ಹೆಚ್.ಕೆ.ಅಶ್ವಥ್, ಹಳುವಾಡಿ
ಕನ್ನಡಪ್ರಭ ವಾರ್ತೆ ಮಂಡ್ಯಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆಯಾಗಿದೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆಗಸ್ಟ್ ಮಧ್ಯ ಭಾಗದ ವೇಳೆಗೆ ಸುಮಾರು ಅರ್ಧದಷ್ಟು ಬಿತ್ತನೆ ಕಾರ್ಯ ಪೂರ್ಣಗೊಳ್ಳಬೇಕಿತ್ತಾದರೂ ಇದುವರೆಗೆ ಶೇ.11.7 ರಷ್ಟು ಬಿತ್ತನೆ ಮಾಡಿದ್ದು, ಕಳೆದ ವರ್ಷಕ್ಕೆ ಹೊಲಿಸಿದರೆ ಶೇ.20.1 ರಷ್ಟು ಕ್ಷೀಣಿಸಿದೆ.
ಬೋರ್ ವೆಲ್, ಕೆರೆ ಆಧಾರಿತ, ಪಂಪ್ ಸೆಟ್ ಅವಲಂಬಿತ ಕೃಷಿ ಪ್ರದೇಶ, ನದಿ ನೀರಿನ ಆಶ್ರಿತ ಜಮೀನುಗಳಲ್ಲಿ ರೈತರು ಈಗಾಗಲೇ ಬಿತ್ತನೆ ಕಾರ್ಯ ಮಾಡಿದ್ದಾರೆ. ಆದರೆ, ನಾಲೆ ನೀರು ಅವಲಂಬಿತ, ಮಳೆ ಆಧಾರಿತ ಪ್ರದೇಶಗಳಲ್ಲಿ ಇನ್ನೂ ಯಾವುದೇ ಬಿತ್ತನೆ ಕಾರ್ಯ ನಡೆದಿಲ್ಲ.ಈ ವರ್ಷ 2,06,835 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಇದುವರೆಗೆ ಕೇವಲ 24,123 (ಶೇ.11.7) ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 61,685 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ.32.1 ರಷ್ಟು ಸಾಧನೆ ಮಾಡಲಾಗಿತ್ತು.
ಈ ವರ್ಷ 56,889 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡುವ ನಿರೀಕ್ಷೆ ಮಾಡಲಾಗಿತ್ತು. ಆದರೆ, 537 ಹೆಕ್ಟೇರ್ ಪ್ರದೇಶದಲ್ಲಿ (ಶೇ.28ರಷ್ಟು) ಮಾತ್ರ ನಾಟಿಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲೇ 4425 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗಿತ್ತು.
ರಾಗಿ 63,385 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ನಿರೀಕ್ಷೆ ಇತ್ತು. 102 ಹೆಕ್ಟೇರ್ ಪ್ರದೇಶದಲ್ಲಿ (ಶೇ.31 ರಷ್ಟು) ಬಿತ್ತನೆ ಕಾರ್ಯ ನಡೆದಿದೆ. ಕಳೆದ ವರ್ಷ 3347 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಕಬ್ಬು 42,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು, ಆದರೆ, ಮಳೆ ಕೊರತೆಯಿಂದ ಕೇವಲ 9033 (ಶೇ.20 ರಷ್ಟು) ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯವಾಗಿದೆ.
ಉಳಿದಂತೆ ಮುಸುಕಿನ ಜೋಳ 5000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, 2074 (ಶೇ.2ರಷ್ಟು) ಹೆಕ್ಟೇರ್ ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ 3166 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಅಲಸಂದೆ 20,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು, ಆದರೆ, 9957(ಶೇ.49.8ರಷ್ಟು) ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಅತಿ ಹೆಚ್ಚು 17405 ಹೆಕ್ಟೇರ್ ನಲ್ಲಿ ಬಿತ್ತನೆಯಾಗಿತ್ತು. 19561 ಹೆಕ್ಟೇರ್ ಪ್ರದೇಶದಲ್ಲಿ ಇತರೆ ಬೆಳೆಗಳು ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಕೇವಲ 2420(ಶೇ.9ರಷ್ಟು) ಬಿತ್ತನೆ ನಡೆದಿದೆ. ಕಳೆದ ವರ್ಷ 8336 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು.ಜಿಲ್ಲೆಯಲ್ಲಿ ಅಲಸಂದೆ, ನೆಲಗಡಲೆ, ಭತ್ತ, ರಾಗಿ, ಮುಸುಕಿನಜೋಳ, ತೊಗರಿ ಸೇರಿದಂತೆ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಇದ್ದು, ನೀರಿನ ಕೊರತೆಯಿಂದಾಗಿ ಕೊಂಡುಕೊಳ್ಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ 7 ತಾಲೂಕುಗಳಿಂದ 8239 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದರೂ 11,600 ಕ್ವಿಂಟಾಲ್ ಲಭ್ಯವಿದೆ. ಸದ್ಯಕ್ಕೆ 660 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. ಇದರಲ್ಲಿ 385 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ.
ಒಣಗುತ್ತಿರುವ ಬೆಳೆಗಳು:ಜಿಲ್ಲೆಯ ಒಟ್ಟು 47,603 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, ಉದ್ದು, ಎಳ್ಳು, ಮುಸುಕಿನ ಜೋಳ, ಅಲಸಂದೆ ಬೆಳೆಗಳಿದ್ದು, ಉದ್ದು ಮತ್ತು ಎಳ್ಳಿನ ಬೆಳೆ ಕಟಾವು ಮುಗಿದಿದೆ. ಆದರೆ, ಅಲಸಂದೆ 9957 ಹೆಕ್ಟೇರ್ ಪ್ರದೇಶ, ಮುಸುಕಿನ ಜೋಳ 50 ಹೆಕ್ಟೇರ್ ಪ್ರದೇಶದಲ್ಲಿ ಬಾಡುತ್ತಿದೆ. 4267 ಹೆಕ್ಟೇರ್ ಕಬ್ಬಿನ ಬೆಳೆ ಸೇರಿ ಒಟ್ಟು 14,274 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಒಣಗುತ್ತಿದೆ.
ಅಲಸಂದೆ ಕಟಾವು ಹಂತದಲ್ಲಿದೆ, ಮುಸುಕಿನ ಜೋಳ ಬೆಳವಣಿಗೆಯಿಂದ ತೆನೆ ಬಿಡುವ ಹಂತದಲ್ಲಿದೆ. ಕಬ್ಬು ವಿವಿಧ ಬೆಳವಣಿಗೆ ಹಂತದಲ್ಲಿದ್ದು, ನೀರಿನ ಲಭ್ಯತೆ ಇರುವ ಕಡೆ ಮುಸುಗಿನ ಜೋಳ 2024 ಹೆಕ್ಟೇರ್, ಕಬ್ಬು 29,410 ಹೆಕ್ಟೇರ್ ಸೇರಿ ಒಟ್ಟು 31,434 ಹೆಕ್ಟೇರ್ ಪ್ರದೇಶದಲ್ಲಿ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ.ಪೂರ್ವ ಮುಂಗಾರು, ಮುಂಗಾರು ಮಳೆ ಕೊರತೆಕಳೆದ ಮಾರ್ಚ್ ಆರಂಭದಿಂದ ಮೇ ಅಂತ್ಯದವರೆಗೆ ಪೂರ್ವ ಮುಂಗಾರು ಶೇ.12 ರಷ್ಟು ಕೊರತೆಯಾಗಿದೆ. ಜೂ.1ರಿಂದ ಆಗಸ್ಟ್ ಆರಂಭದವರೆಗೆ ಶೇ.42 ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ವಾಡಿಕೆ 290. 2 ಮಿಮಿ ಮಳೆಯಾಗಬೇಕಿತ್ತು. ಆದರೆ, 233.5 ರಷ್ಟು ಮಳೆಯಾಗಿ ಶೇ.25 ರಷ್ಟು ಮಳೆ ಕೊರತೆ ಉಂಟಾಗಿದೆ.
ಮಾರ್ಚ್ ನಲ್ಲಿ 12.5 ಮಿ ಮಿ ವಾಡಿಕೆ ಮಳೆಯಾಗಬೇಕಿತ್ತು. ಇದರಲ್ಲಿ 14.6 ಮಿ ಮಿ ಮಳೆಯಾಗಿದೆ. ಹೆಚ್ಚುವರಿ ಶೇ.17 ರಷ್ಟು ಮಳೆಯಾಗಿದೆ. ಏಪ್ರಿಲ್ ನಲ್ಲಿ 46.6 ಮಿ ಮಿ ವಾಡಿಕೆ ಮಳೆಯಲ್ಲಿ ಕೇವಲ 19.1 ಮಿ ಮಿ ಮಳೆಯಾಗಿದ್ದು, ಶೇ.59 ರಷ್ಟು ಕೊರತೆಯಾಗಿದೆ. ಮೇ ತಿಂಗಳಲ್ಲಿ ವಾಡಿಕೆ 99.9 ರಷ್ಟು ಮಳೆಯಾಗಬೇಕಿತ್ತು. 106.1 ರಷ್ಟು ಹೆಚ್ಚುವರಿ ಶೇ.6 ರಷ್ಟು ಮಳೆ ಸುರಿದಿದೆ.ಪೂರ್ವ ಮುಂಗಾರಿನ ಈ ಮೂರು ತಿಂಗಳಲ್ಲಿ ವಾಡಿಕೆ 159 ಮಿ ಮಿ ಮಳೆಯಾಗಬೇಕಿತ್ತು, ಇದರಲ್ಲಿ 139.8 ಮಿ ಮಿ ಮಳೆಯಾಗಿದ್ದು, ಶೇ.12 ರಷ್ಟು ಮಳೆ ಕೊರತೆಯಾಗಿದೆ.
ಮುಂಗಾರಿನ ಜೂನ್ ತಿಂಗಳಲ್ಲಿ ವಾಡಿಕೆ 56.5 ವಾಡಿಕೆ ಮಳೆ ಇದ್ದು, 64.1 ಮಿ ಮಿ ಮಳೆಯಾಗಿದೆ. ಹೆಚ್ಚುವರಿ ಶೇ.13 ರಷ್ಟು ಮಳೆ ಬಿದ್ದಿದೆ. ಜುಲೈ ನಲ್ಲಿ ವಾಡಿಕೆ 57.2 ಮಿ ಮಿ ಮಳೆ ಸುರಿಯಬೇಕಿತ್ತು, ಆದರೆ, ಕೇವಲ 10 ಮಿ ಮಿ ಮಳೆಯಾಗಿದೆ. ಶೇ.83 ರಷ್ಟು ಮಳೆ ಕೊರತೆ ಉಂಟಾಗಿದೆ. ಆಗಸ್ಟ್ 7ರವರೆಗೆ ವಾಡಿಕೆ 15.5 ಮಿ ಮಿ ಮಳೆಯಾಗಬೇಕಿತ್ತು. ಕೇವಲ 6.6 ಮಿ ಮಿ ಮಳೆಯಾಗಿ ಶೇ.57 ರಷ್ಟು ಕೊರತೆಯಾಗಿದೆ. ಮುಂಗಾರಿನಲ್ಲಿ ವಾಡಿಕೆ 129.2 ಮಿ ಮೀ ಮಳೆಯಲ್ಲಿ 80.8 ಮಿ ಮಿ ಮಾತ್ರ ಮಳೆ ಸುರಿದಿದೆ. ಶೇ.42 ರಷ್ಟು ಕೊರತೆಯಾಗಿದೆ.