ಇನ್ಮುಂದೆ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಖಾಸಗಿ-ಸರ್ಕಾರಿ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಾಯಿಗಳು ವಾಸವಿದ್ದರೆ ಅದನ್ನು ಪರಿಶೀಲಿಸಿ ಪೌರಾಯುಕ್ತರು ಇಲ್ಲವೇ ಮುಖ್ಯಾಧಿಕಾರಿಗೆ ಲೆಕ್ಕ ಕೊಡಬೇಕು. ನಾಯಿಗಳ ಪ್ರವೇಶ ನಿರ್ಬಂಧಿಸುವುದನ್ನು ಮೇಲ್ವಿಚಾರಣೆ ಮಾಡಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಇನ್ಮುಂದೆ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಖಾಸಗಿ-ಸರ್ಕಾರಿ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಾಯಿಗಳು ವಾಸವಿದ್ದರೆ ಅದನ್ನು ಪರಿಶೀಲಿಸಿ ಪೌರಾಯುಕ್ತರು ಇಲ್ಲವೇ ಮುಖ್ಯಾಧಿಕಾರಿಗೆ ಲೆಕ್ಕ ಕೊಡಬೇಕು. ನಾಯಿಗಳ ಪ್ರವೇಶ ನಿರ್ಬಂಧಿಸುವುದನ್ನು ಮೇಲ್ವಿಚಾರಣೆ ಮಾಡಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ಒಮ್ಮೆ ನಾಯಿಗಳು ಮತ್ತೆ ವಾಸ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರೆ ಸ್ಥಳಾಂತರ ವೆಚ್ಚವನ್ನು ಸಂಸ್ಥೆಗಳಿಂದಲೇ ವಸೂಲಿ ಮಾಡಲಾಗುವುದು.

ಇದು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ನಗರ ಸ್ಥಳೀಯ ಸಂಸ್ಥೆಗಳಿಂದ ಹೊರಬಿದ್ದಿರುವ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಯವರಿಗೆ ನೀಡಿರುವ ಎಚ್ಚರಿಕೆ.

ಬೀದಿ ನಾಯಿಗಳ ಉಪಟಳವನ್ನು ತಡೆಯುವ ನಿಟ್ಟಿನಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆಯಾದರೂ ಅದು ಪರಿಣಾಮಕಾರಿಯಾಗಿ ಯಶಸ್ಸು ಕಂಡಿಲ್ಲ. ಬೀದಿ ನಾಯಿಗಳ ದಾಳಿಯಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ. ನಾಯಿಗಳ ನಿಯಂತ್ರಣಕ್ಕೆ ಜನರಿಂದ ನಿರಂತರ ಒತ್ತಡವಿದ್ದರೂ ಕಾನೂನು ಭಯದಿಂದ ನಗರ ಸ್ಥಳೀಯ ಸಂಸ್ಥೆಗಳು ಕೈಚೆಲ್ಲಿ ಕುಳಿತಿದ್ದವು.

ಇದೀಗ ಸರ್ವೋಚ್ಛ ನ್ಯಾಯಾಲಯವು ಸ್ವಯಂ ಪ್ರೇರಿತ ರಿಟ್ ಅರ್ಜಿ ಸಂಖ್ಯೆ ೫/೨೦೨೫ರಲ್ಲಿ ನೀಡಿರುವ ನಿರ್ದೇಶನದಂತೆ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳೂ ಸೇರಿದಂತೆ ಸಂಸ್ಥೆಗಳ ಆವರಣದಲ್ಲಿ ಯಾವುದೇ ಬೀದಿ ನಾಯಿಗಳು ವಾಸವಿದ್ದರೆ ಅದನ್ನು ಪರಿಶೀಲಿಸಿ ಕೂಡಲೇ ಅದರ ಸಂಖ್ಯೆಯನ್ನು ಲೆಕ್ಕ ಮಾಡಿ ಪೌರಾಯುಕ್ತರು, ಮುಖ್ಯಾಧಿಕಾರಿಗೆ ಸಲ್ಲಿಸುವಂತೆ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.

ತಮ್ಮ ಸಂಸ್ಥೆಯ ಆವರಣದಲ್ಲಿ ಬೀದಿ ನಾಯಿಗಳ ಉಪಟಳ ತಡೆಯಲು ಹಾಗೂ ಅವುಗಳ ಪ್ರವೇಶ ನಿಯಂತ್ರಿಸಲು ಕ್ರಮ ವಹಿಸುವುದು. ಅವುಗಳ ಪ್ರವೇಶ ನಿರ್ಬಂಧಕ್ಕೆ ತಂತಿಬೇಲಿ ಅಳವಡಿಸಿಕೊಳ್ಳುವುದು, ನಾಯಿಗಳು ಪ್ರವೇಶಿಸದಂತೆ ಮೇಲ್ವಿಚಾರಣೆ ಮಾಡಲು ಸಂಸ್ಥೆಯಿಂದ ಒಬ್ಬ ಜವಾಬ್ದಾರಿಯುತ ನೌಕರರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಬೇಕು.

ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ತಮ್ಮ ಸಂಸ್ಥೆಯ ವ್ಯಾಪ್ತಿಯಲ್ಲಿ ಪುನಃ ನಾಯಿಗಳು ವಾಸ ಮಾಡಲು ಅವಕಾಶ ಮಾಡಿಕೊಟ್ಟಲ್ಲಿ ಅವನ್ನು ಸ್ಥಳಾಂತರಿಸುವ ವೆಚ್ಚವನ್ನು ಸಂಸ್ಥೆಗಳಿಂದಲೇ ವಸೂಲಿ ಮಾಡಲಾಗುವುದು. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸ್ಥಳಾಂತರಕ್ಕೆ ಜಾಗ ಗುರುತು, ಫೈನಲ್ ಆಗಿಲ್ಲ:

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳ ಸ್ಥಳಾಂತರಕ್ಕೆ ಮಂಡ್ಯ ನಗರಸಭೆಯಿಂದ ಕಾಳೇನಹಳ್ಳಿ ಬಳಿ ಜಾಗ ಗುರುತಿಸಲಾಗಿದೆ. ಆದರೆ, ಆ ಜಾಗ ಇನ್ನೂ ಅಂತಿಮವಾಗಿಲ್ಲ. ನಗರಸಭೆ ವ್ಯಾಪ್ತಿಯಲ್ಲಿರುವ ನಾಯಿಗಳನ್ನು ಅಲ್ಲಿಗೆ ಸ್ಥಳಾಂತರಿಸಿ ಅಲ್ಲೇ ಆಶ್ರಯ ನೀಡಲು ಚಿಂತನೆ ನಡೆಸಲಾಗಿದೆ. ಆದರೆ, ನಾಯಿಗಳ ಆಶ್ರಯ ತಾಣ ಹೇಗಿರಬೇಕು, ಅವುಗಳು ಅಲ್ಲಿಂದ ಮತ್ತೆ ಹೊರಗೆ ಬರದಂತೆ ಏನೆಲ್ಲಾ ವ್ಯವಸ್ಥೆ ಮಾಡಬೇಕು, ಅವುಗಳಿಗೆ ಆಹಾರ ವಿತರಣೆ ಮಾಡುವುದು ಹೇಗೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.

92 ಸಂಸ್ಥೆಗಳಿಗೆ ನೋಟಿಸ್ ಜಾರಿ:

ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಇರುವ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ನಾಯಿಗಳ ಪ್ರವೇಶಕ್ಕೆ ನಿರ್ಬಂಧ ಹೇರುವ ಸಂಬಂಧ ಇದುವರೆಗೆ ನಗರಸಭೆಯಿಂದ ೯೨ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆ, ಸಾರಿಗೆ ಇಲಾಖೆ, ಶಾಲಾ-ಕಾಲೇಜುಗಳು, ಕ್ರೀಡಾಂಗಣಗಳು, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸೂಚನೆ ನೀಡಲಾಗಿದೆ.

ಈವರೆಗೆ ೨೩೦ ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ:

ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ೩೦ ಲಕ್ಷ ರು. ವೆಚ್ಚದಲ್ಲಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನು ನಗರಸಭೆಯಿಂದ ನಡೆಸಲಾಗುತ್ತಿದೆ. ಇದುವರೆಗೆ ೨೩೦ ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ನಡೆಸಿ ರೇಬೀಸ್ ಚುಚ್ಚುಮದ್ದನ್ನು ನೀಡಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ನಾಯಿಗಳನ್ನು ಆರೈಕೆ ಮಾಡಿ ಆರೋಗ್ಯವನ್ನು ಪರಿಶೀಲಿಸಿ ಅವುಗಳನ್ನು ಯಾವ ಜಾಗದಲ್ಲಿ ಹಿಡಿದರೋ ಅದೇ ಜಾಗಕ್ಕೆ ಜಿಪಿಎಸ್ ಫೋಟೋ ಸಹಿತ ಬಿಡುವ ಕಾರ್ಯ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ೩ ಸಾವಿರ ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ನಡೆಸುವ ಗುರಿ ಹೊಂದಲಾಗಿದೆ. ಒಂದೊಂದು ನಾಯಿಗೆ ೧೭೨೨ ರು.ನಂತೆ ಖರ್ಚು ಮಾಡಲಾಗುತ್ತಿದೆ.

ದಿನಕ್ಕೆ ೧೫ ರಿಂದ ೨೦ ನಾಯಿಗಳನ್ನು ಮಾತ್ರ ಹಿಡಿದು ಅವುಗಳನ್ನು ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.ಸುಪ್ರೀಂ ಕೋರ್ಟ್ ಆದೇಶದಂತೆ ನಾಯಿಗಳ ಉಪಟಳ ತಡೆಗೆ ಕ್ರಮ ವಹಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿ ನಾಯಿಗಳ ಲೆಕ್ಕ ನೀಡುವಂತೆ, ಅವುಗಳ ಪ್ರವೇಶ ನಿರ್ಬಂಧಿಸುವಂತೆ ಸೂಚಿಸಲಾಗಿದೆ. ಸಂಸ್ಥೆಗಳು ಈ ವಿಚಾರದಲ್ಲಿ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ನಾಯಿಗಳಿಗೆ ಆಶ್ರಯ ಕಲ್ಪಿಸುವ ಸಂಬಂಧ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.

- ಡಾ.ಕುಮಾರ, ಆಡಳಿತಾಧಿಕಾರಿ, ನಗರಸಭೆನಗರಸಭೆಯಿಂದ ಈವರೆಗೆ ೯೨ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ನಾಯಿಗಳ ಆಶ್ರಯ ದೊರಕಿಸಲು ಕಾಳೇನಹಳ್ಳಿ ಬಳಿ ಜಾಗ ಗುರುತಿಸಲಾಗುತ್ತಿದೆ. ಇದುವರೆಗೆ ೨೪೮ ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ನಡೆಸಿ, ರೇಬೀಸ್ ಚುಚ್ಚುಮದ್ದು ನೀಡಲಾಗಿದೆ. ನಾಯಿಗಳ ಪ್ರವೇಶ ನಿರ್ಬಂಧಕ್ಕೆ ಖಾಸಗಿ-ಸರ್ಕಾರಿ ಸಂಸ್ಥೆಯವರು ಕ್ರಮ ವಹಿಸಿ ನಗರಸಭೆಯೊಂದಿಗೆ ಸಹಕರಿಸಬೇಕಿದೆ.

- ಯು.ಪಿ.ಪಂಪಾಶ್ರೀ, ಪೌರಾಯುಕ್ತರು, ನಗರಸಭೆ