ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅರಣ್ಯ ಇಲಾಖೆ ಕಾಮಗಾರಿಗಳನ್ನು ನಡೆಸಿದ್ದ ಗುತ್ತಿಗೆದಾರರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಪೀಠೋಪಕರಣ, ಕಂಪ್ಯೂಟರ್, ವಾಹನಗಳ ಜಪ್ತಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅರಣ್ಯ ಇಲಾಖೆ ಕಾಮಗಾರಿಗಳನ್ನು ನಡೆಸಿದ್ದ ಗುತ್ತಿಗೆದಾರರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಪೀಠೋಪಕರಣ, ಕಂಪ್ಯೂಟರ್, ವಾಹನಗಳ ಜಪ್ತಿ ಮಾಡಲಾಯಿತು.

ವಕೀಲರೊಂದಿಗೆ ಆಗಮಿಸಿದ ಗುತ್ತಿಗೆದಾರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನ್ಯಾಯಾಲಯದ ಆದೇಶ ಪ್ರತಿ ನೀಡಿದರು. ಪೀಠೋಪಕರಣಗಳನ್ನು ತುಂಬಿಕೊಂಡು ಹೋಗುವುದಕ್ಕೆ ವಾಹನ ಸಮೇತ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಜಿಲ್ಲಾ ಅರಣ್ಯಾಧಿಕಾರಿ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿ ಮೇಲಧಿಕಾರಿಗಳಿಗೆ ಮಾಹಿತಿ ತಿಳಿಸಿ ಹಣ ಬಿಡುಗಡೆ ಮಾಡಿಸಲು ಸಮಯಾವಕಾಶ ನೀಡುವಂತೆ ಕೋರಿದರು. ಅದೆಲ್ಲವನ್ನೂ ನ್ಯಾಯಾಲಯದಲ್ಲೇ ತಮ್ಮ ವಕೀಲರ ಮೂಲಕ ಹೇಳುವಂತೆ ತಿಳಿಸಿ ಜಪ್ತಿ ಕಾರ್ಯ ನಡೆಸಿದರು.

ನಡೆದಿದ್ದೇನು?

ನಾಗಮಂಗಲ ತಾಲೂಕಿನ ಮಲ್ಲೇಗೌಡನಹಳ್ಳಿಯ ಎಂ.ವೈ.ಸುರೇಶ್‌ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಗ್ರಾಮದ ರಾಜಣ್ಣ ಗುತ್ತಿಗೆದಾರರಾಗಿದ್ದು, ಇವರಿಬ್ಬರೂ ೨೦೨೨ರಲ್ಲಿ ೩.೨೪ ಕೋಟಿ ರು. ವೆಚ್ಚದಲ್ಲಿ ೫೧ ಕಿ.ಮೀ. ದೂರದವರೆಗೆ ಫೆನ್ಸಿಂಗ್ ಕಾಮಗಾರಿ ನಡೆಸಿದ್ದರು. ಎಂ.ವೈ ಸುರೇಶ್‌ ಅವರು ೧೪ ಲಕ್ಷ ರು. ಹಾಗೂ ರಾಜಣ್ಣ ಅವರು ೫ ಲಕ್ಷ ರು. ಇಎಂಡಿ ಪಾವತಿಸಿದ್ದರು. ಕಾಮಗಾರಿ ಮುಗಿಸಿ ಇಲಾಖೆಗೆ ಬಿಲ್ ನೀಡಿದರೂ ಹಣ ಮಂಜೂರು ಮಾಡದೆ ಉದಾಸೀನತೆಯಿಂದ ನಡೆದುಕೊಳ್ಳುತ್ತಿದ್ದರಿಂದ ಅರಣ್ಯ ಇಲಾಖೆ ವ್ಯಾಜ್ಯಗಳನ್ನು ನಿರ್ಧರಿಸುವ ಆರ್.ಟಿ.ಸ್ಟೇಷನ್ ಮೊರೆ ಹೋಗಿ ಜಪ್ತಿ ಆದೇಶ ತಂದಿದ್ದಾರೆ.

ನಾಗಮಂಗಲ ತಾಲೂಕಿನ ಮಲ್ಲೇಗೌಡನಹಳ್ಳಿಯ ಎಂ.ವೈ.ಸುರೇಶ್‌ ಅವರು ಮಂಡ್ಯ, ಪಾಂಡವಪುರ, ನಾಗಮಂಗಲ ವಲಯ ಅರಣ್ಯ ವ್ಯಾಪ್ತಿಯಲ್ಲಿ ಸುಮಾರು ೩೯ ಕಿ.ಮೀ. ದೂರದವರೆಗೆ ೨,೫೪,೨೧,೦೮೧ ರು. ವೆಚ್ಚದಲ್ಲಿ ತಂತಿ ಬೇಲಿ ನಿರ್ಮಾಣ ಮಾಡಿದ್ದರು. ೨೦೨೨ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಬಿಲ್ ನೀಡಿದ್ದರು. ಈ ಕಾಮಗಾರಿಯ ಟೆಂಡರ್ ಪಡೆಯುವುದಕ್ಕೆ ೧೪ ಲಕ್ಷ ರು. ಹಣವನ್ನು ಭದ್ರತಾ ಠೇವಣಿಯಾಗಿ ಇರಿಸಿದ್ದರು.

ಇಲಾಖೆಗೆ ಬಿಲ್ ಪಾವತಿಸಿ ಕಚೇರಿಗೆ ಅಲೆದಾಡಿದರೂ ಅಧಿಕಾರದಲ್ಲಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಇವರನ್ನು ಸೌಜನ್ಯಕ್ಕೂ ಕರೆದು ಮಾತನಾಡಿಸಲಿಲ್ಲ. ಹಣ ಬಿಡುಗಡೆಯನ್ನೂ ಮಾಡಲಿಲ್ಲ. ಭದ್ರತಾ ಠೇವಣಿಯಾಗಿ ಇರಿಸಿದ್ದ ಹಣವನ್ನೂ ಮುಟ್ಟುಗೋಲು ಹಾಕಿಕೊಂಡರು. ಅರಣ್ಯ ಇಲಾಖೆ ಅಧಿಕಾರಿಗಳ ನಡೆಯಿಂದ ಬೇಸತ್ತ ಎಂ.ವೈ.ಸುರೇಶ್ ಆರ್.ಟಿ.ಸ್ಟೇಷನ್ ನ್ಯಾಯಾಲಯದ ಮೊರೆ ಹೋದರು. ಅಲ್ಲಿ ಪ್ರಕರಣದ ವಿಚಾರಣೆ ನಡೆದು ಗುತ್ತಿಗೆದಾರರು ಮಾಡಿರುವ ಕಾಮಗಾರಿಗೆ ಅರಣ್ಯ ಇಲಾಖೆ ಶೀಘ್ರವಾಗಿ ನಿಗದಿತ ಹಣ ಪಾವತಿಸುವಂತೆ ತೀರ್ಪು ನೀಡಿ ಕಾಲಾವಕಾಶ ನೀಡಿತು. ಅದನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಿದರು. ಆ ಹಿನ್ನೆಲೆಯಲ್ಲಿ ನ್ಯಾಯಾಲಯ ಇದೀಗ ಇಲಾಖೆ ಪೀಠೋಪಕರಣಗಳು, ಕಂಪ್ಯೂಟರ್‌ಗಳು, ಮೇಜು, ಕುರ್ಚಿಗಳು, ಅಧಿಕಾರಿಗಳ ವಾಹನಗಳ ಜಪ್ತಿಗೆ ಆದೇಶ ಹೊರಡಿಸಿತು.

ಶ್ರೀರಂಗಪಟ್ಟಣದ ಗೌಡಹಳ್ಳಿ ಗ್ರಾಮದ ರಾಜಣ್ಣ ಎಂಬುವರು ೨೦೨೨ರಲ್ಲಿ ಮೇಳಾಪುರ, ಕರೀಘಟ್ಟ, ದೊಡ್ಡ ಬೆಟ್ಟದಲ್ಲಿ ೧೨ ಕಿ.ಮೀ. ಉದ್ದದ ತಂತಿ ಬೇಲಿ ನಿರ್ಮಾಣಕ್ಕೆ ೭೦ ಲಕ್ಷ ರು. ಹಣ ಖರ್ಚು ಮಾಡಿದ್ದರು. ಭದ್ರತಾ ಠೇವಣಿಯಾಗಿ ೫ ಲಕ್ಷ ರು. ಹಣ ಪಾವತಿಸಿದ್ದರು.

ರಾಜಣ್ಣ ಅವರು ೩.೯.೨೦೨೨ರಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಇಲಾಖೆ ಅಧಿಕಾರಿಗಳಿಗೆ ಬಿಲ್ ನೀಡಿದ್ದಾರೆ. ಅವರ ಅಹವಾಲನ್ನು ಆಲಿಸದೆ ಕಚೇರಿಗೆ ಅಲೆಸುತ್ತಿದ್ದರು. ಇದರಿಂದ ಅವರೂ ಕೂಡ ಬೇಸತ್ತು ನ್ಯಾಯಾಲಯದಿಂದ ಜಪ್ತಿಗೆ ಆದೇಶ ತಂದಿದ್ದಾರೆ.

ವಿಷಯ ತಿಳಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು ಅವರು ಮೇಲಧಿಕಾರಿಗಳ ಜೊತೆ ಮಾತನಾಡಿದರು. ಗುತ್ತಿಗೆದಾರರ ಜೊತೆಯೂ ಮಾತುಕತೆ ನಡೆಸಿ ಸಮಯಾವಕಾಶ ನೀಡುವಂತೆ ಮನವಿ ಮಾಡಿದರು. ಹದಿನೈದು ದಿನಗಳವರೆಗೆ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಹಣ ಪಾವತಿಸುವಂತೆ ತಿಳಿಸಿದರು. ಅದಕ್ಕೆ ರಘು ಹಣ ಪಾವತಿಗೆ ಸಮಯ ನಿಗದಿಮಾಡಲಾಗುವುದಿಲ್ಲ ಎಂದಾಗ ನೀವು ಏನು ಹೇಳುವಿರೋ ವಕೀಲರ ಮೂಲಕ ನ್ಯಾಯಾಲಯದಲ್ಲಿ ಹೇಳಿ. ನ್ಯಾಯಾಲಯದ ಆದೇಶದಂತೆ ಪ್ರಕ್ರಿಯೆಗಳು ನಡೆಯಲಿವೆ ಎಂದು ಗುತ್ತಿಗೆದಾರರ ಜೊತೆ ಬಂದಿದ್ದ ವಕೀಲರ ತಂಡ ತಿಳಿಸಿತು.