ಸಾರಾಂಶ
ಆತಿಥ್ಯಕ್ಕೆ ಮಂಡ್ಯ ಹೆಸರುವಾಸಿ ಎಂಬುದನ್ನು ಸಾಹಿತ್ಯ ಸಮ್ಮೇಳನ ಸಾಬೀತುಪಡಿಸಿದೆ. ರುಚಿಕಟ್ಟಾದ ಊಟ, ಅಚ್ಚುಕಟ್ಟಾದ ವ್ಯವಸ್ಥೆ ಜನಮೆಚ್ಚುಗೆಗೆ ಪಾತ್ರವಾಗಿದೆ.
ಸಂಪತ್ ತರೀಕೆರೆ
ಮಂಡ್ಯ : ಆತಿಥ್ಯಕ್ಕೆ ಮಂಡ್ಯ ಹೆಸರುವಾಸಿ ಎಂಬುದನ್ನು ಸಾಹಿತ್ಯ ಸಮ್ಮೇಳನ ಸಾಬೀತುಪಡಿಸಿದೆ. ರುಚಿಕಟ್ಟಾದ ಊಟ, ಅಚ್ಚುಕಟ್ಟಾದ ವ್ಯವಸ್ಥೆ ಜನಮೆಚ್ಚುಗೆಗೆ ಪಾತ್ರವಾಗಿದೆ.
ಉತ್ತರ ಮತ್ತು ದಕ್ಷಿಣ ಕರ್ನಾಟಕ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿತ್ತು. ಅತಿ ಗಣ್ಯರು, ಗಣ್ಯರು, ನೋಂದಾಯಿತ ಪ್ರತಿನಿಧಿಗಳು, ಮಾಧ್ಯಮದವರು, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರೆಲ್ಲರಿಗೂ ಒಂದೇ ಮಾದರಿಯ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸುಮಾರು 3 ಲಕ್ಷ ಜನರಿಗೆ ಊಟ ವ್ಯವಸ್ಥೆ ಆಯೋಜಿಸಲಾಗಿತ್ತು.
ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಒಟ್ಟು300 ಕೌಂಟರ್‌ಗಳಲ್ಲಿ ಊಟ ನೀಡಲಾಗುತ್ತಿತ್ತು. 250ತ್ತು.ನ ಬಾಣಸಿಗರು, 900 ಜನ ಬಡಿಸುವವರನ್ನು ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. 400 ಜನ ಸ್ವಯಂ ಸೇವಕರನ್ನು ವಿವಿಧ ಅಡುಗೆ ಸಿದ್ಧತಾ ವಿಭಾಗಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ತಯಾರಾದ ಆಹಾರದ ಗುಣಮಟ್ಟ ಪರೀಕ್ಷೆ ಮಾಡಿದ ನಂತರವೇ ಉಣಬಡಿಸಲು ನೀಡಲಾಗುತ್ತಿತ್ತು.
ಮೊದಲ ದಿನ ತಿಂಡಿಗೆ ತಟ್ಟೆ ಇಡ್ಲಿ, ವಡೆ, ಚಟ್ನಿ, ಸಾಂಬಾರ್, ಮೈಸೂರು ಪಾಕ್, ಮಧ್ಯಾಹ್ನದ ಊಟಕ್ಕೆ ಕಾಯಿ ಹೋಳಿಗೆ, ತುಪ್ಪ, ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಚಟ್ನಿಪುಡಿ, ಮೆಂತ್ಯಬಾತ್, ಅನ್ನ, ಮೊಳಕೆಕಾಳು ಸಾಂಬಾರ್, ಮೊಸರು, ಮುದ್ದೆ, ಕೋಸಂಬರಿ, ಹಪ್ಪಳ, ಸಲಾಡ್ ನೀಡಿದರೆ, ರಾತ್ರಿಗೆ ಪೂರಿಸಾಗು, ಮೈಸೂರು ಪಾಕ್, ಅವರೆಕಾಳು ಬಾತು, ರಾಯಿತ, ಮೊಸರು, ಬಾಳೆಹಣ್ಣು, ಕೋಸಂಬರಿ,ಪಲ್ಯ, ಸಲಾಡ್, ಬೀಡಾ ನೀಡಲಾಗಿತ್ತು.
ತಿಂಡಿ-ಊಟ ಎಲ್ಲವೂ ರುಚಿಕಟ್ಟಾಗಿತ್ತು. ವಿಶಿಷ್ಟ, ವಿಭಿನ್ನ ಮಾದರಿಯ ಊಟಕ್ಕೆ ಜನರು ಫಿದಾ ಆಗಿದ್ದರು. ಎಲ್ಲಾ ಕೌಂಟರ್‌ಗಳಲ್ಲೂ ಸಮರ್ಪಕವಾಗಿ ಊಟ ವಿತರಣೆಯಾಗುತ್ತಿತ್ತು. ಎಲ್ಲಿಯೂ ನೂಕು-ನುಗ್ಗಲು ಉಂಟಾಗಲಿಲ್ಲ. ಸಮಾಧಾನ, ಸಂಯಮದಿಂದ ಜನರು ವರ್ತಿಸುವುದರೊಂದಿಗೆ ಊಟದ ವ್ಯವಸ್ಥೆ ಸುಗಮವಾಗಿ ನಡೆಯುವುದಕ್ಕೆ ಪೂರ್ಣವಾಗಿ ಸಹಕರಿಸಿದರು.
ಜನರು ಎಷ್ಟೇ ಸಮಯಕ್ಕೆ ಆಗಮಿಸಿದರೂ ತಿಂಡಿ-ಊಟ ಸದಾ ಸಿದ್ಧವಿರುವಂತೆ ವ್ಯವಸ್ಥೆ ಇತ್ತು.