ಕನ್ನಡಪ್ರಭ ವಾರ್ತೆ ಮಂಡ್ಯ
ಬೂದನೂರು ಉತ್ಸವ 2026 ಸಾಂಸ್ಕೃತಿಕ ವೈಭವ ಎಂದರೆ ತಪ್ಪಾಗಲಾರದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.ಇಲ್ಲಿನ ಹೊಸ ಬೂದನೂರು ಶ್ರೀಕಾಶಿವಿಶ್ವನಾಥಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೂದನೂರು ಉತ್ಸವ -2026 ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಾಸಕರು ಕೇವಲ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸದೆ ನೆಲದ ವೈಶಿಷ್ಟ್ಯ ವೈಭವವನ್ನು ಸಾರ್ವಜನಿಕರಿಗೆ ತಿಳಿಸಬೇಕು. ಹಿಂದಿನ ಇತಿಹಾಸವನ್ನು ನಾವು ತಿಳಿಯಬೇಕು. ಒಂದು ಹಳ್ಳಿಯಿಂದ ಸಾಮಾನ್ಯ ಕುಟುಂಬದಿಂದ ಬಂದು ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿ. ಇಂದು ಶಾಸಕರಾಗಿ ಪಿ. ರವಿಕುಮಾರ್ ನಿಂತಿದ್ದಾರೆ ಎಂದರು.ನಾನು, ನರೇಂದ್ರಸ್ವಾಮಿ ಹಾಗೂ ಅಂಬರೀಶ್ ಅವರು ಮಂಡ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿದ್ದೇವೆ. ಸಂಪೂರ್ಣವಾಗಿ ಜನರ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದಿಲ್ಲ. ಆದರೆ, ಪಿ. ರವಿಕುಮಾರ್ ಅವರು ಕ್ಷೇತ್ರದ ಜನರೊಂದಿಗೆ ವಾರದಲ್ಲಿ ಐದು ದಿನ ಕಾಲ ಕಳೆಯುತ್ತಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ರವಿಕುಮಾರ್ ಅವರು ಶ್ರದ್ಧೆಯಿಂದ ಮಾಡುತ್ತಾ ಬರುತ್ತಿದ್ದಾರೆ. ಜಿಲ್ಲೆಯ ಜನರು ಕಡಿಮೆ ದರದಲ್ಲಿ ಹೆಲಿಕಾಪ್ಟರ್ ಪಯಣ ಮಾಡಬೇಕು ಎಂದು ಉದ್ದೇಶದಿಂದ ಬೂದನೂರು ಉತ್ಸವದಲ್ಲಿ ಆಯೋಜಿಸಿದ್ದಾರೆ ಎಂದರು.
ಇಂತಹ ಕಾರ್ಯಕ್ರಮಗಳು ಈಗೆಯೆ ಮುಂದುವರೆಯಲಿ, 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾವು ಮತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಮಂಡ್ಯ ಉತ್ಸವವನ್ನು ಮುಂದಿನ ದಿನಗಳಲ್ಲಿ ಮಾಡೋಣ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಇನ್ನೂ ಎರಡು ವರ್ಷ ಮುಂದುವರೆಯುತ್ತದೆ. ನಮ್ಮ ಸರ್ಕಾರ ರೈತರು, ಕಾರ್ಮಿಕರು, ಯುವಕರ ಜೊತೆ ಸಾದ ಇರುತ್ತದೆ ಎಂದು ಭರವಸೆ ನೀಡಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಶಾಸಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ರವಿಕುಮಾರ್ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಚಲುವರಾಯಸ್ವಾಮಿ ಅವರು ನೇತೃತ್ವದಲ್ಲಿ ನಡೆದ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಭುತವಾಗಿ ಆಚರಿಸಲಾಯಿತು. ವಿದೇಶಗಳಲ್ಲೂ ಸಹ ಸಾಹಿತ್ಯ ಸಮ್ಮೇಳನವನ್ನು ಕೊಂಡಾಡಿದ್ದಾರೆ. ಜನಪ್ರತಿನಿಧಿಗಳು ಅಭಿವೃದ್ಧಿ ಜೊತೆಗೆ ಸಾಂಸ್ಕೃತಿಕ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಸಬೇಕು ಎಂದರು.ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ ನರೇಂದ್ರಸ್ವಾಮಿ ಮಾತನಾಡಿ, ರವಿಕುಮಾರ್ ಅವರು ಹೊಸತನಕ್ಕೆ ಆದ್ಯತೆ ನೀಡುವ ಶಾಸಕ, ಹೊಯ್ಸಳರ ಕಾಲದ ಬುದನೂರಿನ ಕಾಶಿ ವಿಶ್ವನಾಥ ಹಾಗೂ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ವೈಭವವನ್ನು ಬುದನೂರು ಉತ್ಸವದ ಮೂಲಕ ಮೇರಗೂ ನೀಡಿದ್ದಾರೆ. ಕ್ಷೇತ್ರದ ಜನತೆಯ ಆಶೀರ್ವಾದ ಅವರ ಮೇಲೆ ಇರಲಿ ಎಂದರು.
ಶಾಸಕ ಪಿ.ರವಿಕುಮಾರ್ ಅವರು ಮಾತನಾಡಿ, ಜಿಲ್ಲೆಗೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು 10 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿ ಜಿಲ್ಲೆಯ ಅಭಿವೃದ್ಧಿ ಶ್ರಮಿಸಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಹಳ್ಳಿಯಲ್ಲಿ ಉತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ. ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕಾಶಿ ವಿಶ್ವನಾಥ ದೇವಾಲಯ ಭಾರತದಲ್ಲಿ ಎರಡು ಕಡೆ ಇದೆ. ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಒಂದು ಇರುವುದು ನಮಗೆ ಹೆಮ್ಮೆ ಎಂದರು.ಮಂಡ್ಯ ವಿಧಾನಸಭಾ ಕ್ಷೇತ್ರದ ರಸ್ತೆ, ವಿದ್ಯುತ್, ನಿರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರು.1500 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕೇವಲ ಮಂಡ್ಯ ನಗರದ ಅಭಿವೃದ್ಧಿಗೆ ರು.600 ಕೋಟಿ ಭರಿಸಲಾಗಿದೆ. ಇನ್ನೂ ಆರು ತಿಂಗಳೊಳಗೆ ಹೊಸ ಮಂಡ್ಯ ನಿರ್ಮಾಣಗೊಳ್ಳಲಿದೆ. ಬೂದನೂರು ಉತ್ಸವದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ 10 ಸಾವಿರ ಮಹಿಳಾ ಸ್ಪರ್ಧಿಗಳು ಭಾಗಿ, ಚಿತ್ರ ಕಲೆ ಸ್ಪರ್ಧೆಯಲ್ಲಿ 5 ಸಾವಿರ ಮಕ್ಕಳು ಭಾಗಿಯಾಗಿದ್ದಾರೆ. ನಮ್ಮ ಜಿಲ್ಲೆಯ ರೈತರು ಹೆಲಿಕಾಪ್ಟರ್ ನಲ್ಲಿ ಸಂಚರಿಸಬೇಕು ಎಂಬ ಉದ್ದೇಶದಿಂದ ಹೆಲಿ ಟೂರಿಸಂ ಆಯೋಜನೆ ಮಾಡಲಾಗಿದೆ ಎಂದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಗೌಡ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ನಾನು ನನ್ನ ಕ್ಷೇತ್ರದಲ್ಲಿ ಮಾಡಬೇಕು ಎಂಬ ಹಂಬಲ ನನಗೂ ಉಂಟಾಗಿದೆ. 10 ಸಾವಿರ ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತೋಷದ ಸಂಗತಿ, ಇದೇ ರೀತಿ ಉತ್ಸವ ಪ್ರತಿ ವರ್ಷ ನಡೆಯಬೇಕು. ಮಂಡ್ಯ ಜಿಲ್ಲೆಯ ಶಾಸಕರು ಜಿಲ್ಲೆಗೆ 10 ಸಾವಿರ ಕೋಟಿ ಅನುದಾನ ತಂದಿರುವುದು ನಿಜಕ್ಕೂ ಶ್ಲಾಘನೀಯ. ಪಿ. ರವಿಕುಮಾರ್ ಅವರು ಉತ್ಸಾಹಿ ಶಾಸಕ, ಮಂಡ್ಯ ಜಿಲ್ಲೆಗೆ ನಿಜಕ್ಕೂ ಉತ್ತಮ ಶಾಸಕರನ್ನು ಆಯ್ಕೆ ಮಾಡಿಕೊಂಡಿದೆ ಎಂದರು.ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ರವಿಕುಮಾರ್ ಅವರು ಬೂದನೂರು ಉತ್ಸವದಿಂದ ನಾನು ಪ್ರೇರಣೆಗೊಂಡು ನಮ್ಮ ಚನ್ನಗಿರಿ ಕ್ಷೇತ್ರದಲ್ಲೂ ಇಂತಹ ಕಾರ್ಯಕ್ರಮ ಮಾಡಲು ಬಯಸುತ್ತೇನೆ. ಮುಂದಿನ ಚುನಾವಣೆಯಲ್ಲಿ ರವಿಕುಮಾರ್ ಅವರಿಗೆ ಮಂಡ್ಯ ಜನತೆ ಬೆಂಬಲ ನೀಡಿ ಎಂದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರದ ಸವಲತ್ತುಗಳನ್ನು ನೀಡುವ ಕಾರ್ಯಗಳನ್ನು ರವಿಕುಮಾರ್ ಅವರು ಯಶಸ್ವಿಯಾಗಿ ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯ ಆಚರಿಸಿ ಎಂದರು.ನಂತರ ಬೂದನೂರಿನ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ ಹಾಗೂ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಹಾಗೂ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಧಾನ ಪರಿಷತ್ ಶಾಸಕ ಮಧು ಜಿ ಮಾದೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಆತ್ಮಾನಂದ, ವಿಧಾನ ಪರಿಷತ್ ಶಾಸಕ ಅಪ್ಪಾಜಿಗೌಡ, ಮನ್ ಮುಲ್ ಅಧ್ಯಕ್ಷ ಶಿವಪ್ಪ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ಜಿಲ್ಲಾಧಿಕಾರಿ ಡಾ.ಕುಮಾರ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಜಿಲ್ಲಾ ಪಂಚಾಯ್ತಿ ಸಿಇಒ ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಶೋಭಾರಾಣಿ ವಿ.ಜೆ., ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚೆಲುವರಾಯಸ್ವಾಮಿ, ಮುಡಾ ಅಧ್ಯಕ್ಷ ಬಿ.ಪಿ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ನಟ ಕೆಂಪೇಗೌಡ, ರೆಡ್ ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.