ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ನಗರಕ್ಕೆ ಸರಬರಾಜಾಗುವ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಪ್ರತಿನಿತ್ಯ 32 ಎಂಎಲ್‌ಡಿ ನೀರು ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಕಡಿಮಯಾಗುವ ಸಾಧ್ಯತೆಗಳಿದ್ದರೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಯೂ ಆದ ನಗರಸಭೆ ಆಡಳಿತಾಧಿಕಾರಿ ಡಾ.ಕುಮಾರ ತಿಳಿಸಿದರು.ನಗರಸಭೆ ಧರಣಪ್ಪ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯಲ್ಲಿ 585 ಕೊಳವೆ ಬಾವಿಗಳಿವೆ. ಎಲ್ಲವನ್ನೂ ಪರಿಶೀಲಿಸುವಂತೆ ತಿಳಿಸಲಾಗಿದೆ. ಈ ಕೊಳವೆ ಬಾವಿಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದಲ್ಲಿ ಅದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ನಗರಸಭೆ ವ್ಯಾಪ್ತಿ 12 ವಾರ್ಡ್‌ಗಳಿಗೆ ಪ್ರತಿನಿತ್ಯ ನೀರು ಪೂರೈಕೆ ಮಾಡಲಾಗುತ್ತಿದೆ. 23 ವಾರ್ಡ್‌ಗಳಿಗೆ ದಿನ ಬಿಟ್ಟು ದಿನ ನೀರು ಪೂರೈಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ 23 ವಾರ್ಡ್‌ಗಳಿಗೆ ನಿತ್ಯ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಉನ್ನತೀಕರಣಕ್ಕೆ ಸೂಚನೆ ನೀಡಲಾಗಿದೆ ಎಂದರು.ಒಳಚರಂಡಿ ಮತ್ತು ಕುಡಿಯುವ ನೀರಿನ ಸರ್ವೇ ಮಾಡಲು 70 ಲಕ್ಷ ಬೇಕಾಗಿದೆ. ಅದಕ್ಕಾಗಿ ಈಗಾಗಲೇ ನಗರಸಭೆಯಿಂದ ಹಣ ಭರಿಸಲಾಗಿದೆ. ಏಜೆನ್ಸಿ ಗುರುತಿಸಿ ಸರ್ವೇ ಮಾಡಿ ಉನ್ನತೀಕರಣ ಮಾಡಲು ಸೂಚನೆ ನೀಡಲಾಗಿದೆ. ಸದ್ಯಕ್ಕೆ ಕುಡಿವ ನೀರಿನ ಸಮಸ್ಯೆ ಇಲ್ಲ. ಆದರೂ ನಾಗರೀಕರು ಬೇಸಿಗೆ ಕಾಲವಾದ್ದರಿಂದ ನೀರನ್ನು ಪೋಲಾಗತಂತೆ ಮಿತ ಬಳಕೆ ಮಾಡುವಂತೆ ಮನವಿ ಮಾಡಿದರು. ಕಾರು ತೊಳೆಯಲು, ಉದ್ಯಾನಕ್ಕೆ ನೀರು ಹಾಕುವಂತಹ ಕೆಲಸಗಳಿಗೆ ಶುದ್ಧ ಕುಡಿಯುವ ನೀರು ಬಳಕೆ ಮಾಡದಂತೆ ತಿಳಿಸಿದರು.
ಕೆಎಚ್‌ಬಿ ಬಡಾವಣೆಗೆ ಕುಡಿವ ನೀರು ಸರಬರಾಜು ಮಾಡಲು ಶಾಸಕರ ಆಸಕ್ತಿಯಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಈ ಕಾರ್‍ಯವನ್ನು ಪೂರ್ಣಗೊಳಿಸಿ ಶೀಘ್ರ ನೀರೊದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದ ಮಾರುಕಟ್ಟೆ ಆವರಣದಲ್ಲಿ 126 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದು, ಅವುಗಳನ್ನು ವಿತರಿಸಲು ಕ್ರಮ ವಹಿಸಲಾಗಿದೆ. ಈ ಹಿಂದೆ 2023ರಲ್ಲಿ ಯಾರು ಅಲ್ಲಿ ವ್ಯಾಪಾರ ಮಾಡುತ್ತಿದ್ದರು ಅವರಿಗೆ ಕೊಡಬೇಕೆಂದು ಅಂದಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ನಮ್ಮ ಬಳಿ ಇರುವ ದಾಖಲಾತಿ ಪರಿಶೀಲಿಸಲಾಗುತ್ತಿದೆ. ಜೊತೆಗೆ ಬಾಡಿಗೆ ಕಟ್ಟಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರು ತಮ್ಮ ಬಳಿ ಇರುವ ದಾಖಲಾತಿಗಳನ್ನು ನಗರಸಭೆಗೆ ಹಾಜರುಪಡಿಸಿದರೆ ಅವುಗಳನ್ನೂ ಪರಿಶೀಲಿಸಿ ಯಾರಿಗೂ ಅನ್ಯಾಯ ಆಗದಂತೆ ಕ್ರಮ ವಹಿಸಲಾಗುವುದು ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ಜೊತೆಗೆ ಎಲ್ಲೆಲ್ಲಿ ಅಗತ್ಯವಿರುವ ಕಡೆಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಕ್ರಮ ಕೊಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಲಾಗಿದೆ ಎಂದರು.ಮಂಡ್ಯ ನಗರವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಶಾಸಕರು ಮುಂದಾಗಿದ್ದಾರೆ. ಕೆಲವು ಕಾಮಗಾರಿಗಳು ನಡೆಯಬೇಕಿರುವುದರಿಂದ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಗೆ ಕಾರ್‍ಯಾದೇಶ ನೀಡಲು ಕ್ರಮ ವಹಿಸಲಾಗಿದೆ ಎಂದರು.
ಗುತ್ತಲು ಕೆರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ನಾವೂ ಸಹ ಪ್ರತಿ 15 ದಿನಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.ನಗರಸಭೆ ವ್ಯಾಪ್ತಿಯಲ್ಲಿ 268 ಜನಗಣತಿ ಕೇಂದ್ರಗಳನ್ನು ಮಾಡಲಾಗಿತ್ತು. ಮೇ 12ಕ್ಕೆ ನಗರ ವ್ಯಾಪ್ತಿಯಲ್ಲಿ ಜನಗಣತಿ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ನಮ್ಮ ಗಣತಿದಾರರು ಮೇ 5 ಕ್ಕೇ ಗಣತಿ ಕಾರ್‍ಯವನ್ನು ಪೂರ್ಣಗೊಳಿಸಿದ್ದಾರೆ. ಪೂರ್ಣಗೊಳಿಸಿದ್ದ ಗಣತಿದಾರರಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ಪಿ. ರವಿಕುಮಾರ್, ನಗರಸಭೆ ಪೌರಾಯುಕ್ತೆ ಪಂಪಶ್ರೀ, ನಗರ ಯೋಜನಾಭಿವೃದ್ಧಿ ಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ , ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.