ಬರ ನಿರ್ವಹಣೆ ಹೆಸರಿನಲ್ಲಿ ರೈತರಿಗೆ ೨೫೦೦ ರು. ಪರಿಹಾರ ನೀಡುವುದಾಗಿ ಘೋಷಿಸಿ ವಾಸ್ತವದಲ್ಲಿ ರೈತರಿಗೆ ಸಮರ್ಪಕ ಪರಿಹಾರ ತಲುಪಿಸದಿರುವುದು ಖಂಡನೀಯ. ರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿ ಎಕರೆಗೆ ಕನಿಷ್ಠ ೫ ಸಾವಿರ ರು. ಪರಿಹಾರ ನೀಡುವಂತೆ ಒತ್ತಾಯ.
ಕನ್ನಡಪ್ರಭ ವಾರ್ತೆ ಮಂಡ್ಯ
ಬೆಲೆ ಏರಿಕೆ, ಆಶಾ ಕಾರ್ಯಕರ್ತೆಯರು, ರೈತರು ಮತ್ತು ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರಕಿಸುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದ ಮುಖಂಡರು-ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪಕ್ಷದ ಮುಖಂಡರು-ಕಾರ್ಯಕರ್ತರು ರಾಜ್ಯಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಚುನಾವಣೆ ವೇಳೆ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಪಡಿಸಿದರು.
ಬರ ನಿರ್ವಹಣೆ ಹೆಸರಿನಲ್ಲಿ ರೈತರಿಗೆ ೨೫೦೦ ರು. ಪರಿಹಾರ ನೀಡುವುದಾಗಿ ಘೋಷಿಸಿ ವಾಸ್ತವದಲ್ಲಿ ರೈತರಿಗೆ ಸಮರ್ಪಕ ಪರಿಹಾರ ತಲುಪಿಸದಿರುವುದು ಖಂಡನೀಯ. ರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿ ಎಕರೆಗೆ ಕನಿಷ್ಠ ೫ ಸಾವಿರ ರು. ಪರಿಹಾರ ನೀಡುವಂತೆ ಒತ್ತಾಯಿಸಿದರು.ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ೧೫ ಸಾವಿರ ರು. ಗೌರವಧನ ನೀಡುವುದಾಗಿ ಭರವಸೆ ನೀಡಿತ್ತು. ಮೂರೂವರೆ ವರ್ಷವಾದರೂ ಕೊಟ್ಟ ಭರವಸೆ ಈಡೇರಿಸಿಲ್ಲ. ಇದರಿಂದ ಆಶಾ ಕಾರ್ಯಕರ್ತೆಯರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ನೀಡುತ್ತಿರುವ ೨ ಸಾವಿರ ರು. ಗೌರವಧನದೊಂದಿಗೆ ರಾಜ್ಯಸರ್ಕಾರ ತನ್ನ ಪಾಲಿನ ಶೇ.೭೫ರಷ್ಟು ಮೊತ್ತವನ್ನು ತಕ್ಷಣವೇ ನೀಡುವಂತೆ ಆಗ್ರಹಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಹಾಲು, ಬಸ್, ವಿದ್ಯುತ್, ಆಸ್ಪತ್ರೆಗಳ ಶುಲ್ಕ ಏರಿಕೆ, ತೆರಿಗೆ ಹೊರೆಯಿಂದ ಜನರು ತತ್ತರಿಸುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕು. ವಸತಿ ಆಸ್ತಿಗಳಿಗೆ ಮಾಸಿಕ ವಿಧಿಸುತ್ತಿರುವ ೪೦೦ ರು.ವರೆಗಿನ ಕಸ ಸಂಗ್ರಹಣ ಶುಲ್ಕವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ರೈತಮೋರ್ಚಾ ರಾಜ್ಯ ಕಾರ್ಯದರ್ಶಿ, ಎಚ್.ಆರ್.ಅಶೋಕ್ಕುಮಾರ್, ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್, ಕೇಶವ, ಸುಧಾ, ಸಿ.ಟಿ.ಮಂಜುನಾಥ, ನಾಗಾನಂದ, ವಿವೇಕ, ಪ್ರಸನ್ನ, ಚಾಮರಾಜು, ಶಂಕರ್, ನರಸಿಂಹಾಚಾರಿ ಇತರರಿದ್ದರು.