ಕೈಕೊಟ್ಟ ಆನ್‌ಲೈನ್‌ ಪಾವತಿ : 30% ಪುಸ್ತಕ ವ್ಯಾಪಾರ ಖೋತಾ! ಭಾರಿ ಸಮಸ್ಯೆ- ಎರಡನೇ ದಿನವೂ ಸುಧಾರಿಸದ ವಹಿವಾಟು

| Published : Dec 22 2024, 11:09 AM IST

UPI Payment Online Fraud

ಸಾರಾಂಶ

ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಧೂಳಿನ ಗೋಳು ಪುಸ್ತಕ ವ್ಯಾಪಾರಿಗಳನ್ನು ಕಂಗೆಡಿಸುವುದು ಈಗ ಇತಿಹಾಸ. ಮಂಡ್ಯ ಸಮ್ಮೇಳನದಲ್ಲಿ ಧೂಳಂತು ಖಂಡಿತಾ ಇಲ್ಲ.

ಕೃಷ್ಣಮೋಹನ ತಲೆಂಗಳ

ಮಂಡ್ಯ : ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಧೂಳಿನ ಗೋಳು ಪುಸ್ತಕ ವ್ಯಾಪಾರಿಗಳನ್ನು ಕಂಗೆಡಿಸುವುದು ಈಗ ಇತಿಹಾಸ. ಮಂಡ್ಯ ಸಮ್ಮೇಳನದಲ್ಲಿ ಧೂಳಂತು ಖಂಡಿತಾ ಇಲ್ಲ. ಆದರೆ ಮಳಿಗೆಗಳ ಬ್ಲಾಕ್‌ಗಳಲ್ಲಿ ಗಾಳಿ ಸಂಚಾರ ಕಡಿಮೆಯಾಗಿ, ವ್ಯಾಪಾರವೂ ನಿರೀಕ್ಷಿತವಾಗಿ ನಡೆಯದೆ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು ಅಕ್ಷರಶಃ ‘ಬೆವರಿದ್ದಾರೆ’.

ಸಮ್ಮೇಳನದ ಪ್ರಧಾನ ಸಭಾಂಗಣದ ಬಲ ಭಾಗದಲ್ಲೇ ಮೂರು ಬ್ಲಾಕ್‌ಗಳಲ್ಲಿ 450 ಮಳಿಗೆಗಳು ಪುಸ್ತಕ ವ್ಯಾಪಾರಕ್ಕೆ ಮೀಸಲಾಗಿವೆ. ಮೊದಲನೇ ದಿನ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ಆಗಿರಲಿಲ್ಲ. ಎರಡನೇ ದಿನ ವಾರಾಂತ್ಯವಾದ ಕಾರಣ ಉತ್ತಮ ಮಾರಾಟದ ನಿರೀಕ್ಷೆ ಇತ್ತಾದರೂ ಅದೂ ಹುಸಿಯಾಯಿತು. ಇಂಟರ್‌ನೆಟ್ ಸಂಪರ್ಕ ಕೈಕೊಟ್ಟು ಶೇ.30ರಷ್ಟು ಗಿರಾಕಿಗಳನ್ನು ಕಳೆದುಕೊಂಡಿರುವಾಗಿ ಬಹುತೇಕ ಪ್ರಕಾಶಕರು ‘ಕನ್ನಡಪ್ರಭ’ದ ಜೊತೆ ಅಲವತ್ತುಕೊಂಡಿದ್ದಾರೆ.

ಗೂಗಲ್‌ ಪೇ, ಫೋನ್‌ ಪೇ ಕೆಲ್ಸ ಮಾಡ್ತಿಲ್ಲ:

ಯುಪಿಐ ಪಾವತಿಗೆ ಒಗ್ಗಿರುವ ಜನ ನಗದು ತರುವುದು ಕಡಿಮೆಯಾಗಿದೆ. ಅನೇಕರು ಪುಸ್ತಕ ಆರಿಸಿ ಬಂದು ಗೂಗಲ್ ಪೇ ಮಾಡಲು ಎಷ್ಟು ಪ್ರಯತ್ನ ಮಾಡಿದರೂ ಪಾವತಿ ಸಾಧ್ಯವಾಗದೆ ಖರೀದಿಸಲು ಆರಿಸಿದ ಪುಸ್ತಕ ಹಾಗೇ ಬಿಟ್ಟು ತೆರಳಿದರು ಎಂದು ಬೇಸರಿಸಿದವರು ಮೈಸೂರು ಚೇತನ್ ಬುಕ್ ಹೌಸ್ ನಾಗಾರ್ಜುನ.

ಈ ಸಲ ಪುಸ್ತಕ ಮಳಿಗೆಗಳ ಆಯ್ಕೆ ತುಂಬ ಪಾರದರ್ಶಕವಾಗಿತ್ತು. ಆನ್‌ಲೈನ್ ಮೂಲಕ ಬಸ್ ಟಿಕೆಟ್ ಬುಕ್ ಮಾಡಿದ ಮಾದರಿ ಮಳಿಗೆಗಳ ಲೋಕೇಶನ್ ನೋಡಿ ಆರಿಸುವ ಸ್ವಾತಂತ್ರ್ಯ ಇದ್ದದ್ದು ಖುಷಿ ಕೊಟ್ಟಿದೆ ಎಂದವರು ಪುಸ್ತಕ ವಿಜಯಲಕ್ಷ್ಮೀ ಕೆಂಗೇರಿ.

ಸಪ್ನ ಬುಕ್ ಹೌಸ್‌ನ ಚಂದ್ರಶೇಖರ ಪ್ರಕಾರ ಹಾವೇರಿ ಸಮ್ಮೇಳನಕ್ಕೆ ಹೋಲಿಸಿದರೆ ಪುಸ್ತಕ ಮಾರಾಟ ನಿರಾಶಾದಾಯಕವಾಗಿ ಕುಸಿದಿದೆ. ಸಾವಿರಾರು ಜನ ಇಲ್ಲಿ ಓಡಾಡಿದರೂ ಪುಸ್ತಕ ಖರೀದಿಗೆ ಇಳಿದವರು ಕಡಿಮೆ. ನವಕರ್ನಾಟಕ ಪ್ರಕಾಶನದ ಜನಾರ್ದನ ಪ್ರಕಾರ, ಮೊಬೈಲ್ ಪಾವತಿ ನೆಟ್‌ವರ್ಕ್‌ ಇಲ್ಲದೆ ಶೇ.30ರಷ್ಟು ವ್ಯಾಪಾರ ಕುಸಿದಿದೆ. ಇದರ ಹೊರತು ಶೇ.50ರಷ್ಟು ಒಟ್ಟು ವಹಿವಾಟು ಕಡಿಮೆಯಾಗಿದೆ.

ಬೆಂಗಳೂರು ಅಯೋಧ್ಯೆ ಪಬ್ಲಿಕೇಶನ್‌ನ ಅನಂತರಾಜು, ಪುಸ್ತಕ ಆರಿಸಿ ಬಿಲ್ ಪೇ ಮಾಡುವಷ್ಟರಲ್ಲಿ ಜೀಪೇ ಕೈಕೊಟ್ಟು ವ್ಯಾಪಾರವೇ ಹಾಳಾಗಿದೆ. ಬ್ಲಾಕುಗಳ ದ್ವಾರದಲ್ಲಿ ಎ,ಬಿ,ಸಿ, ಎಂದು ಎಲ್ಲೋ ಮೂಲೆಯಲ್ಲಿ ಸಣ್ಣದಾಗಿ ಬರೆದಿದ್ದರಿಂದ ಜಾಲತಾಣಗಳಲ್ಲಿ ಮಳಿಗೆಗಳ ಪ್ರಚಾರ ನೀಡಿದರೂ ಹುಡುಕುವಲ್ಲಿ ಜನ ಗೊಂದಲಕ್ಕೊಳಗಾಗುತ್ತಿದ್ದಾರೆ ಎಂದಿದ್ದಾರೆ.

ಸಪ್ನ ಬುಕ್ ಹೌಸ್‌ನ ದೊಡ್ಡೇಗೌಡರ ಪ್ರಕಾರ, ನಿರೀಕ್ಷಿತ ವ್ಯಾಪಾರವಿಲ್ಲ, ದಿನವೊಂದಕ್ಕೆ 1 ಲಕ್ಷ ರು. ಗೂ ಕಡಿಮೆ ವ್ಯಾಪಾರವಾಗಿದೆ, ಇದಕ್ಕೆ ಅರವಿಂದ ಬುಕ್ ಹೌಸ್ ಪ್ರವೀಣ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

2009ರಿಂದ ಪುಸ್ತಕ ಉದ್ಯಮ ನಡೆಸುತ್ತಿರುವ ಸಾವಣ್ಣ ಪ್ರಕಾಶನದ ಮಳಿಗೆಯಲ್ಲಿ ರಂಗಸ್ವಾಮಿ ಮೂಕನಹಳ್ಳಿ, ಜೋಗಿ, ನಾ.ಸೋಮೇಶ್ವರ ಕೃತಿಗಳು ಹೆಚ್ಚು ಮಾರಾಟವಾಗಿವೆ. ಎರಡು ದಿನಗಳಲ್ಲಿ ಸುಮಾರು 1.25 ಲಕ್ಷ ರು. ವಹಿವಾಟು ನಡೆದಿದ್ದು, ಸುಮಾರು 75 ಸಾವಿರ ರು. ಇಂಟರ್ನೆಟ್ ಇಲ್ಲದೆ ನಷ್ಟವಾಗಿದೆ.

ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳನ್ನು ಕಡೆಗಣಿಸುತ್ತಲೇ ಬಂದಿದೆ. ಕನಿಷ್ಠ ಸರಿಯಾದ ಮೊಬೈಲ್ ಡೇಟಾ ಸಿಗುವ ವ್ಯವಸ್ಥೆ ಮಾಡಿದ್ದರೂ ಸಾಕಿತ್ತು. ವ್ಯಾಪಾರ ಇದಕ್ಕಿಂತ ಜಾಸ್ತಿ ಆಗುತ್ತಿತ್ತು. ಸರ್ಕಾರ ಎಷ್ಟೇ ಕಡೆಗಣಿಸಲಿ, ಕನ್ನಡ ಸೇವೆಯೆಂದು ನಾವು ಮುಂದಿನ ಸಲವೂ ನಿರ್ಲಿಪ್ತವಾಗಿ ಬಂದೇ ಬರುತ್ತೇವೆ.

-ಜಮೀಲ್, ಸಾವಣ್ಣ ಪ್ರಕಾಶನ

ಊಟದ ವ್ಯವಸ್ಥೆ ಅವ್ಯವಸ್ಥೆ: ಸಮ್ಮೇಳನದ ವ್ಯವಸ್ಥೆ ಎಲ್ಲ ಚೆನ್ನಾಗಿದ್ದರೂ ಪ್ರತ್ಯೇಕ ಊಟದ ವ್ಯವಸ್ಥೆ ಇಲ್ಲದೆ ಓಡಾಟ ಕಷ್ಟವಾಗಿದೆ ಎಂದವರು ಆನಂದ್. ಕಾರ್ಕಳ ಪುಸ್ತಕದ ಮನೆಯ ಕಾದಂಬರಿಕಾರಿ ಅನು ಬೆಳ್ಳೆ ಅವರಿಗೆ ಇಂಟರ್ನೆಟ್ ಕೈಕೊಟ್ಟು ಶೇ.25ರಷ್ಟು ವ್ಯಾಪಾರ ಕೈಬಿಟ್ಚಿದೆಯಂತೆ. ಗಾಳಿ, ಊಟ, ಶೌಚ, ವಸತಿಯಂತಹ ಮೂಲ ಸೌಕರ್ಯ ಕಡಗಣಿಸಿ ಪ್ರಕಾಶಕರು, ಪುಸ್ತಕ ಮಾರಾಟಗಾರರ ಕಡೆಗಣನೆ ಆಗಿದೆ ಎಂಬ ಸಿಟ್ಟೂ ಅವರಿಗಿದೆ.

ಶನಿವಾರವೂ ಪೂರ್ವಾಹ್ನ 11 ಗಂಟೆ ಬಳಿಕ ಎ ಮತ್ತು ಬಿ ಬಹುತೇಕ ಭರ್ತಿಯಾಗಿ, ಸಿ ಬ್ಲಾಕ್ ಭಾಗಶಃ ಭರ್ತಿಯಾಗಿ ಜನ ಬರುತ್ತಲೇ ಇದ್ದರೂ ಪುಸ್ತಕ ಖರೀದಿಸಿದವರು ಕಮ್ಮಿ. ವಾರಾಂತ್ಯವೂ ಹೀಗಾದದ್ದು ವರ್ತಕರಿಗೆ ಬೇಸರವಾಗಿದೆ.

ಸಮಸ್ಯೆ ಏನೇನು?

-ವಿಶಾಲ ಬ್ಲಾಕುಗಳಲ್ಲಿ ಗಾಳಿ ಸಂಚಾರ ಕಡಿಮೆಯಿದ್ದು, ವೆಂಟಿಲೇಷನ್‌ ಸಮಸ್ಯೆ ಎದುರಾಗುತ್ತಿದೆ. ಮಳಿಗೆಗಳಿಂದ ಆಚೆ ಬಂದಾಗ ಬೆವೆತ ದೇಹಕ್ಕೆ ಉಸಿರು ಬಂದಂತಾಗುತ್ತದೆ.

-ಶುಕ್ರವಾರ ಮುಖ್ಯಮಂತ್ರಿ ಆಗಮನ ವೇಳೆ ಮೊಬೈಲ್ ಜಾಮರ್ ಬಳಸಲಾಗಿತ್ತು. ಆದರೆ ಅವರು ಹೋದ ಬಳಿಕ ಮತ್ತು ಶನಿವಾರವೂ ಇಂಟರ್ನೆಟ್ ಸಮಸ್ಯೆ ಸರಿ ಆಗಿಲ್ಲ.

-ಬ್ಲಾಕುಗಳ ನಡುವೆ ಸಂಪರ್ಕ ಇಲ್ಲ, ದ್ವಾರಗಳಲ್ಲಿ ದೊಡ್ಡದಾಗಿ ಬ್ಲಾಕ್ ಹೆಸರು ನಮೂದಿಸದೆ ಮಳಿಗೆಗಳನ್ನು ತಲುಪಲು ಕಷ್ಟವಾಗುತ್ತಿದೆ.

-ವರ್ತಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ, ಮಹಿಳೆಯರಿಗೆ ಸರಿಯಾದ ಶೌಚಾಲಯ ಇಲ್ಲದ್ದೂ ಸಮಸ್ಯೆಯಾಗಿದೆ.