲ ಪಹಣಿ ಹಾಗೂ ಪಾಲಿಕೆಯಿಂದ ನೀಡಲಾಗುತ್ತಿದ್ದ ನಮೂನೆ-2 (ಪಾಲಿಕೆ ಪಹಣಿ)ರಿಂದ ನಡೆಯುತ್ತಿದ್ದ ವ್ಯವಹಾರಗಳಾದ ಸ್ಥಿರಾಸ್ತಿ ಖರೀದಿ, ದಖ್ ಖರೀದಿ, ಬ್ಯಾಂಕ್ ಲೋನ್, ಬೋಜಾ ಏರಿಸುವುದು, ಬೋಜಾ ಕಡಿಮೆಗೊಳಿಸುವುದು, ಹಕ್ಕುಬಿಟ್ಟ ಪತ್ರ, ಭಕ್ಷಿಸ ಪತ್ರ ಸೇರಿದಂತೆ ಹಲವು ವಹಿವಾಟುಗಳು ಸ್ಥಗಿತವಾಗಿವೆ. ಇ-ಖಾತಾ ಆದ ನಂತರವಷ್ಟೇ ಉಪನೋಂದಣಾಧಿಕಾರಿಗಳ ಕಚೇರಿಯ ಕಾವೇರಿ 2.0 ತಂತ್ರಾಂಶದಲ್ಲಿ ಆಸ್ತಿ ವಿವರಗಳು ಗೋಚರವಾಗಲಿವೆ. ಅಲ್ಲಿವರೆಗೂ ಈ ಎಲ್ಲ ಲೇವಾದೇವಿಗಳು ಸ್ಥಗಿತಗೊಂಡಿವೆ.
ಎಲ್ಲೆಲ್ಲಿ ಎಷ್ಟೆಷ್ಟು ಖಾತೆ ಡಿಜಿಟಲ್..?:
ವಿಜಯಪುರ ಶೇ.10ರಷ್ಟು, ಬಾಗಲಕೋಟೆ ಶೇ.10ರಷ್ಟು, ಬೆಳಗಾವಿ ಶೇ.15ರಷ್ಟು, ರಾಯಚೂರು ಶೇ. 20ರಷ್ಟು, ಕೊಪ್ಪಳ ಶೇ. 30ರಷ್ಟು. ಇನ್ನುಳಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಶೇ.50ರಷ್ಟು ಸಹ ಇ-ಖಾತಾ ಆಗದಿರುವುದರಿಂದ ಎಲ್ಲ ವ್ಯವಹಾರಗಳು ಸ್ಥಗಿತವಾಗಿವೆ.
ಬಹುತೇಕ ಜಿಲ್ಲೆಗಳಲ್ಲಿ ಮಹಾನಗರ ಪಾಲಿಕೆಗಳು, ನಗರಸಭೆಗಳು, ಪುರಸಭೆಗಳು, ಸ್ಥಳೀಯ ಸಂಸ್ಥೆಗಳಲ್ಲಿ ಇದುವರೆಗೂ ಸಾರ್ವಜನಿಕರ ಆಸ್ತಿಗಳನ್ನು ಇ-ಖಾತಾ ಮಾಡಿಯೇ ಇಲ್ಲ. ಜನರು ಸಹ ಆಸಕ್ತಿ ತೋರದೆ ಇರುವುದರಿಂದ ಅಧಿಕಾರಿಗಳು ತಮಗೇನು ಸಂಬಂಧವಿಲ್ಲ ಎನ್ನುಂತೆ ಸುಮ್ಮನಿದ್ದಾರೆ. ಆದರೆ ಇದೀಗ ಆಸ್ತಿ ಖರೀದಿ ಸೇರಿದಂತೆ ಯಾವುದೇ ವ್ಯವಹಾರಕ್ಕೆ ಡಿಜಿಟಲ್ ಖಾತಾ ಕಡ್ಡಾಯ ಮಾಡಿರುವುದರಿಂದ ಸಮಸ್ಯೆ ಎದುರಾಗಿದೆ.
ವಿಜಯಪುರದಲ್ಲಿ ಆದ ಅವಾಂತರ:
ವಿಜಯಪುರ ಮಹಾನಗರ ಪಾಲಿಕೆ ಹಾಗೂ ಜಿಲ್ಲಾದ್ಯಂತ ಇರುವ ನಗರಸಭೆ, ಪುರಸಭೆಗಳಲ್ಲಿ ಡಿಜಿಟಲ್ ಖಾತಾ ಆಗದಿರುವುದರಿಂದ ವ್ಯವಹಾರಗಳಲ್ಲಿ ಕುಂಠಿತವಾಗಿದೆ. ವಿಜಯಪುರ ಹಿರಿಯ ಉಪನೋಂದಣಾಧಿಕಾರಿ ಕಚೇರಿಯೊಂದರಲ್ಲೇ ದಿನಕ್ಕೆ 250 ರಷ್ಟು ಸ್ಥಿರಾಸ್ತಿಗಳ ವ್ಯವಹಾರಗಳು ನಡೆಯುತ್ತಿದ್ದು, ಇದೀಗ ಕೇವಲ ದಿನಕ್ಕೆ 60ರಿಂದ 70 ಮಾತ್ರ ಆಸ್ತಿಗಳ ವ್ಯವಹಾರಗಳು ಮಾತ್ರ ನಡೆಯುತ್ತಿವೆ.
ಮಹಾನಗರ ಪಾಲಿಕೆಯಲ್ಲಿ ಸ್ಥಿರಾಸ್ತಿಗಳು ಡಿಜಿಟಲೀಕರಣ ಆಗುವ ಮೊದಲೇ ಸರ್ಕಾರ ಇ-ಖಾತೆ ಕಡ್ಡಾಯಗೊಳಿಸಿದ್ದು ದೊಡ್ಡತಪ್ಪು. ಇದರಿಂದಾಗಿ ಎಲ್ಲ ಆಸ್ತಿ ವ್ಯವಹಾರಗಳು ನಿಂತುಹೋಗಿವೆ. ಇದರಿಂದ ರಾಜ್ಯಾದ್ಯಂತ ಸಾರ್ವಜನಿಕರು ಪರದಾಡುತ್ತಿದ್ದಾರೆ. ಆಸ್ತಿ ವ್ಯವಹಾರಕ್ಕೆ ಕಡ್ಡಾಯಗೊಳಿಸಿರುವ ಡಿಜಿಟಲ್ ಖಾತಾ ನಿಯಮವನ್ನು ತಕ್ಷಣವೇ ವಾಪಸ್ ಪಡೆದು, ಮೊದಲಿನಂತೆ ಪಾಲಿಕೆ ನಮೂನೆ- 2ರ ಮೇಲೆ ವ್ಯವಹಾರಕ್ಕೆ ಅವಕಾಶ ಕಲ್ಪಿಸಬೇಕು.
-ರಾಜು ಬಿರಾದಾರ, ಬಿಜೆಪಿ ಮುಖಂಡರು.
ಮೊದಲಿನಿಂದಲೂ ಇ-ಖಾತಾ ನಿಯಮ ಜಾರಿಯಲ್ಲಿದ್ದರೂ, ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ಬಹುತೇಕ ಜನರು ತಮ್ಮ ಆಸ್ತಿಗಳನ್ನು ಡಿಜಿಟಲ್ ಖಾತಾಗೆ ವರ್ಗಾಯಿಸಿಕೊಂಡಿಲ್ಲ. ಇದೀಗ ಆಸ್ತಿ ಖರೀದಿ ಪ್ರಕ್ರಿಯೆಯಲ್ಲಿ ಇ-ಖಾತಾ ಕಡ್ಡಾಯ ಮಾಡಿರುವುದರಿಂದ ಸಾರ್ವಜನಿಕರು ಸಂಬಂಧಿಸಿದ ಕಚೇರಿಗಳಿಗೆ ಬಂದು ತಮ್ಮ ಹಾಗೂ ತಮ್ಮ ಆಸ್ತಿಗಳಿಗೆ ಸಂಬಂಧಿಸಿ ದಾಖಲೆಗಳನ್ನು ನೀಡಿ ಇ-ಖಾತಾ ಮಾಡಿಕೊಳ್ಳಬೇಕು.
- ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಆಯುಕ್ತರು.