ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಕಾಂಚಳ್ಳಿ ಮತ್ತು ದಾಸನದೊಡ್ಡಿ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಮಂಡಿ ಹಳ್ಳದ ನೀರು ನುಗ್ಗಿ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿತ್ತು.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಕಾಂಚಳ್ಳಿ ಮತ್ತು ದಾಸನದೊಡ್ಡಿ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಮಂಡಿ ಹಳ್ಳದ ನೀರು ನುಗ್ಗಿ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿತ್ತು.ಸೋಮವಾರ ಮತ್ತು ಮಂಗಳವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕಾಂಚಳ್ಳಿಯಲ್ಲಿ ಮಂಡಿ ಹಳ್ಳ ತುಂಬಿ ಹರಿದಿದ್ದು, ಮೊಣಕಾಲುದ್ದ ನೀರು ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯಗಳು ವಸ್ತುಗಳೆಲ್ಲ ನೀರು ಪಾಲಾಗಿ ನಿವಾಸಿಗಳು ಪರದಾಡುವಂತಾಗಿದೆ.
ಕಾಂಚಳ್ಳಿಯ ಇರಸೇಗೌಡ ಅವರು ಜಾನುವಾರಿಗೆ ಸಂಗ್ರಹಿಸಿದ್ದ 4 ಟ್ರ್ಯಾಕ್ಟರ್ ಜೋಳದ ಮೇವು ಸಂಪೂರ್ಣ ನೀರುಪಾಲು, ಸುಮಾರು 30 ಸಾವಿರ ರು. ನಷ್ಟವಾಗಿದೆ.ತುಳಸಮ್ಮ, ಮನ್ನಾ, ದೇಗೌಡ, ಕಾಳೇಗೌಡ, ಪ್ರದೀಪ್, ನಾಗರಾಜು, ಶಿವಲಿಂಗಚಾರಿ, ಶ್ರೀನಿವಾಸ್, ವೆಂಕಟರಾಜೇಗೌಡ, ಕಾಂತಮ್ಮ, ರವಿ ಸೇರಿದಂತೆ 50ಕ್ಕೂ ಹೆಚ್ಚು ಕುಟುಂಬಗಳ ಮನೆಯಲ್ಲಿದ್ದ ಅಕ್ಕಿ, ಬೇಳೆ, ದವಸ-ಧಾನ್ಯ, ಎಲೆಕ್ಟ್ರಿಕ್ ಉಪಕರಣಗಳು, ಕೋಳಿ ಮೇವು ನೀರುಪಾಲಾಗಿದೆ.
ಸಚಿವ ಪುಟ್ಟರಂಗಶೆಟ್ಟಿ ಭೇಟಿ, ಪರಿಹಾರದ ಭರವಸೆ:ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮಂಗಳವಾರ ಮುಂಜಾನೆ ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂತ್ರಸ್ತರಿಗೆ ಧೈರ್ಯ ತುಂಬಿದ ಸಚಿವರು, ಹಾನಿಗೊಳಗಾದ ಎಲ್ಲ ಮನೆಗಳ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದೇನೆ. ಅಂತಿಮ ಪಟ್ಟಿ ಬಂದ ಕೂಡಲೇ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು. ಮತ್ತೆ ಅನಾಹುತ ತಪ್ಪಿಸಲು ಗ್ರಾಮದಲ್ಲಿ ಎರಡು ಸೇತುವೆ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಲ್ಲಿಸುವಂತೆ ನೀರಾವರಿ ಇಲಾಖೆ ಇಂಜಿನಿಯರ್‌ಗೆ ಸೂಚಿಸಿದ್ದೇನೆ ಎಂದು ಹೇಳಿದರು.ಅತಿ ಹೆಚ್ಚು ನಷ್ಟ ಅನುಭವಿಸಿದ ತುಳಸಮ್ಮ ಮತ್ತು ಜಾನುವಾರು ಮೇವು ಕಳೆದುಕೊಂಡ ಇರಸೇಗೌಡ ಅವರಿಗೆ ಸಚಿವರು ವೈಯಕ್ತಿಕವಾಗಿ ಪರಿಹಾರ ನೀಡಿದರು.
ಸ್ಮಶಾನ ಕಾಂಪೌಂಡ್ ಕುಸಿತ ಪರಿಶೀಲನೆ:ನಂತರ ಕುರುಬರದೊಡ್ಡಿ ಗ್ರಾಮದ ಮುಸ್ಲಿಂ ಸಮುದಾಯದ ಸ್ಮಶಾನದ ಕಾಂಪೌಂಡ್ ಮಳೆಗೆ ಕುಸಿದಿರುವುದನ್ನು ಪರಿಶೀಲಿಸಿದ ಸಚಿವರು, ಎಷ್ಟು ಮೀಟರ್ ಹಾನಿಯಾಗಿದೆ ಎಂದು ವರದಿ ಕೊಡಿ, ಅಲ್ಪಸಂಖ್ಯಾತ ಇಲಾಖೆಯಿಂದ ಅನುದಾನ ಕೊಡಿಸಿ ಶೀಘ್ರವೇ ನೂತನ ಕಾಂಪೌಂಡ್ ಕಟ್ಟಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.
ನಂತರ ಅಜ್ಜೀಪುರ ಗ್ರಾ.ಪಂ ವ್ಯಾಪ್ತಿಯ ದಾಸನದೊಡ್ಡಿ ಗ್ರಾಮದಲ್ಲಿ ನೀರು ನುಗ್ಗಿ ಗೋಡೆ ಕುಸಿದ ಮನೆಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.ಇದೇ ಸಂದರ್ಭದಲ್ಲಿ ಶಾಸಕ ಎಂಆರ್ ಮಂಜುನಾಥ್ ಮಾಜಿ ಶಾಸಕ ನರೇಂದ್ರ ತಾಲೂಕು ದಂಡಾಧಿಕಾರಿಗಳಾದ ಚೈತ್ರ, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮದುವನಹಳ್ಳಿ ಶಿವಕುಮಾರ್, ತಾ.ಪಂ ಮಾಜಿ ಸದಸ್ಯ ನಟರಾಜು, ಮುಖಂಡ ನಾರಾಯಣ ಇನ್ನಿತರ ಅಧಿಕಾರಿಗಳು ಮತ್ತು ಕಾರ್ಯಕರ್ತರು ಮುಖಂಡರು ಹಾಜರಿದ್ದರು.