ಅಶ್ವತ್ಥ್ ಹಳುವಾಡಿ
ಕನ್ನಡಪ್ರಭ ವಾರ್ತೆ ಮಂಡ್ಯಮನೆ ಮನೆಗಳಿಂದ ಸಂಗ್ರಹಿಸಿರುವ ಹಸಿ ಮತ್ತು ತರಕಾರಿ ತ್ಯಾಜ್ಯದಿಂದ ನಗರಸಭೆ ಗೊಬ್ಬರ ತಯಾರಿಸುತ್ತಿದ್ದು, ಕಳೆದ ೮ ತಿಂಗಳಲ್ಲಿ ೪೭ ಟನ್ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಮೂಲಕ ₹೧.೪೧ ಲಕ್ಷ ಆದಾಯ ಗಳಿಸಿದೆ.
ಈ ಗೊಬ್ಬರಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಮೂರು ಹಂತಗಳಲ್ಲಿ ಗೊಬ್ಬರವನ್ನು ತಯಾರಿಸಬೇಕಿರುವುದರಿಂದ ಗೊಬ್ಬರ ತಯಾರು ಮಾಡುವುದು ವಿಳಂಬವಾಗಲಿದೆ. ಈ ಗೊಬ್ಬರಕ್ಕೆ ಮಣ್ಣನ್ನು ಬೆರೆಸದೆ, ಯಾವುದೇ ರಾಸಾಯನಿಕವನ್ನು ಮಿಶ್ರಣ ಮಾಡದೆ ನೈಸರ್ಗಿಕವಾಗಿಯೇ ನೀಡಲಾಗುತ್ತಿರುವುದು ಒಂದು ವಿಶೇಷವಾಗಿದೆ.ತಾಲೂಕಿನ ಕಾಳೇನಹಳ್ಳಿಯಲ್ಲಿರುವ ಘನ ತ್ಯಾಜ್ಯ ವಸ್ತು ಸಂಗ್ರಹ ಘಟಕದಲ್ಲಿ ಗೊಬ್ಬರವನ್ನು ತಯಾರಿಸಲಾಗುತ್ತಿದ್ದು, ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳಿಂದ ಗೊಬ್ಬರವನ್ನು ಪರೀಕ್ಷೆಗೊಳಪಡಿಸಿ ಪ್ರಮಾಣಪತ್ರ ಪಡೆದು ಸಾರ್ವಜನಿಕರು ಮತ್ತು ರೈತರಿಗೆ ವಿತರಿಸಲಾಗುತ್ತಿದೆ.
ಗೊಬ್ಬರ ತಯಾರಿಸುವುದು ಹೇಗೆ?:
ಮನೆಗಳಿಂದ ನಿತ್ಯ ವಾಹನಗಳಲ್ಲಿ ಸಂಗ್ರಹಿಸಲಾಗುವ ಹಸಿಕಸವನ್ನು ಪ್ರತ್ಯೇಕವಾಗಿ ರಾಶಿ ಹಾಕಲಾಗುವುದು. ಅದರಲ್ಲಿರುವ ಪ್ಲಾಸ್ಟಿಕ್ ವಸ್ತುಗಳು, ಗಾಜು ಸೇರಿ ನಿರುಪಯುಕ್ತ ವಸ್ತುಗಳನ್ನು ಬೇರ್ಪಡಿಸಿ ಬಳಿಕ ಅದನ್ನು ೩೦ ರಿಂದ ೪೫ ದಿನಗಳ ಕಾಲ ಒಣಗಿಸುವರು. ನಿಗದಿತ ದಿನಗಳ ಕಳೆದ ಬಳಿಕ ಅದರ ಮೇಲೆ ನೀರನ್ನು ಹಾಕಿ ಜೆಸಿಬಿಯಿಂದ ತಿರುವು ಹಾಕಿ ಸಗಣಿ ಗೊಬ್ಬರವನ್ನು ಮಿಶ್ರಣಗೊಳಿಸಲಾಗುತ್ತದೆ. ಮತ್ತೆ ಅದನ್ನು ತಿರುವು ಹಾಕಿ ನೀರನ್ನು ಹಾಕಿ ಮಿಶ್ರಣ ಮಾಡಿ ಪುನಃ ಒಣಗಿಸಿ ಜರಡಿ ಹಿಡಿದು ಗೊಬ್ಬರವನ್ನು ೧೦ ಕೆಜಿಯ ಪ್ಲಾಸ್ಟಿಕ್ ಚೀಲಗಳಿಗೆ ತುಂಬಲಾಗುತ್ತದೆ.
ಮಂಡ್ಯ ಗೋಲ್ಡ್ ಹೆಸರು:ನಗರಸಭೆಯಿಂದ ತಯಾರಿಸಲಾಗುತ್ತಿರುವ ಹಸಿರು ಎಲೆ, ತರಕಾರಿ. ಹಣ್ಣಿನ ತ್ಯಾಜ್ಯದಿಂದ ತಯಾರಿಸಿರುವ ಗೊಬ್ಬರಕ್ಕೆ ಮಂಡ್ಯ ಗೋಲ್ಡ್ ಎಂದು ಹೆಸರಿಡಲಾಗಿದೆ. ಹತ್ತು ದಿನಕ್ಕೆ ೨೦ ಟನ್‌ನಷ್ಟು ಗೊಬ್ಬರವನ್ನು ತಯಾರಿಸಲಾಗುತ್ತಿದೆ. ೧೦ ಕೆಜಿ ಗೊಬ್ಬರದ ಬ್ಯಾಗ್‌ವೊಂದಕ್ಕೆ ₹೪೦, ೧ ಟನ್ ಗೊಬ್ಬರವನ್ನು ₹೩೦೦೦ಕ್ಕೆ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.
ಈ ಗೊಬ್ಬರವನ್ನು ಪ್ರಾಯೋಗಿಕವಾಗಿ ಮೊದಲು ನಗರಸಭೆ ವತಿಯಿಂದ ಬೆಳೆಸಿರುವ ಗಿಡ- ಮರಗಳಿಗೆ ಹಾಕಿ ಅವುಗಳ ಬೆಳವಣಿಗೆಯನ್ನು ಗಮನಿಸಲಾಯಿತು. ಗಿಡ- ಮರಗಳ ಬೆಳವಣಿಗೆ ಉತ್ತಮವಾಗಿ ಬಂದಿದ್ದರಿಂದ ಉತ್ತೇಜನಗೊಂಡು ಕೃಷಿ ವಿಶ್ವವಿದ್ಯಾನಿಲಯದಿಂದ ಪ್ರಮಾಣಪತ್ರ ಪಡೆದು ಸಾರ್ವಜನಿಕವಾಗಿ ವಿತರಿಸುತ್ತಿದ್ದಾರೆ.ನಿತ್ಯ ೫೦ ರಿಂದ ೮೦ ಕೆಜಿ ಗೊಬ್ಬರ ಮಾರಾಟವಾಗುತ್ತಿದೆ. ಕೆಲವರು ಟನ್‌ಗಟ್ಟಲೆ ಗೊಬ್ಬರಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆದರೆ, ಏಕಕಾಲಕ್ಕೆ ಅಷ್ಟೊಂದು ಪ್ರಮಾಣದ ಗೊಬ್ಬರವನ್ನು ಉತ್ಪಾದಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ರೈತರಿಂದಲೂ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ. ತರಕಾರಿ, ಕಬ್ಬು, ಸೊಪ್ಪು ಸೇರಿದಂತೆ ಎಲ್ಲಾ ರೀತಿಯ ಬೆಳೆಗಳಿಗೆ ಉತ್ಕೃಷ್ಟ ಗುಣಮಟ್ಟದ ಗೊಬ್ಬರ ಇದಾಗಿದೆ.
------ನಗರಸಭೆಯಿಂದ ಉತ್ತಮ ಗುಣಮಟ್ಟದ ಗೊಬ್ಬರ ತಯಾರಿಸಿ ನೀಡಲಾಗುತ್ತಿದೆ. ಹಸಿರೆಲೆ, ತರಕಾರಿ, ಹಣ್ಣಿನ ತ್ಯಾಜ್ಯಗಳನ್ನು ಗೊಬ್ಬರ ತಯಾರಿಕೆಗೆ ಬಳಸಲಾಗುತ್ತಿದೆ. ಮೂರು ಹಂತಗಳಲ್ಲಿ ಗೊಬ್ಬರ ತಯಾರಾಗಲಿದ್ದು, ೧೦ ಕೆಜಿ ಬ್ಯಾಗ್‌ವೊಂದಕ್ಕೆ ₹೪೦ ನಿಗದಿಪಡಿಸಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಗೊಬ್ಬರ ನೀಡುತ್ತಿರುವುದರಿಂದ ಹೆಚ್ಚು ಜನರಿಂದ ಬೇಡಿಕೆ ಬರುತ್ತಿದೆ. ರೈತರೂ ಕೂಡ ಟನ್‌ಗಟ್ಟಲೆ ಗೊಬ್ಬರಕ್ಕೆ ಬೇಡಿಕೆ ಇಡುತ್ತಿದ್ದು, ಕಚ್ಚಾ ವಸ್ತುಗಳ ಕೊರತೆಯಿಂದ ಅಷ್ಟು ಪ್ರಮಾಣದಲ್ಲಿ ಗೊಬ್ಬರ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ.
- ಯು.ಪಿ.ಪಂಪಾಶ್ರೀ, ಪೌರಾಯುಕ್ತರು, ನಗರಸಭೆ--------
ಯಾವುದೇ ರಾಸಾಯನಿಕ ಮಿಶ್ರಣವಿಲ್ಲದ ಉತ್ತಮ ಗೊಬ್ಬರವನ್ನು ನೀಡಬೇಕೆನ್ನುವುದು ನಮ್ಮ ಬಯಕೆ. ಅದಕ್ಕಾಗಿ ಗುಣಮಟ್ಟಕ್ಕೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಗೊಬ್ಬರ ತಯಾರಿಕೆಗೆ ಅವಶ್ಯಕವಾದ ಹಸಿಎಲೆ, ತರಕಾರಿ ತ್ಯಾಜ್ಯಗಳು ಬೇಡಿಕೆಯಷ್ಟು ಸಿಗದಿರುವುದರಿಂದ ಬೇಡಿಕೆಯಷ್ಟು ಗೊಬ್ಬರ ತಯಾರಿಸಲಾಗುತ್ತಿಲ್ಲ. ಕಡಿಮೆ ಉತ್ಪಾದನೆಯಾದರೂ ಉತ್ತಮ ಗೊಬ್ಬರ ಎನಿಸಿಕೊಂಡಿರುವುದೇ ನಮ್ಮ ಹೆಮ್ಮೆ.- ರುದ್ರೇಗೌಡ, ಪರಿಸರ ಅಭಿಯಂತರ