ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರದ ಕಾರ್ಮಿಕ, ರೈತ ವಿರೋಧಿ ನೀತಿಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿವಿಧ ಕ್ಷೇತ್ರಗಳ ಕಾರ್ಮಿಕ ಸಂಘಟನೆಗಳು ಗುರುವಾರ ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.ಆಶಾ ಕಾರ್ಯಕರ್ತೆಯರು, ಕರ್ಣಾಟಕ ಗ್ರಾಮೀಣ ಬ್ಯಾಂಕ್, ಸೆಸ್ಕಾಂ ಕಾರ್ಮಿಕರು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದವರು ಪ್ರತಿಭಟನೆಗಳನ್ನು ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕರ್ಣಾಟಕ ಬ್ಯಾಂಕ್ ನೌಕರರ ಪ್ರತಿಭಟನೆ:ದೇಶದ ೧೦ ಕೇಂದ್ರ ಕಾರ್ಮಿಕ ಸಂಘಟನೆಗಳು ನೀಡಿದ ಮುಷ್ಕರದ ಕರೆಗೆ ಕರ್ಣಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕರ್ಣಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘ, ಕರ್ಣಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಕರ್ಣಾಟಕ ಗ್ರಾಮೀಣ ಬ್ಯಾಂಕ್ ನೌಕರರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು, ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ಖಾಸಗೀಕರಣ ಹಾಗೂ ನೌಕರರ ಭದ್ರತೆಯನ್ನು ದುರ್ಬಲಗೊಳಿಸುವ ಕ್ರಮಗಳ ವಿರುದ್ಧ ಗ್ರಾಮೀಣ ಬ್ಯಾಂಕ್ ನೌಕರರು ಬಲವಾಗಿ ತಮ್ಮ ಧ್ವನಿಯನ್ನು ಎತ್ತಿದ್ದಾರೆ. ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿರುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಮತ್ತು ವಿಮೆ ಸಂಸ್ಥೆಗಳನ್ನು ಬಲಪಡಿಸುವ ಬದಲು ಅವುಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ವಿಮೆ ಸಂಸ್ಥೆಗಳನ್ನು ಬಲಪಡಿಸಬೇಕು. ಗ್ರಾಮೀಣ ಬ್ಯಾಂಕ್, ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಎಲ್‌ಐಸಿ ಮತ್ತು ಜಿಐಸಿಗಳಲ್ಲಿ ಖಾಸಗೀಕರಣ, ಐಪಿಒ ನಿಲ್ಲಿಸಬೇಕು. ಗ್ರಾಮೀಣ ಬ್ಯಾಂಕ್‌ಗಳಲ್ಲಿ ಪ್ರೊಮೋಷನ್ ರೂಲ್ಸ್, ಸರ್ವಿಸ್ ರೂಲ್ಸ್‌ಗಳನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿರುವಂತೆ ಪರಿಷ್ಕರಿಸಬೇಕು. ಸಮರ್ಪಕ ನೇಮಕಾತಿ ಮಾಡಬೇಕು. ಹೊರಗುತ್ತಿಗೆ ಮತ್ತು ಕಾನ್‌ಟ್ರಾಕ್ಟ್ ಉದ್ಯೋಗಗಳನ್ನು ನಿಲ್ಲಿಸಬೇಕು. ಗ್ರಾಮೀಣ ಬ್ಯಾಂಕ್‌ಗಳಲ್ಲಿ ಎಲ್ಲಾ ಹೊರಗುತ್ತಿಗೆ, ದಿನಗೂಲಿ, ಸಾಮಾನ್ಯ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ನೌಕರರ ಸಂಘದ ಕಾರ್ಯಾಧ್ಯಕ್ಷ ವಸಂತ್‌ಕುಮಾರ್, ಸತ್ಯಾನಂದಸ್ವಾಮಿ, ನಟರಾಜ್, ವಿಜಯ್, ನಿತಿನ್, ಮಹೇಶ್, ಹರೀಶ್, ಪುಟ್ಟಸ್ವಾಮಿ, ನಾಗೇಶ್, ಪ್ರದೀಪ್, ಶ್ರೀಧರ್, ಬಿಂದ್ಯಾ, ಅರ್ಪಿತ, ಸವಿತಾ, ದೇವಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಆಶಾ ಕಾರ್ಯಕರ್ತೆಯರ ಪ್ರತಿಭಟನೆ:
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಆಶಾ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ೨೦೨೫ ಜನವರಿಯಲ್ಲಿ ತಾವು ಘೋಷಿಸಿದ ರು. ೧೦ ಸಾವಿರ ಮಾಸಿಕ ಗ್ಯಾರಂಟಿಯನ್ನು ಕೂಡಲೇ ಜಾರಿಗೆ ತರಬೇಕು. ಇದೇ ೨೦೨೬ ಮಾರ್ಚ್ ರಾಜ್ಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದ ಗೌರವಧನ ಹೆಚ್ಚಳ ಮಾಡಬೇಕು. ರಾಜ್ಯದಲ್ಲಿ ೪ ಲೇಬರ್ ಕೋಡ್‌ಗಳನ್ನು ಅನುಷ್ಠಾನಕ್ಕೆ ತರಬಾರದು ಮತ್ತು ಕನಿಷ್ಠ ವೇತನ ಪರಿಷ್ಕರಣೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಜ್ಯೋತಿ, ಮುಖಂಡರಾದ ಮಂಜುಳ, ಜ್ಯೋತಿ, ನಾಗಮ್ಮ, ಎಂ.ಬಿ. ಪುಷ್ಪಾವತಿ, ಪಲ್ಲವಿ, ಶೋಭ, ಸುಧಾ, ಇಂದ್ರ, ಶಾರದಾ ಇತರರಿದ್ದರು.ಸೆಸ್ಕಾಂ ನೌಕರರಿಂದ ಪ್ರತಿಭಟನೆ:
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘದ ಪದಾಧಿಕಾರಿಗಳು ಸದಸ್ಯರು ನಗರದ ಎಂ.ಸಿ.ರಸ್ತೆಯಲ್ಲಿರುವ ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್‌ರವರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಕೇಂದ್ರದ ವಿದ್ಯುತ್ ಖಾಸಗಿಕರಣ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ನೌಕರರು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ಈ ವೇಳೆ ಕಾರ್ಯಪಾಲಕ ಎಂಜಿನಿಯರ್ ವಿನುತಾ ಬಾಯಿ ಮಾತನಾಡಿ, ಇಂಧನ ಇಲಾಖೆ ಸಾರ್ವಜನಿಕರ ಆಸ್ತಿ. ಇದನ್ನು ಖಾಸಗಿಕರಣಗೊಳಿಸಿ ನೌಕರರಿಗೆ ಮರಣ ಶಾಸನ ಬರೆಯಲು ಹೊರಟಿದೆ. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ನಾವು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಲೋಕಸಭೆಯಲ್ಲಿ ಇದು ಮಂಡನೆಯಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ರೈತರಿಗೆ ಸರ್ಕಾರ ಹಲವು ಯೋಜನೆಯಡಿ ವಿದ್ಯುತ್ ನೀಡಲಾಗುತ್ತಿದೆ. ಅಂತಹವರಿಗೆ ತೊಂದರೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ರೈತನಿಂದ ಪ್ರಾರಂಭವಾಗಿ ಕೈಗಾರಿಕೆಯವರೆಗೂ ಖಾಸಗೀಕರಣ ಮಾಡಿದರೆ ಯಾರೊಬ್ಬರೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಅನ್ನದಾತರಾದ ರೈತರಿಗೆ ಅನ್ಯಾಯ ಮಾಡಿ ೨೦೨೬ರ ಅಧಿವೇಶದಲ್ಲಿ ವಿದ್ಯುತ್ ಕಾಯಿದೆ ಬಿಲ್ಲನ್ನು ತಿದ್ದುಪಡಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಈ ಕೂಡಲೇ ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಚೆಸ್ಕಾಂ ಲೆಕ್ಕಾಧಿಕಾರಿ ರವಿಚಂದ್ರ, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಅರುಣೇಶ್, ಕಾರ್ಮಿಕ ಒಕ್ಕೂಟದ ನಿರ್ದೇಶಕ ಶಿವಲಿಂಗು, ರಾಜ್ಯ ಉಪಾಧ್ಯಕ್ಷ ಮಹೇಂದ್ರ, ಕಾರ್ಯಪಾಲಕ ಇಂಜಿನಿಯರ್ ಶ್ವೇತಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ರಾಕೇಶ್, ಪ್ರತಿಭಾ, ಸೌಮ್ಯ, ಹೇಮಂತ್‌ಕುಮಾರ್, ಶಿವಕುಮಾರ್ ಮತ್ತಿತರರಿದ್ದರು.ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ:
ತಮಿಳುನಾಡು ಮತ್ತು ಕೇರಳ ರಾಜ್ಯಸರ್ಕಾರಗಳು ತಮ್ಮ ನೌಕರರಿಗೆ ಸುಧಾರಿತ ಪಿಂಚಣಿ ಜಾರಿಗೊಳಿಸಿವೆ. ಇದರಲ್ಲಿ ಎನ್‌ಪಿಎಸ್, ಯುಪಿಎಸ್ ಪದ್ಧತಿಗೆ ಬದಲಾಗಿ ಶೇ.೫೦ರಷ್ಟು ಪಿಂಚಣಿಯನ್ನು ಖಾತ್ರಿಪಡಿಸಿವೆ. ರಾಜ್ಯಸರ್ಕಾರಿ ನೌಕರರಿಗೆ ನೌಕರರ ಯಾವುದೇ ವಂತಿಕ ಇಲ್ಲದೆ ಶೇ.೫೦ರಷ್ಟು ಪಿಂಚಣಿಯೊಂದಿಗೆ ಈ ಹಿಂದಿನ ನಿಶ್ಚಿತ ಪಿಂಚಣಿ ಪದ್ಧತಿಯನ್ನು ಮರು ಸ್ಥಾಪಿಸಬೇಕು ನೌಕರರು ಒತ್ತಾಯಿಸಿದರು.ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡುಉದು, ಗುತ್ತಿಗೆ-ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಿ ಅವರಿಗೆ ನೇರ ನೇಮಕಾತಿಯಲ್ಲಿ ನಿಯಮಾನುಸಾರ ಪ್ರಾತಿನಿಧ್ಯ ನೀಡುವುದು, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಿಗೆ ಮೂಲ ಸೌಲಭ್ಯ ಒದಗಿಸುವುದರ ಮೂಲಕ ಬಲಪಡಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಕೈಬಿಟ್ಟು ಶಿಕ್ಷಕರಿಗೆ ಕಡ್ಡಾಯಗೊಳಿಸಿರುವ ಟಿಇಟಿ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನೌಕರ, ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ರದ್ದುಪಡಿಸುವುದು, ಐದು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ, ಗುತ್ತಿಗೆ, ದಿನಗೂಲಿ ನೌಕರರಿಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಎನ್.ಮಲ್ಲೇಶ್, ಮಹದೇವ, ಟಿ.ಎಸ್.ಸುನೀಲ್‌ಕುಮಾರ್ ಇತರರಿದ್ದರು.