೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಮತ್ತು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕಲಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಈಗಾಗಲೇ ಸ್ಥಳ ನಿಗದಿಪಡಿಸಿ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಉದ್ದೇಶಿತ ಜಾಗದಲ್ಲೇ ಕನ್ನಡ ಭವನ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಕನ್ನಡ ಭವನ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಒತ್ತಾಯಿಸಿದರು.

ಕ್ರೀಡಾ ಚಟುವಟಿಕೆಗಳಿಗೆ ತೊಂದರೆ ಮಾಡಿ ಕನ್ನಡ ಭವನ ನಿರ್ಮಾಣ ಮಾಡುವಂತೆ ಹೇಳುತ್ತಿಲ್ಲ. ಸೂಕ್ತ ಸ್ಥಳದಲ್ಲಿ ಜಾಗ ಗುರುತಿಸಿ ಅಲ್ಲಿ ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ಇನ್ನಿತರ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆಯೂ ಆಗ್ರಹಪಡಿಸಿದರು.

೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಮತ್ತು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕಲಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಈಗಾಗಲೇ ಸ್ಥಳ ನಿಗದಿಪಡಿಸಿ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿದೆ. ನಗರ ಕೇಂದ್ರ ಭಾಗದಲ್ಲಿರುವ ಈ ಸ್ಥಳದಲ್ಲಿ ಕನ್ನಡ ಭವನ ನಿರ್ಮಾಣವಾದಲ್ಲಿ ಸಾರ್ವಜನಿಕರು, ಸಾಹಿತಿಗಳು, ಕಲಾವಿದರಿಗೆ, ವಿವಿಧ ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ನಿಗದಿಪಡಿಸಿರುವ ಸ್ಥಳದಲ್ಲಿಯೇ ಕನ್ನಡ ಭವನ ನಿರ್ಮಾಣವಾಗುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಕನ್ನಡ ಭವನ ನಿರ್ಮಾಣಕ್ಕೆ ನಿಗದಿಪಡಿಸಿರುವ ಸ್ಥಳವನ್ನು ಬದಲಾಯಿಸುವ ಅಗತ್ಯವಿಲ್ಲ. ಜಿಲ್ಲಾಡಳಿತ ಹಾಗೂ ಸರ್ಕಾರ ಈ ವಿಷಯವನ್ನು ತುರ್ತಾಗಿ ಪರಿಗಣಿಸಿ ಸಿದ್ಧಪಡಿಸಿರುವ ಯೋಜನೆ ಮತ್ತು ನಕ್ಷೆಯಂತೆ ಕನ್ನಡ ಭವನದ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಕ್ರೀಡಾ ಚಟುವಟಿಕೆಗಳಿಗೂ ಪೂರಕ ಜಾಗವನ್ನು ಶೀಘ್ರವೇ ಗುರುತಿಸಿ ಕ್ರೀಡಾಪಟುಗಳಿಗೂ ಅನುಕೂಲ ಕಲ್ಪಿಸಿಕೊಡಬೇಕು. ಕನ್ನಡ ಭವನ ಎಷ್ಟು ಮುಖ್ಯವೋ, ಕ್ರೀಡೆಯೂ ಅಷ್ಟೇ ಮುಖ್ಯವಾಗಿದೆ. ಅದನ್ನೂ ಕಡೆಗಣಿಸದಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಪ್ರೊ.ಬಿ.ಜಯಪ್ರಕಾಶಗೌಡ, ಎಂ.ವಿ.ಧರಣೇಂದ್ರಯ್ಯ, ಪ್ರೊ.ಜಿ.ಟಿ.ವೀರಪ್ಪ, ಡಾ.ಮೀರಾ ಶಿವಲಿಂಗಯ್ಯ, ಪರಿಷತ್ತಿನ ಎಂ.ಆರ್.ಮಂಜುನಾಥ್, ಚಂದ್ರಲಿಂಗು, ಹರ್ಷ, ಮಹದೇವಯ್ಯ, ಕಾರಸವಾಡಿ ಮಹದೇವು, ರಾಮಾರಾಧ್ಯ ಅವಿನಾಶ್, ಮೋಹನ್, ಎಂ.ಪಿ.ವೇಣುಗೋಪಾಲ್, ಎಚ್.ಸಿ.ನಾಗರಾಜು, ಆರ್.ಡಿ.ಮಂಜುನಾಥ್, ಆರ್.ಕೆ.ರಾಮಕೃಷ್ಣ, ಕೆ.ಪಿ.ಯೋಗೇಶ್, ಡಾ.ಸುಮಾರಾಣಿ ಮತ್ತಿತರರಿದ್ದರು.