ಸಾರಾಂಶ
ಎಚ್.ಕೆ.ಅಶ್ವಥ್ ಹಳುವಾಡಿ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ-ಮೇಲುಕೋಟೆ ಮಾರ್ಗದ ರಸ್ತೆ ಗುಂಡಿಗಳ ಆಗರವಾಗಿದೆ. ಹೊಂಡಗಳಿಂದ ತುಂಬಿರುವ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸಂಚಕಾರ ಒದಗಿದೆ. ಈ ಮಾರ್ಗದಲ್ಲಿ ನಿತ್ಯ ಸಂಚರಿಸುವವರು ಗುಂಡಿಗಳನ್ನು ತಪ್ಪಿಸಿಕೊಂಡು ಸಾಗುವುದು ಸವಾರರಿಗೆ ಸವಾಲಾಗಿದೆ.ಈ ಮೊದಲು ರಸ್ತೆ ಉತ್ತಮ ಗುಣಮಟ್ಟದಿಂದ ಕೂಡಿತ್ತು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ದಿಲೀಪ್ ಬಿಲ್ಡ್‌ಕಾನ್ ಸಂಸ್ಥೆಯವರು ಜಲ್ಲಿ , ಮಣ್ಣು ಸಾಗಿಸುವುದಕ್ಕೆ ಈ ರಸ್ತೆಯಲ್ಲಿ ಟಿಪ್ಪರ್‌ಗಳು ನಿರಂತರ ಸಂಚರಿಸಿದವು. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಗಣಿ ಸಾಮಗ್ರಿಯನ್ನು ತುಂಬಿಕೊಂಡು ಓಡಾಡಿದ್ದರಿಂದ ರಸ್ತೆ ಬಹುತೇಕ ಗುಂಡಿ ಬಿದ್ದವು. ಗುಂಡಿಮಯವಾದ ರಸ್ತೆಗಳನ್ನು ಸರಿಪಡಿಸುವುದಕ್ಕೆ ದಿಲೀಪ್ ಬಿಲ್ಡ್‌ಕಾನ್ ಸಂಸ್ಥೆಯವರಾಗಲೀ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೂ ಗಮನಹರಿಸಲಿಲ್ಲ. ಈ ಬಗ್ಗೆ ದಿಶಾ ಸಮಿತಿ ಸೇರಿದಂತೆ ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರೂ ರಸ್ತೆ ದುರಸ್ತಿಪಡಿಸುವ ಭರವಸೆ ಸಿಕ್ಕಿತೇ ವಿನಃ ರಸ್ತೆಯನ್ನು ಸುಸ್ಥಿತಿಗೆ ತರುವ ಕಾರ್ಯ ನಡೆಯಲೇ ಇಲ್ಲ.ಸಂಚಾರಕ್ಕೆ ಕಿರಿಕಿರಿ: ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಈ ರಸ್ತೆಯಲ್ಲಿ ವಾಹನ ಚಾಲಕರಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದೆ. ಬೈಕ್ ಸವಾರರು ಸಾಗುವಾಗ ಗುಂಡಿಗಳಿಂದ ತಪ್ಪಿಸಲು ಸರ್ಕಸ್ ಮಾಡಿಕೊಂಡು ಸಾಗುವಂತಾಗಿದೆ. ಈ ರಸ್ತೆಯಲ್ಲಿ ನಿತ್ಯ ಗುಂಡಿಗಳಿಗೆ ವಾಹನಗಳನ್ನು ಇಳಿಸಿ ಬಿದ್ದಿರುವ ಪ್ರಕರಣಗಳೂ ಇವೆ. ಸಣ್ಣ ಪುಟ್ಟ ಅಪಘಾತಗಳು ಆಗಾಗ ಸಂಭವಿಸುತ್ತಲೂ ಇವೆ. ಯಮಯಾತನೆಯೊಂದಿಗೆ ದಿನವೂ ರಸ್ತೆಯಲ್ಲಿ ಸಾಗುವುದು ಈ ಮಾರ್ಗದ ಪ್ರಯಾಣಿಕರಿಗೆ ಅನಿವಾರ್ಯವಾಗಿದೆ.ವೈರಮುಡಿಗೂ ದುರಸ್ತಿ ಕಾಣಲಿಲ್ಲ: ಹಿಂದೆ ಪ್ರತಿ ವರ್ಷ ಮೇಲುಕೋಟೆ ವೈರಮುಡಿ ಸಮಯದಲ್ಲಿ ಗುಂಡಿಗಳನ್ನು ಮುಚ್ಚುವ, ಡಾಂಬರೀಕರಣ ಮಾಡುವ ಕೆಲಸಗಳಾಗುತ್ತಿದ್ದವು. ಜಿಲ್ಲೆಯ ವಿವಿಧೆಡೆಯಿಂದ ವೈರಮುಡಿ ಉತ್ಸವಕ್ಕೆ ಜನರು ಆಗಮಿಸುತ್ತಿದ್ದರಿಂದ ಈ ಮಾರ್ಗದ ರಸ್ತೆಯನ್ನು ಉತ್ತಮ ಸ್ಥಿತಿಗೆ ತರುವ ಕೆಲಸಗಳು ನಡೆಯುತ್ತಿದ್ದವು. ಆದರೆ, ಈ ವರ್ಷ ವೈರಮುಡಿ ಉತ್ಸವದ ವೇಳೆ ರಸ್ತೆ ದುರಸ್ತಿಗೆ ಶಾಸಕರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೂ ಗಮನಹರಿಸಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ. ಹೊಳಲು, ಶಿವಳ್ಳಿ, ದುದ್ದ, ಬೇವುಕಲ್ಲು ಸೇರಿ ಈ ಮಾರ್ಗದ ಗ್ರಾಮಸ್ಥರು ರಸ್ತೆ ಸರಿಪಡಿಸುವಂತೆ ಮಾಡಿದ ಮನವಿಗೂ ಯಾರಿಂದಲೂ ಸ್ಪಂದನೆ ದೊರಕಲಿಲ್ಲ ಎಂಬ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾಗಿವೆ.ಇಚ್ಛಾಶಕ್ತಿ ತೋರದ ಜನಪ್ರತಿನಿಧಿಗಳು:
ಮಳೆ ಬಂದಾಗಲಂತೂ ಈ ರಸ್ತೆಯಲ್ಲಿ ಓಡಾಡುವುದು ಇನ್ನೂ ಕಷ್ಟವಾಗಿದೆ. ಗುಂಡಿ ಎಲ್ಲಿದೆ, ರಸ್ತೆ ಎಲ್ಲಿದೆ ಎಂಬುದೇ ಕಾಣುವುದಿಲ್ಲ. ಈಗ ಮಳೆಗಾಲ ಆರಂಭವಾಗಿದೆ. ಈ ವೇಳೆಗೆ ರಸ್ತೆಯನ್ನು ಸುಸ್ಥಿತಿಗೆ ತಂದಿದ್ದರೆ ಪ್ರಯಾಣಿಕರು ನೆಮ್ಮದಿಯಿಂದ ಸಂಚರಿಸಬಹುದಿತ್ತು. ಮಂಡ್ಯ-ಮೇಲುಕೋಟೆ ರಸ್ತೆಯನನ್ನು ದುರಸ್ತಿಪಡಿಸುವ ಇಚ್ಛಾಶಕ್ತಿ ಜನಪ್ರತಿನಿಧಿಗಳಿಗೂ ಇಲ್ಲ, ಅಧಿಕಾರಿಗಳಿಗೂ ಇಲ್ಲದಂತಾಗಿದೆ. ಅಭಿವೃದ್ಧಿಗೆ ಅನುದಾನವಿಲ್ಲ: ರಸ್ತೆ, ಸೇತುವೆ, ಸಂಪರ್ಕ ರಸ್ತೆ, ದುರಸ್ತಿ ಸೇರಿ ಸಾರ್ವಜನಿಕರ ಹಿತದೃಷ್ಟಿಯಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಪ್ರಾಮುಖ್ಯತೆಯನ್ನೇ ನೀಡುತ್ತಿಲ್ಲ ಎಂಬ ಆರೋಪಕ್ಕೆ ಮಂಡ್ಯ-ಮೇಲುಕೋಟೆ ರಸ್ತೆ ಸಾಕ್ಷಿಯಾಗಿದೆ. ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ, ಶಾಸಕರ ಅನುದಾನದಿಂದಲೂ ರಸ್ತೆ ದುರಸ್ತಿ ಕಾಣುತ್ತಿಲ್ಲವೆಂದ ಮೇಲೆ ಈ ಮಾರ್ಗದಲ್ಲಿ ಸುಗಮ ಸಂಚಾರ ಎನ್ನುವುದು ಕನಸಿನ ಮಾತಾಗಿಯೇ ಉಳಿದುಕೊಂಡಿದೆ.ಗುಂಡಿಗಳನ್ನೂ ಮುಚ್ಚುತ್ತಿಲ್ಲ: ಹಾಲಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಿದರೂ ವಾಹನ ಸವಾರರಿಗೆ ಎಷ್ಟೋ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಆ ಕೆಲಸವೂ ನಡೆಸುವುದಕ್ಕೂ ಕ್ಷೇತ್ರದ ಶಾಸಕರು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇವರ ಬೇಜವಾಬ್ದಾರಿತನದಿಂದಾಗಿ ರಸ್ತೆಯ ಗುಂಡಿಗಳು ಮತ್ತಷ್ಟು ವಿಸ್ತಾರಗೊಳ್ಳುತ್ತಿವೆ, ಕಲ್ಲುಗಳು ಮತ್ತಷ್ಟು ಮೇಲೆದ್ದು ಅಪಾಯದ ಭೀತಿಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ವಾಹನಗಳ ನಿರಂತರ ಸಂಚಾರದಿಂದ ರಸ್ತೆ ಇನ್ನಷ್ಟು ಅದ್ವಾನ ಸ್ಥಿತಿಯನ್ನು ತಲುಪುತ್ತಿದೆ.ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಯುವಕರಾಗಿದ್ದು, ಕ್ಷೇತ್ರದ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ತ್ವರತಗತಿಯಲ್ಲಿ ಪರಿಹಾರ ಸೂಚಿಸುತ್ತಾರೆಂಬ ಬಗ್ಗೆ ಜನರು ವಿಶ್ವಾಸದವನ್ನು ಹೊಂದಿದ್ದರು. ಆದರೆ, ಅವರು ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲವೆಂಬ ಅಭಿಪ್ರಾಯಗಳು ಜನಮಾನಸದಲ್ಲಿ ಮೂಡಲಾರಂಭಿಸಿವೆ. ಒಂದು ರಸ್ತೆಯನ್ನು ಸುಸ್ಥಿತಿಗೆ ತರಲಾರದಷ್ಟು ದೌರ್ಬಲ್ಯವನ್ನು ಶಾಸಕರಾದವರು ಪ್ರದರ್ಶಿಸುತ್ತಿರುವ ಬಗ್ಗೆ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ರಸ್ತೆ ಅಭಿವೃದ್ಧಿಗೆ ಹಣ ಇಲ್ಲ: ದರ್ಶನ್ ಪುಟ್ಟಣ್ಣಯ್ಯಮಂಡ್ಯ: ಮಂಡ್ಯ-ಮೇಲುಕೋಟೆ ರಸ್ತೆಯನ್ನು ಅಗಲೀಕರಣ ಮಾಡಿ ಅಭಿವೃದ್ಧಿಪಡಿಸುವುದಕ್ಕೆ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಪ್ರಮುಖವಾಗಿ ಹಣಕಾಸಿನ ಕೊರತೆ ಕಾಡುತ್ತಿದೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿದರು. ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಈಗಾಗಲೇ ಎಂಟು ತಿಂಗಳಾಗಿದೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಬದಲು ಒಂದೇ ಬಾರಿಗೆ ರಸ್ತೆ ಅಭಿವೃದ್ಧಿಪಡಿಸುವುದಕ್ಕೆ ಶ್ರಮ ವಹಿಸುತ್ತಿದ್ದೇವೆ ಎಂದು ಹೇಳಿದರು.ಹೆದ್ದಾರಿ ನಿರ್ಮಾಣಕ್ಕೆ ಮಣ್ಣು, ಜಲ್ಲಿ ಸಾಗಿಸುವುದಕ್ಕೆ ಖಾಸಗಿ ಕಂಪನಿಯವರು ರಸ್ತೆಯನ್ನು ಬಳಸಿಕೊಂಡು ಹಾಳುಗೆಡವಿದ್ದಾರೆ. ಅದನ್ನು ಸರಿಪಡಿಸಿಕೊಡುವಂತೆ ಕೇಳಿದರೆ ನಾಮಕಾವಸ್ಥೆಗೆ ಎರಡು-ಮೂರು ಕಡೆ ತೇಪೆ ಹಾಕಿರುವ ಫೋಟೋ ಹಾಕಿ ಕೈತೊಳೆದುಕೊಂಡಿದ್ದಾರೆ. ಈಗ ಅವರಿಂದಲೇ ಅಭಿವೃದ್ಧಿಗೆ ಅಗತ್ಯವಿರುವಷ್ಟು ಹಣ ಪಡೆದುಕೊಳ್ಳುವ ಪ್ರಯತ್ನವೂ ಮುಂದುವರೆದಿದೆ. ಆದಷ್ಟು ಬೇಗ ರಸ್ತೆ ಸಮಸ್ಯೆಗೆ ಪರಿಹಾರ ದೊರಕಿಸಲಾಗುವುದು ಎಂದು ತಿಳಿಸಿದರು.ಮಂಡ್ಯ-ಮೇಲುಕೋಟೆ ಮಾರ್ಗದ ರಸ್ತೆ ಗುಂಡಿಗಳು, ಹೊಂಡಗಳಿಂದ ತುಂಬಿ ಹಾಳಾಗಿದೆ. ರಸ್ತೆಯನ್ನು ಸುಸ್ಥಿತಿಗೆ ತರುವ, ಕನಿಷ್ಠ ಗುಂಡಿಗಳನ್ನಾದರೂ ಮುಚ್ಚುವ ಕಾರ್ಯ ಯಾರಿಂದಲೂ ನಡೆಯುತ್ತಿಲ್ಲ. ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ರಸ್ತೆ ಅಗಲೀಕರಣ ಮಾಡಿ ಅಭಿವೃದ್ಧಿಪಡಿಸುವ ವಿಚಾರ ಹಾಗಿರಲಿ. ಮೊದಲು ಗುಂಡಿಗಳನ್ನು ಮುಚ್ಚಿಸುವ ಕಾರ್ಯ ನಡೆಸಲಿ.ಸಂತೋಷ್ ದುದ್ದನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಪ್ರತಿ ವರ್ಷ ವೈರಮುಡಿಗೂ ರಸ್ತೆ ಗುಂಡಿ ಮುಚ್ಚಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದೆ. ಖಾಸಗಿ ಕಂಪನಿಯವರು ಹೆದ್ದಾರಿ ನಿರ್ಮಾಣಕ್ಕೆ ರಸ್ತೆಯನ್ನು ಹಾಳುಗೆಡವಿದ್ದಾರೆ. ಅದನ್ನು ಸುಸ್ಥಿತಿಗೆ ತರುವುದಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಇಲ್ಲವೇ ಹೆದ್ದಾರಿ ಪ್ರಾಧಿಕಾರದವರಿಂದಲೇ ರಸ್ತೆಯನ್ನು ಉತ್ತಮ ಸ್ಥಿತಿಗೆ ತರುವ ಕೆಲಸ ಮಾಡಬೇಕು..ಸಿ.ಎಸ್.ಪುಟ್ಟರಾಜು, ಮಾಜಿ ಸಚಿವರು