ಚಂಡೀಗಡಕ್ಕೆ ಐದು ದಿನ ಮಂಡ್ಯ ನಗರಸಭೆ ಸದಸ್ಯರ ಪ್ರವಾಸ...!

| Published : Feb 25 2025, 12:47 AM IST

ಚಂಡೀಗಡಕ್ಕೆ ಐದು ದಿನ ಮಂಡ್ಯ ನಗರಸಭೆ ಸದಸ್ಯರ ಪ್ರವಾಸ...!
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ನಗರ ಸ್ವಚ್ಛತೆ ಕುರಿತು ಅಧ್ಯಯನ ನಡೆಸುವ ಸಲುವಾಗಿ ನಗರಸಭಾ ಸದಸ್ಯರು ಫೆ.೨೮ ರಿಂದ ಐದು ದಿನಗಳ ಕಾಲ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಒಳಚರಂಡಿ ಸ್ವಚ್ಛತೆ, ಸಂಸ್ಕರಣೆ ಹಾಗೂ ತ್ಯಾಜ್ಯದಿಂದ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವ ಕುರಿತಂತೆ ಚಂಡೀಗಢಕ್ಕೆ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದ್ದು, ೩೦ ಲಕ್ಷ ರು. ವೆಚ್ಚದಲ್ಲಿ ಸದಸ್ಯರನ್ನು ಅಧ್ಯಯನಕ್ಕೆ ಕಳುಹಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರ ಸ್ವಚ್ಛತೆ ಕುರಿತು ಅಧ್ಯಯನ ನಡೆಸುವ ಸಲುವಾಗಿ ನಗರಸಭಾ ಸದಸ್ಯರು ಫೆ.೨೮ ರಿಂದ ಐದು ದಿನಗಳ ಕಾಲ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ.

ಒಳಚರಂಡಿ ಸ್ವಚ್ಛತೆ, ಸಂಸ್ಕರಣೆ ಹಾಗೂ ತ್ಯಾಜ್ಯದಿಂದ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವ ಕುರಿತಂತೆ ಚಂಡೀಗಡಕ್ಕೆ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದ್ದು, ೩೦ ಲಕ್ಷ ರು. ವೆಚ್ಚದಲ್ಲಿ ಸದಸ್ಯರನ್ನು ಅಧ್ಯಯನಕ್ಕೆ ಕಳುಹಿಸಲಾಗುತ್ತಿದೆ.

ಒಳಚರಂಡಿ ನೀರಿನ ಸಂಸ್ಕರಣೆ, ನಿರ್ವಹಣೆ ಹಾಗೂ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಸಮರ್ಪಕವಾಗಿ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ. ಸಣ್ಣ ಮಳೆಗೂ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತಿವೆ. ಒಳಚರಂಡಿ ನೀರನ್ನು ಸಂಸ್ಕರಣೆ ಮಾಡದೆ ನೇರವಾಗಿ ನಾಲೆಗಳಿಗೆ ಮತ್ತು ಕೆರೆಗಳನ್ನು ಸಂಪರ್ಕಿಸುವ ನೀರಿಗೆ ಸಂಪರ್ಕಿಸಲಾಗುತ್ತಿದೆ.

ಇದನ್ನು ತಡೆಗಟ್ಟುವ ಉದ್ದೇಶದಿಂದ ದೇಶದ ಸ್ವಚ್ಛ ನಗರಗಳಲ್ಲಿ ಒಂದಾಗಿರುವ ಚಂಡೀಗಡಕ್ಕೆ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಆ ರಾಜ್ಯಕ್ಕೆ ತೆರಳುವ ಅವಕಾಶ ದೊರಕಿದ್ದು, ಒಳಚರಂಡಿ ವ್ಯವಸ್ಥೆಯಲ್ಲಿ ಆ ರಾಜ್ಯದವರು ಅಳವಡಿಸಿಕೊಂಡಿರುವ ವಿಧಾನಗಳು, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮತ್ತು ಬಳಕೆಗೆ ಕಂಡುಕೊಂಡಿರುವ ಮಾರ್ಗದ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಿ ಆ ವ್ಯವಸ್ಥೆಯನ್ನು ರಾಜ್ಯ ಸರ್ಕಾರದ ಗಮನಸೆಳೆದು ಇಲ್ಲಿಯೂ ಅಳವಡಿಸಿಕೊಳ್ಳುವ ಸದುದ್ದೇಶದಿಂದ ಪ್ರವಾಸ ಹಮ್ಮಿಕೊಂಡಿದ್ದಾರೆ.

ನಗರದ ಕಾಳೇನಹಳ್ಳಿಯಲ್ಲಿರುವ ಘನ ತ್ಯಾಜ್ಯ ಸಂಸ್ಕರಣಾ ಘಟಕ ಸಂಪೂರ್ಣವಾಗಿ ಹಾಳಾಗಿದೆ. ಅಲ್ಲಿ ನಗರವ್ಯಾಪ್ತಿಯ ಕಸವನ್ನು ತೆಗೆದುಕೊಂಡು ಹೋಗಿ ರಾಶಿ ಹಾಕಲಾಗುತ್ತಿದೆಯೇ ವಿನಃ ಇನ್ಯಾವುದೇ ಪ್ರಕ್ರಿಯೆ ಅಲ್ಲಿ ನಡೆಯುತ್ತಿಲ್ಲ. ಆ ಸ್ಥಳದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸಿ ಉಳಿದ ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಚಿಂತನೆ ನಡೆಸಲಾಗಿದ್ದು, ಅಧ್ಯಯನ ಪ್ರವಾಸ ಮುಗಿಸಿಬಂದ ನಂತರದಲ್ಲಿ ಅದನ್ನು ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ತರಬಹುದು ಎಂಬ ಬಗ್ಗೆ ನಗರಸಭೆ ಅಧಿಕಾರಿಗಳು ಅವಲೋಕನ ನಡೆಸಲಿದ್ದಾರೆ. ನಂತರ ಸಚಿವರು-ಶಾಸಕರ ಗಮನ ಸೆಳೆದು ಸರ್ಕಾರಕ್ಕೆ ಅನುದಾನಕ್ಕೆ ಮನವಿ ಮಾಡುವ ಸಾಧ್ಯತೆಗಳಿವೆ.

ಸ್ವಚ್ಛತೆ ಕುರಿತಾದ ಅಧ್ಯಯನಕ್ಕೆ ಸರ್ಕಾರದಿಂದ ೩೦ ಲಕ್ಷ ರು. ವೆಚ್ಚದಲ್ಲಿ ನಗರಸಭೆ ಸದಸ್ಯರನ್ನು ಚಂಡೀಗಡಕ್ಕೆ ಫೆ.೨೮ ರಿಂದ ಐದು ದಿನಗಳ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ದೇಶದ ಸ್ವಚ್ಛ ನಗರಗಳಲ್ಲಿ ಒಂದಾಗಿರುವ ಚಂಡೀಗಡದಲ್ಲಿ ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸದಸ್ಯರು ಮಾಹಿತಿ ಸಂಗ್ರಹಿಸಿಕೊಂಡು ಬರುವರು. ಆನಂತರ ಇಲ್ಲಿ ಅದರ ಅನುಷ್ಠಾನ ಹೇಗೆ ಮಾಡಬಹುದೆಂಬ ಕುರಿತು ಚಿಂತನೆ ನಡೆಸಲಾಗುವುದು.

- ಪಂಪಾಶ್ರೀ, ಆಯುಕ್ತೆ, ನಗರಸಭೆ