ಬೇಸಿಗೆಯ ಬಿಸಿಲಿನ ಝಳ ಹೆಚ್ಚಾಗುತ್ತಿದಂತೆ ಮಹಾನಗರದ ಜನತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ಏನಿದ್ದರೂ ಈಗ ಹುಬ್ಬಳ್ಳಿ-ಧಾರವಾಡದಲ್ಲಿ ಮಂಡ್ಯ, ದಾವಣಗೆರೆ ಎಳನೀರಿನ ದರ್ಬಾರ್. 45ರಿಂದ 50 ರುಪಾಯಿವರೆಗೂ ಮಾರಾಟವಾಗುತ್ತಿವೆ. 1 ತಿಂಗಳಲ್ಲಿ ₹10 ಏರಿಕೆ!
ಶಿವಾನಂದ ಅಂಗಡಿ
ಹುಬ್ಬಳ್ಳಿ: ಬೇಸಿಗೆಯ ಬಿಸಿಲಿನ ಝಳ ಹೆಚ್ಚಾಗುತ್ತಿದಂತೆ ಮಹಾನಗರದ ಜನತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ಏನಿದ್ದರೂ ಈಗ ಹುಬ್ಬಳ್ಳಿ-ಧಾರವಾಡದಲ್ಲಿ ಮಂಡ್ಯ, ದಾವಣಗೆರೆ ಎಳನೀರಿನ ದರ್ಬಾರ್. 45ರಿಂದ 50 ರುಪಾಯಿವರೆಗೂ ಮಾರಾಟವಾಗುತ್ತಿವೆ. 1 ತಿಂಗಳಲ್ಲಿ ₹10 ಏರಿಕೆ!ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯ ಸಂತೆ ಮಾರುಕಟ್ಟೆ, ವ್ಯಾಪಾರ ವಹಿವಾಟು, ಕಚೇರಿ ಕೆಲಸ ಹೀಗೆ ನಾನಾ ಕಾರಣಗಳಿಂದ ನಿತ್ಯ ಲಕ್ಷಾಂತರ ಜನರು ಬರುತ್ತಾರೆ. ಕಳೆದ 15-20 ದಿನಗಳಿಂದ ಬಿಸಿಲು ಹೆಚ್ಚಾಗುತ್ತಿದ್ದು, ಬಸವಳಿದ ಜನತೆ ದೇಹವನ್ನು ತಂಪಾಗಿರಿಸಿಕೊಳ್ಳಲು ಎಳನೀರು, ಕಬ್ಬಿನ ಹಾಲು, ಮಜ್ಜಿಗೆ ಸೇರಿದಂತೆ ಲಸ್ಸಿ, ಲಿಂಬು ಜ್ಯೂಸ್, ಶರಬತ್, ಕಲ್ಲಂಗಡಿ, ಮೊಸಂಬಿ, ಆ್ಯಪಲ್, ಚಿಕ್ಕು ಸೇರಿ ನಾನಾ ಹಣ್ಣಿನ ಜ್ಯೂಸ್‌ಗಳನ್ನು ಸವಿಯುತ್ತಿದ್ದಾರೆ.
ಇಲ್ಲಿ ನೂರಾರು ಜ್ಯೂಸ್ ಸೆಂಟರ್‌ಗಳು ಇವೆ. ಅಲ್ಲಿ ಮಾರಾಟವಾಗುವ ತರಹೇವಾರಿ ಐಸ್‌ಕ್ರೀಂ, ತಂಪು ಪಾನೀಯಗಳು, ಹಣ್ಣಿನ ಜ್ಯೂಸ್‌ಗಳ ಆಕರ್ಷಣೆಯ ಮಧ್ಯೆಯೂ ಮಹಾನಗರಕ್ಕೆ ದಾವಣಗೆರೆ, ಮಂಡ್ಯದಿಂದ ನಿತ್ಯ ಹತ್ತಾರು ಲಾರಿಗಳಲ್ಲಿ ಎಳನೀರು ಆಗಮಿಸುತ್ತದೆ. ವ್ಯಾಪಾರಸ್ಥರ ಬೇಡಿಕೆಯಂತೆ ಅವರಿಗೆ ಎಳನೀರು ಮಾರಾಟ ಸ್ಥಳದಲ್ಲಿಯೇ ಬಂದು ಕೊಡುತ್ತಾರೆ. ಸ್ಥಳೀಯವಾಗಿ ತೋಟಗಳಿಂದಲೂ ಎಳನೀರು ಬರುತ್ತದೆ. ಎಳನೀರು ಗುಣಮಟ್ಟಕ್ಕೆ ತಕ್ಕಂತೆ ದರ ಹೆಚ್ಚಾಗಿದ್ದರೂ ಗ್ರಾಹಕರೇನೂ ಕಮ್ಮಿ ಆಗಿಲ್ಲ. ಪೋಷಕಾಂಶಗಳ ಆಗರ: ಎಳನೀರು ಪೋಷಕಾಂಶಗಳ ಆಗರವಾಗಿದ್ದು, ಬಿಸಿಲಿನಲ್ಲಿ ಬಸವಳಿದವರಿಗೆ ಶಕ್ತಿ ತುಂಬಿ ದೇಹ ನಿರ್ಜಲೀಕರಣವಾಗಂತೆ ತಡೆಯುತ್ತದೆ. ವಿಶೇಷವಾಗಿ ಕಿಡ್ನಿ ಕಲ್ಲು ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಕುಡಿಯುವಂತೆ ಸೂಚಿಸುತ್ತಾರೆ ವೈದ್ಯರು.ಹುಬ್ಬಳ್ಳಿಯ ರೋಟರಿ ಸ್ಕೂಲ್ ಹತ್ತಿರ, ವಿವೇಕಾನಂದ ಆಸ್ಪತ್ರೆ ಬಳಿ, ಕೇಶ್ವಾಪುರ ವೃತ್ತ, ರಮೇಶ ಭವನ ಬಳಿ, ಅಶೋಕನಗರ ರೈಲ್ವೆ ಬ್ರಿಡ್ಜ್ ಬಳಿ, ಕೆಎಂಸಿಆರ್‌ಐ ಆಸ್ಪತ್ರೆ ಆವರಣ, ಗೋಕುಲ್ ರಸ್ತೆ, ಪಿಂಟೋ ರಸ್ತೆ ಹೀಗೆ ಹುಬ್ಬಳ್ಳಿ ಬಹುತೇಕ ಜನವಸತಿ ಪ್ರದೇಶಗಳಲ್ಲಿ ಎಳನೀರು ಮಾರಾಟ ಮಾಡುತ್ತಾರೆ.ನಮ್ಮಲ್ಲಿ ಮಂಡ್ಯದ ಎಳನೀರಿಗೆ ಬಹುಬೇಡಿಕೆ ಪಡೆದಿದ್ದು, ತಿಂಗಳಿಂದ ಬೆಲೆ ಹೆಚ್ಚಳವಾಗಿದೆ. ಈಗ 50 ರುಪಾಯಿಗೆ ಒಂದು ಮಾರಾಟ ಮಾಡುತ್ತಿದ್ದೇವೆ. ದಿನವೊಂದಕ್ಕೆ 150ರಿಂದ 200ಕ್ಕೂ ಅಧಿಕ ಎಳನೀರು ಮಾರಾಟವಾಗುತ್ತಿದೆ. ಕೊಬ್ಬರಿ ಇರುವ ಕಾಯಿ ಸಹ 40ರಿಂದ 45 ರು.ವರೆಗೂ ಮಾರಾಟವಾಗುತ್ತಿದೆ ಎಂದು ಹುಬ್ಬಳ್ಳಿಯ ಅಶೋಕನಗರದ ಎಳನೀರು ವ್ಯಾಪಾರಿ ಮೋಹಿನ್ ಹೇಳಿದರು.
ಮಂಡ್ಯದ ಕಾಯಿಗಳಲ್ಲಿ ಎಳನೀರು ಜಾಸ್ತಿ ಇದ್ದು, ಕೊಬ್ಬರಿ ಸಹ ಇರುವುದಿಲ್ಲ. ಹೀಗಾಗಿ ಬೆಲೆ 50 ರುಪಾಯಿ ಆಗಿದ್ದರೂ ನಾವು ದೇಹವನ್ನು ತಂಪಾಗಿಸಿಕೊಳ್ಳಲು ಎಳನೀರು ಕುಡಿಯುತ್ತೇವೆ ಎಂದು ಎಳನೀರು ಗ್ರಾಹಕಿ ನೀಲಮ್ಮ ಹೇಳಿದರು.