ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಂಬಂಧ ನಡೆಯುತ್ತಿರುವ ಹೈಡ್ರಾಮಾ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಬುಧವಾರ ಚುನಾವಣೆ ನಿಗದಿಯಾಗಿದ್ದು, ನಗರಸಭೆ ಗದ್ದುಗೆ ಯಾರ ಪಾಲಾಗಲಿದೆ ಎನ್ನುವುದು ತೀವ್ರ ಕುತೂಹಲ ಕಾಯ್ದಿರಿಸಿಕೊಂಡಿದೆ.ಮೊದಲ ಅವಧಿಯಲ್ಲಿ ನಗರಸಭೆ ಅಧ್ಯಕ್ಷರಾಗಿದ್ದ ಎಚ್.ಎಸ್.ಮಂಜು ಕಾಂಗ್ರೆಸ್ ಪಕ್ಷ ಸೇರಿದ್ದು, ಎರಡನೇ ಅವಧಿಯಲ್ಲೂ ಅಧ್ಯಕ್ಷರಾಗಿ ಮುಂದುವರೆಯುವ ಬಯಕೆಯೊಂದಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಜೆಡಿಎಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಿದ್ದರೂ ವರಿಷ್ಠರ ನಿರ್ಧಾರಕ್ಕೆ ಬಿಡಲಾಗಿದೆ.
ಕಾಂಗ್ರೆಸ್‌ನ ಮೂವರು ಜೆಡಿಎಸ್ ಬೆಂಬಲಕ್ಕೆ:ಚುನಾವಣೆ ಘೋಷಣೆಯಾದ ನಂತರದಲ್ಲಿ ಜೆಡಿಎಸ್ ಪಕ್ಷದ ೧೨ನೇ ವಾರ್ಡ್‌ನ ಭಾರತೀಶ್ ಮತ್ತು ೩೨ನೇ ವಾರ್ಡ್‌ನ ಸಿ.ಕೆ.ರಜನಿ ಕಾಂಗ್ರೆಸ್ ಕಡೆಗೆ ಜಿಗಿದಿದ್ದಾರೆಂದು ಹೇಳಲಾಗುತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ೨೭ನೇ ವಾರ್ಡ್‌ನ ಟಿ.ಕೆ.ರಾಮಲಿಂಗು, ೨೩ನೇ ವಾರ್ಡ್‌ನ ಜಯೀದಾ ಬಾನು ಮತ್ತು ೩೧ನೇ ವಾರ್ಡ್‌ನ ಸೈಯದ್ ವಾಸಿಂ ಅವರು ಜೆಡಿಎಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ.
ಅಜ್ಞಾತ ಸ್ಥಳದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕಾಂಗ್ರೆಸ್‌ನ ಮೂವರು ಸದಸ್ಯರು ಜೆಡಿಎಸ್ ಸದಸ್ಯರೊಂದಿಗೆ ಕುಳಿತು ಫೋಟೋಗೆ ಪೋಸ್ ನೀಡಿರುವುದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಜೆಡಿಎಸ್‌ನೊಳಗಿರುವ ಕಾಂಗ್ರೆಸ್ಸಿಗರ ಮನಸ್ಥಿತಿ, ಕಾಂಗ್ರೆಸ್ ಪಾಳಯ ಸೇರಿರುವ ಜೆಡಿಎಸ್‌ನವರ ಮನಸ್ಥಿತಿ ಹಾಗೂ ಇತರೆ ಸದಸ್ಯರು ನಿಲುವುಗಳು ಏನೆಂಬುದು ಇಂದು (ಆ.೨೮) ಬಹಿರಂಗಗೊಳ್ಳಲಿದೆ.ಇದರೊಂದಿಗೆ ನಗರಸಭೆಯ ಒಟ್ಟು ೩೫ ಸದಸ್ಯ ಬಲದಲ್ಲಿ ಕಾಂಗ್ರೆಸ್-೭, ಕಾಂಗ್ರೆಸ್ ಬಂಡಾಯ-೩, ಪಕ್ಷೇತರ-೫ ಸದಸ್ಯರು ಹಾಗೂ ಶಾಸಕ ಪಿ.ರವಿಕುಮಾರ್ ಸೇರಿ ೧೫ ಸಂಖ್ಯಾ ಬಲವನ್ನು ಹೊಂದಿದೆ. ವಿಧಾನ ಪರಿಷತ್ ಶಾಸಕರ ಮತವಿದ್ದರೂ ಎರಡೂ ಪಕ್ಷದ ಶಾಸಕರು ಮಂಡ್ಯ ನಗರದಲ್ಲಿ ಮತ ಹಕ್ಕು ಹೊಂದಿಲ್ಲದಿರುವುದರಿಂದ ಆ ಮತ ಯಾರಿಗೂ ಸಿಗದಂತಾಗಿದೆ. ಜೆಡಿಎಸ್-೧೫, ಬಿಜೆಪಿ-೨, ಕಾಂಗ್ರೆಸ್ ಬಂಡಾಯ-೩ ಸದಸ್ಯರು ಹಾಗೂ ಸಂಸದ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ೧೯ ಸದಸ್ಯರ ಬಲವನ್ನು ಒಳಗೊಂಡಿದೆ. ಕಾಂಗ್ರೆಸ್ ಅಧಿಕಾರ ಹಿಡಿಯುವುದಕ್ಕೆ ಇನ್ನೂ ಐದು ಸದಸ್ಯರ ಕೊರತೆಯನ್ನು ಎದುರಿಸುತ್ತಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ?ಕಾಂಗ್ರೆಸ್ ಪಕ್ಷದಿಂದ ಸತತ ಎರಡನೇ ಬಾರಿ ಆಯ್ಕೆಯಾಗಿರುವ ಟಿ.ಕೆ.ರಾಮಲಿಂಗು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಅವಕಾಶ ಸಿಗದಿದ್ದರಿಂದ ಬೇಸತ್ತು ಜೆಡಿಎಸ್‌ಗೆ ಬೆಂಬಲ ಸೂಚಿಸಲು ಮುಂದಾಗಿದ್ದಾರೆ. ಅವರನ್ನೇ ಹಿಂಬಾಲಿಸಿರುವ ಜಯೀದಾ ಬಾನು ಮತ್ತು ಸೈಯದ್ ವಾಸಿಂ ಅವರು ಉಪಾಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ಬಿಟ್ಟುಕೊಡುವಂತೆ ಬೇಡಿಕೆ ಇಟಿದ್ದು, ಉಪಾಧ್ಯಕ್ಷ ಸ್ಥಾನವನ್ನು ಯಾವ ಪಕ್ಷ ಬಿಟ್ಟುಕೊಡುವುದೋ ಅವರಿಗೆ ಬೆಂಬಲ ಸೂಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ರಣತಂತ್ರ:ನಾಗಮಂಗಲ ಪುರಸಭೆ ನಂತರ ಕಾಂಗ್ರೆಸ್ ನಗರಸಭೆ ಗದ್ದುಗೆ ಮೇಲೆ ಕಣ್ಣಿಟ್ಟಿದೆ. ಬಹುಮತವನ್ನು ಹೊಂದಿದ್ದ ಜೆಡಿಎಸ್‌ನ್ನು ನಾಗಮಂಗಲ ಪುರಸಭೆ ಚುನಾವಣೆಯಲ್ಲಿ ಮಣಿಸಿದ ರೀತಿಯಲ್ಲೇ ಮಂಡ್ಯ ನಗರಸಭೆಯಲ್ಲೂ ಸೋಲುಣಿಸುವುದಕ್ಕೆ ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳೇನಾದರೂ ಘಟಿಸಿದರಷ್ಟೇ ಅಧಿಕಾರ ಕಾಂಗ್ರೆಸ್ ಪಾಲಾಗಬಹುದೆಂದು ಹೇಳಲಾಗುತ್ತಿದೆ.
ನಾಗಮಂಗಲ ಪುರಸಭೆಯಲ್ಲೂ ೧೩ ಜೆಡಿಎಸ್, ೧೦ ಮಂದಿ ಕಾಂಗ್ರೆಸ್ ಸದಸ್ಯರಿದ್ದರೂ ಜೆಡಿಎಸ್‌ನ ಒಬ್ಬ ಸದಸ್ಯರು ಗೈರು, ಇಬ್ಬರೂ ತಟಸ್ಥರಾಗಿ ಉಳಿಯುವಂತೆ ಮಾಡಿ ಸಚಿವ ಎನ್.ಚಲುವರಾಯಸ್ವಾಮಿ ಮತ ಚಲಾಯಿಸುವುದರೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.ನಗರಸಭೆ ಮೇಲೂ ಕರಾಳ ಛಾಯೆ:
ನಾಗಮಂಗಲ ಪುರಸಭೆ ಚುನಾವಣೆಯ ಕರಾಳ ಛಾಯೆ ನಗರಸಭೆ ಚುನಾವಣೆಯ ಮೇಲೂ ಬೀರಲಿದೆ ಎನ್ನುವುದು ಕಾಂಗ್ರೆಸ್ಸಿಗರ ವಿಶ್ವಾಸವಾಗಿದೆ. ಜೆಡಿಎಸ್‌ನೊಳಗಿರುವ ಕೆಲವು ಸದಸ್ಯರು ಹಾಗೂ ಆ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಮೂವರು ಕಾಂಗ್ರೆಸ್ ಸದಸ್ಯರು ಮೇಲ್ನೋಟಕ್ಕೆ ಅವರ ಜೊತೆಗಿದ್ದು ಒಗ್ಗಟ್ಟು ಪ್ರದರ್ಶಿಸುತ್ತಿದ್ದರೂ ಚುನಾವಣೆ ವೇಳೆಗೆ ಅವರ ನಿಲುವುಗಳು ಬದಲಾಗಬಹುದೆಂಬ ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರುವ ವಿಶ್ವಾಸದಲ್ಲಿದೆ. ಆದರೆ, ಜೆಡಿಎಸ್ ಪಕ್ಷದವರು ನಮ್ಮಿಂದ ಇಬ್ಬರು ಸದಸ್ಯರು ಹೊರಹೋಗಿದ್ದರೂ ಆ ಕಡೆಯಿಂದ ಮೂವರು ಬಂದಿದ್ದಾರೆ. ಸಂಖ್ಯಾಬಲದಲ್ಲಿ ನಾವೇ ಮುಂದಿರುವುದರಿಂದ ಅಧಿಕಾರ ಹಿಡಿಯುವುದು ಖಚಿತ ಎನ್ನುತ್ತಿದ್ದಾರೆ. ಯಾರ ನಿಷ್ಠೆ ಯಾರ ಕಡೆಗಿದೆ ಎನ್ನುವುದು ಚುನಾವಣೆ ನಡೆಯುವ ವೇಳೆಗೆ ಬಹಿರಂಗವಾಗಲಿದೆ.ಜೆಡಿಎಸ್ ಗೆಲ್ಲುವ ಸೂಚನೆ ಇದ್ದರಷ್ಟೇ ಎಚ್‌ಡಿಕೆ ಆಗಮನ..!ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಗೆದ್ದೇ ಗೆಲ್ಲುವುದೆಂಬ ವಾತಾವರಣ ಸೃಷ್ಟಿಯಾದರಷ್ಟೇ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚುನಾವಣೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಇಲ್ಲದಿದ್ದರೆ ಮುಜುಗರ, ಮುಖಭಂಗ ಅನುಭವಿಸುವ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳಿದ್ದರೆ ಗೈರು ಹಾಜರಾಗಲಿದ್ದಾರೆಂಬುದು ಪಕ್ಷದ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.
ಅವರ ಜೊತೆಗಿರುವ ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ಸದಸ್ಯರು ಒಗ್ಗಟ್ಟಿನಿಂದ ಯಾರೇ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರೂ ಅವರನ್ನು ಬೆಂಬಲಿಸಲು ಸಿದ್ಧರಿರುವುದಾಗಿ ಸ್ಪಷ್ಟ ಸಂದೇಶ ನೀಡಿ ಎಲ್ಲರೂ ಒಮ್ಮನಸ್ಸಿನಿಂದ ಮತ ಚಲಾಯಿಸುವುದಾದರೆ ಎಚ್.ಡಿ.ಕುಮಾರಸ್ವಾಮಿ ಅವರೇ ಜೆಡಿಎಸ್ ಪಕ್ಷದ ನೇತೃತ್ವ ವಹಿಸಲಿದ್ದಾರೆ. ಸದಸ್ಯರೇನಾದರೂ ದ್ವಂದ್ವ ನಿಲುವು ಅನುಸರಿಸಬಹುದೆಂಬ ಸುಳಿವು ದೊರೆತರೆ ಗೈರು ಹಾಜರಾಗುವರೆಂದು ಹೇಳಲಾಗಿದೆ.