ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿವಾದಿತ ಪ್ರದೇಶವಾದ ತಮಿಳು ಕಾಲೋನಿಯನ್ನು ಸರ್ವೇ ಮಾಡುವ ವಿಚಾರವಾಗಿ ಬಹುತೇಕ ನಿವಾಸಿಗಳಿಂದ ಸಮ್ಮತಿ ವ್ಯಕ್ತವಾಗಿದೆ. ಭಾನುವಾರ ಶಾಸಕರು ಮತ್ತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವೇ ಮಾಡಲು ಹೆಚ್ಚಿನ ಜನರು ಸಮ್ಮತಿ ಸೂಚಿಸಿದರೆ, ಕೆಲವರು ವಿರೋಧ ವ್ಯಕ್ತಪಡಿಸಿದರು.ನಗರದ ಚಿಕ್ಕಮಂಡ್ಯ ಸರ್ವೇ ನಂ.೫೦೭ರಲ್ಲಿ ರಾಜೀವ್ ಆವಾಸ್ ಯೋಜನೆಯಡಿ ನಿರ್ಮಿಸಿರುವ ೫೭೬ ಮನೆಗಳಿಗೆ ತಮಿಳು ಕಾಲೋನಿ ಕೊಳಚೆ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸುವ ಸಂಬಂಧ ನಡೆಸಲಾದ ಸಭೆಯಲ್ಲಿ ಸರ್ವೇ ಕಾರ್ಯ ಮತ್ತು ಫಲಾನುಭವಿಗಳ ಆಯ್ಕೆಗೆ ಅಡ್ಡಿಪಡಿಸುವುದಿಲ್ಲವೆಂದು ನಿವಾಸಿಗಳ ಪೈಕಿ ಹಲವರು ಹೇಳಿದರೇ, ಕೆಲವರು ಸರ್ವೇ ಕಾರ್ಯಕ್ಕೆ ನಾವು ಅವಕಾಶವನ್ನೇ ನೀಡುವುದಿಲ್ಲವೆಂದು ನೇರವಾಗಿ ಹೇಳಿದರು.
೩೦ ಕೋಟಿ ರು. ವೆಚ್ಚದಲ್ಲಿ ಮನೆಗಳ ನಿರ್ಮಾಣ:ಜಿಲ್ಲಾಧಿಕಾರಿ ಡಾ.ಕೆ.ಕುಮಾರ ಮಾತನಾಡಿ, ತಮಿಳು ಕಾಲೋನಿ ಜಾಗ ತೆರವುಗೊಳಿಸುವಂತೆ ಈ ಮೊದಲು ಹೈಕೋರ್ಟ್ ಆದೇಶ ಹೊರಡಿಸಿತ್ತು. ಆ ನಂತರದಲ್ಲಿ ನಿವಾಸಿಗಳು ಆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದೀರಿ. ಮುಂದೆ ನ್ಯಾಯಾಲಯದ ಆದೇಶ ಏನೇ ಬಂದರೂ ಅದಕ್ಕೆ ಎಲ್ಲರೂ ತಲೆಬಾಗಲೇಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ತಮಿಳು ಕಾಲೋನಿ ನಿವಾಸಿಗಳಿಗಾಗಿ ರಾಜ್ಯ ಸರ್ಕಾರ ೩೦ ಕೋಟಿ ರು. ಖರ್ಚು ಮಾಡಿ ೫೭೬ ಮನೆಗಳನ್ನು ನಿರ್ಮಿಸಲಾಗಿದೆ. ಹಿಂದೆ ಹಾಲಹಳ್ಳಿಯಲ್ಲಿ ಮನೆಗಳನ್ನು ನಿರ್ಮಿಸಿದಾಗ ಅವುಗಳು ವಾಸಕ್ಕೆ ಯೋಗ್ಯವಿಲ್ಲವೆಂದು ಹೇಳಿ ಹೋಗಲು ನಿರಾಕರಿಸಿದಿರಿ. ಈಗ ತಾಂತ್ರಿಕ ಪರಿಣಿತರಿಂದ ಪರಿಶೀಲಿಸಿ ಗುಣಮಟ್ಟದ ಮನೆಗಳನ್ನು ನಿರ್ಮಿಸಿದ್ದರೂ ಅದಕ್ಕೂ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ನ್ಯಾಯಾಲಯದ ಆದೇಶ ಒಮ್ಮೆ ವ್ಯತಿರಿಕ್ತವಾಗಿ ಬಂದರೆ ಅಲ್ಲಿಗೆ ಹೋಗುವುದಕ್ಕೆ ಎಲ್ಲರೂ ಸಿದ್ಧರಿರಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.ಈ ಪ್ರದೇಶದ ಸರ್ವೇ ನಡೆಸಿ ಫಲಾನುಭವಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಅದಕ್ಕಾಗಿ ಸರ್ವೇ ಕಾರ್ಯಕ್ಕೆ ಯಾರೂ ಸಹ ತೊಂದರೆ ಕೊಡಬಾರದು. ನಾವು ಬಲವಂತವಾಗಿ ನಿಮ್ಮನ್ನು ತೆರವುಗೊಳಿಸುವುದಿಲ್ಲ. ನ್ಯಾಯಾಲಯದ ಆದೇಶ ಬರುವವರೆಗೂ ಕಾದುನೋಡುವುದಾಗಿ ಭರವಸೆ ನೀಡಿದರು.
ಜಿಲ್ಲಾಡಳಿತ ನಮ್ಮ ಪರ ನಿಲ್ಲಬೇಕು:ಇದಕ್ಕೆ ಕೆಲವು ನಿವಾಸಿಗಳು ಸರ್ಕಾರವೇನು ಈ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಲ್ಲ. ಯಾರೋ ಖಾಸಗಿ ವ್ಯಕ್ತಿಗಳು ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾಡಳಿತ ನಮ್ಮ ಪರವಾಗಿ ನಿಂತು ನಮಗೆ ನ್ಯಾಯ ದೊರಕಿಸಿಕೊಡಬೇಕೇ ವಿನಃ ಬೇರೆಯವರ ಹಿತ ಕಾಯಬಾರದು ಎಂದಾಗ, ನ್ಯಾಯಾಲಯ ವಿಚಾರ ಬಂದಾಗ ನಮಗೆ ತೀರ್ಪಷ್ಟೇ ಮುಖ್ಯವಾಗುತ್ತದೆ. ಅದನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ. ಈಗ ಜಾಗದ ವಿಷಯದಲ್ಲಿ ತಡೆಯಾಜ್ಞೆ ಇದೆ. ನಾವೇನು ತೆರವು ಮಾಡಿಸಲು ಬಂದಿಲ್ಲ. ಕೇವಲ ಸರ್ವೇ ಕಾರ್ಯಕ್ಕೆ ಅವಕಾಶ ಮಾಡಿಕೊಡುವಂತೆ ಕೇಳುತ್ತಿದ್ದೇವೆ ಅಷ್ಟೇ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಸರ್ವೇ ಕಾರ್ಯಕ್ಕೆ ಅವಕಾಶ:ಜಿಲ್ಲಾಧಿಕಾರಿ ಮಾತಿಗೆ ಸಮ್ಮತಿಸಿದ ಬಹುತೇಕರು ಸರ್ವೇ ಕಾರ್ಯಕ್ಕೆ ನಾವು ಅವಕಾಶ ಮಾಡಿಕೊಡುತ್ತೇವೆ. ಅದಕ್ಕೆ ಅಡ್ಡಿ ಪಡಿಸುವುದಿಲ್ಲ, ತೊಂದರೆಯನ್ನೂ ನೀಡುವುದಿಲ್ಲ. ನ್ಯಾಯಾಲಯದ ಆದೇಶ ಬಂದಾಗ ಅದರಂತೆ ಪಾಲನೆ ಮಾಡುತ್ತೇವೆ. ಆದರೆ, ಸರ್ವೇ ಕಾರ್ಯದ ವೇಳೆ ನಮ್ಮನ್ನು ತೆರವುಗೊಳಿಸಬಾರದು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಆದರೆ, ಸಭೆಯಲ್ಲಿದ್ದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಈಗ ಸರ್ವೇ ಕಾರ್ಯ ನಡೆಸಲು ಅವಕಾಶ ಮಾಡಿಕೊಟ್ಟರೆ ನಾಳೆ ಈ ಜಾಗದಿಂದ ನಮ್ಮನ್ನು ಸ್ಥಳಾಂತರ ಮಾಡಿಸುತ್ತಾರೆ. ಅದಕ್ಕೆ ಸರ್ವೇ ಕಾರ್ಯಕ್ಕೆ ಅವಕಾಶ ನೀಡಬಾರದು. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಪಟ್ಟು ಹಿಡಿದರು.ಹಠ ಮಾಡಬೇಡಿ:
ಶಾಸಕ ಪಿ.ರವಿಕುಮಾರ್ ಮಾತನಾಡಿ, ಈ ರೀತಿ ಹಠ ಹಿಡಿಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಲು ಮುಂದಾದರೆ ಪೊಲೀಸರ ರಕ್ಷಣೆಯಲ್ಲಿ ಅವರು ಸರ್ವೇ ಕಾರ್ಯ ನಡೆಸುತ್ತಾರೆ. ಅದಕ್ಕೆ ಆಸ್ಪದ ನೀಡಬಾರದು. ಶಾಂತಿಯುತವಾಗಿ ಸರ್ವೇ ಕಾರ್ಯ ನಡೆಸುವುದಕ್ಕೆ ಅವಕಾಶ ನೀಡಬೇಕು. ನ್ಯಾಯಾಲಯದ ಆದೇಶ ನೋಡಿಕೊಂಡೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಯಾರನ್ನೂ ತೆರವುಗೊಳಿಸುವುದಿಲ್ಲ ಎಂದರು.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್, ನಗರಸಭೆ ಅಧ್ಯಕ್ಷ ಎಂ.ಸಿ.ಪ್ರಕಾಶ್, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಸೇರಿದಂತೆ ಇತರರಿದ್ದರು.ತಮಿಳಿನಲ್ಲಿ ಮಾತಾಡುವುದಕ್ಕೆ ಅಡ್ಡಿ: ಕನ್ನಡದಲ್ಲೇ ಮಾತಾಡಲು ಆಗ್ರಹ
ಕನ್ನಡಪ್ರಭ ವಾರ್ತೆ ಮಂಡ್ಯನಗರದ ತಮಿಳುಕಾಲೋನಿ ಕೊಳಚೆ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸುವ ಸಂಬಂಧ ಭಾನುವಾರ ನಡೆದ ಸಭೆಯಲ್ಲಿ ನಿವಾಸಿಗಳ ಪರವಾಗಿ ಬಂದಿದ್ದ ಪ್ರತಿನಿಧಿಗಳು ತಮಿಳಿನಲ್ಲಿ ಮಾತನಾಡುವುದಕ್ಕೆ ಕರುನಾಡ ಸೇವಕರು ಸಂಘದವರು ಆಕ್ಷೇಪ ವ್ಯಕ್ತಪಡಿಸಿ ಅವರು ಕನ್ನಡದಲ್ಲೇ ಮಾತನಾಡುವಂತೆ ಮಾಡುವಲ್ಲಿ ಯಶಸ್ವಿಯಾದರು.
ಸಭೆ ಆರಂಭವಾದ ಸಮಯದಲ್ಲಿ ನಿವಾಸಿಗಳ ಪರವಾಗಿ ಅವರ ಪ್ರತಿನಿಧಿಗಳು ತಮಿಳಿನಲ್ಲೇ ಅಭಿಪ್ರಾಯ ಮಂಡಿಸಲು ಆರಂಭಿಸಿದರು. ಶಾಸಕರು ಮತ್ತು ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಅದನ್ನು ಕೇಳಿಸಿಕೊಂಡು ಕುಳಿತಿದ್ದರು. ಆಗ ಸಭೆಯಲ್ಲಿದ್ದ ಕರುನಾಡ ಸೇವಕರು ಸಂಘಟನೆಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಚಂದ್ರು ಸೇರಿದಂತೆ ಕೆಲವರು, ತಮಿಳು ಭಾಷೆಯಲ್ಲಿ ಸಭೆ ನಡೆಸುವ ಅವಶ್ಯಕತೆ ಇಲ್ಲ. ತಮಿಳಿನಲ್ಲಿ ಮಾತನಾಡಿದರೆ ಬೇರೆಯವರಿಗೆ ಅರ್ಥವಾಗುವುದಿಲ್ಲ. ಕನ್ನಡದಲ್ಲೇ ಮಾತನಾಡಿದರೆ ಎಲ್ಲರಿಗೂ ಅರ್ಥವಾಗುತ್ತದೆ ಎಂದಾಗ, ನಮಗೆ ಕನ್ನಡ ಅಷ್ಟಾಗಿ ಬರುವುದಿಲ್ಲ ಎಂದರು. ಇಷ್ಟು ವರ್ಷ ಮಂಡ್ಯದಲ್ಲಿದ್ದು ಕನ್ನಡ ಕಲಿತಿಲ್ಲವೆಂದರೆ ಹೇಗೆ. ಕನ್ನಡದಲ್ಲೇ ಮಾತನಾಡಬೇಕು ಎಂದು ಪಟ್ಟು ಹಿಡಿದರು.ಇದಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಕೂಡ ಸಹಮತ ವ್ಯಕ್ತಪಡಿಸಿ ಕನ್ನಡದಲ್ಲೇ ಮಾತನಾಡುವಂತೆ ಸೂಚಿಸಿದರು. ನಂತರ ಸಭೆ ಕನ್ನಡದಲ್ಲೇ ಮುಂದುವರೆಯಿತು.
ನಿಮ್ಮನ್ನು ಇಲ್ಲಿಂದ ಸ್ಥಳಾಂತರಿಸಿ ಮಾಲ್ ಅಥವಾ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುವುದಿಲ್ಲ. ಆಸ್ಪತ್ರೆ ಜಾಗದಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ. ಇದರಿಂದ ನಿಮಗೂ ಹೆಚ್ಚಿನ ಅನುಕೂಲ ದೊರೆಯಲಿದೆ. ನ್ಯಾಯಾಲಯದ ತೀರ್ಪು ಏನು ಬರುವುದೋ ನೋಡೋಣ. ಸದ್ಯಕ್ಕೆ ಸರ್ವೇ ಕಾರ್ಯಕ್ಕೆ ಅಡಚಣೆ ಮಾಡಬೇಡಿ ಅಷ್ಟೇ.- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ
ನ್ಯಾಯಾಲಯದ ಆದೇಶವಿದೆ. ನಿಮಗಾಗಿ ಸುಸಜ್ಜಿತ ಮನೆಗಳನ್ನು ಕಟ್ಟಿಸಿಕೊಡಲಾಗಿದೆ. ಸ್ವಯಂ ಪ್ರೇರಿತರಾಗಿ ಹೋಗುವ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೇಳುವುದು ನಮ್ಮ ಧರ್ಮ. ನಿಮ್ಮ ಅಭಿಪ್ರಾಯಗಳನ್ನು ನೀವು ಹೇಳಿದ್ದೀರಿ. ನ್ಯಾಯಾಲಯ ಅಂತಿಮ ಆದೇಶ ಏನು ಬರುತ್ತದೆಯೋ ಅದರಂತೆ ನಾವೂ ನಡೆಯುತ್ತೇವೆ. ಸದ್ಯಕ್ಕೆ ಸರ್ವೇ ಕಾರ್ಯ ನಡೆಸಲು ಅವಕಾಶ ಮಾಡಿಕೊಡಿ.- ಪಿ.ರವಿಕುಮಾರ್, ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರ
ತಮಿಳು ಕಾಲೋನಿಯಲ್ಲಿ ೯೦೦ ಕುಟುಂಬಗಳು ವಾಸವಾಗಿವೆ. ನೀವು ಚಿಕ್ಕಮಂಡ್ಯ ಬಳಿ ಕಟ್ಟಿರುವುದು ೫೭೬ ಮನೆ. ಇನ್ನೂ ೩೦೦ ಕುಟುಂಬಗಳಿಗೆ ನೆಲೆ ಇಲ್ಲದಂತಾಗಿದೆ. ಅದಕ್ಕಾಗಿ ನಗರದ ಹೊರವಲಯದಲ್ಲಿ ಗೋಮಾಳವಿದ್ದು ಅಲ್ಲಿ ೩೦೦ ಜನರಿಗೆ ಮನೆಗಳನ್ನು ಕಟ್ಟಿಸಿಕೊಟ್ಟರೆ ಒಳ್ಳೆಯ ಕೆಲಸ ಮಾಡಿದಂತಾಗುತ್ತದೆ. ನ್ಯಾಯಾಲಯದ ಆದೇಶ ಏನು ಬರುವುದೋ ಅದಕ್ಕೆ ತಲೆಬಾಗೋಣ.- ವಸಂತಕುಮಾರ್, ಅಧ್ಯಕ್ಷರು, ಬಿಜೆಪಿ ನಗರ ಘಟಕ