ಸಾರಾಂಶ
ಎಚ್.ಕೆ.ಅಶ್ವಥ್, ಹಳುವಾಡಿ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು 30 ಲಕ್ಷ ರು. ವೆಚ್ಚದಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ನಗರಸಭೆಯಿಂದ ನಡೆಸಲಾಗುತ್ತಿದೆ. ಈ ಸಾಲಿನಲ್ಲಿ ಮೂರು ಸಾವಿರ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಜೊತೆಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುವ ಗುರಿ ಹೊಂದಲಾಗಿದೆ.
ಪ್ರಾಣಿ ಸಂತತಿ ನಿಯಂತ್ರಣ ಎಬಿಸಿ (ಡಾಗ್ಸ್ ರೂಲ್ಸ್) 2021ರ ರೀತ್ಯಾ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ರೇಬೀಸ್ ಚುಚ್ಚುಮದ್ದು ನೀಡಿ ಸಂತಾನ ಶಕ್ತಿಹರಣ ಚಿಕಿತ್ಸೆ ನಡೆಸಲಾಗುವುದು. ಶಸ್ತ್ರಚಿಕಿತ್ಸೆ ಬಳಿಕ ನಾಯಿಗಳನ್ನು ಆರೈಕೆ ಮಾಡಿ ಶಸ್ತ್ರಚಿಕಿತ್ಸೆ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸುವುದು. ನಂತರ ಅವುಗಳನ್ನು ಯಾವ ಜಾಗದಲ್ಲಿ ಹಿಡಿದಿರುವರೋ ಅದೇ ಜಾಗಕ್ಕೆ ಜಿಪಿಎಸ್ ಫೋಟೋ ಸಹಿತ ಬಿಡುವ ಕಾರ್ಯ ಮಾಡಲಾಗುತ್ತಿದೆ.2025-26ನೇ ಸಾಲಿನಲ್ಲಿ ಬೀದಿನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ 60 ಲಕ್ಷ ಹಣವನ್ನು ಖರ್ಚು ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 30 ಲಕ್ಷ ರು.ಗಳ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಮೂರು ಸಾವಿರ ನಾಯಿಗಳನ್ನು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಗೊಳಪಡಿಸುವ ಗುರಿ ಹೊಂದಿದ್ದು, ಒಂದೊಂದು ಬೀದಿನಾಯಿಗೆ ಅಂದಾಜು 1722 ರು.ನಂತೆ ವೆಚ್ಚ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಹೆಚ್ಚು ನಾಯಿಗಳಿದ್ದು, ಹಂತ ಹಂತವಾಗಿ ಕಳೆದೆರಡು ವರ್ಷಗಳಿಂದ ಶಸ್ತ್ರಚಿಕಿತ್ಸೆ ನಡೆಸಿಕೊಂಡು ಬರಲಾಗುತ್ತಿದೆ. ನಾಯಿಗಳ ಹಾವಳಿ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ಗಂಭೀರವಾಗಿ ಕ್ರಮ ವಹಿಸಲಾಗುತ್ತಿದೆ. ಇದನ್ನು ಹೊರತುಪಡಿಸಿದಂತೆ ನಾಯಿಗಳ ನಿಯಂತ್ರಣಕ್ಕೆ ಕಾನೂನಾತ್ಮಕವಾಗಿ ಪರ್ಯಾಯ ಮಾರ್ಗಗಳಿಲ್ಲದಿರುವುದರಿಂದ ನಗರಸಭೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಪ್ರತಿ ವರ್ಷ ಹಣ ಮೀಸಲಿಡುವುದು ಅನಿವಾರ್ಯವಾಗಿದೆ.2022ರಿಂದ ಸಂತಾನ ಶಕ್ತಿಹರಣ ಚಿಕಿತ್ಸೆ ಆರಂಭಿಸಲಾಗಿದೆ. 2023ರಲ್ಲಿ ಈ ಶಸ್ತ್ರ ಚಿಕಿತ್ಸೆಯನ್ನು ನಡೆಸಿರಲಿಲ್ಲ. 2024 ಮತ್ತು 2025ರಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಹಾಗೂ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಪರಿಸರ ಅಭಿಯಂತರ ರುದ್ರೇಗೌಡ ಹೇಳಿದರು.
ಮೊದಲ ಹಂತದಲ್ಲಿ 3 ಸಾವಿರ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಈ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳುತ್ತಿದ್ದಂತೆಯೇ ಮತ್ತೊಮ್ಮೆ ಟೆಂಡರ್ ಕರೆದು ಎರಡನೇ ಹಂತದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದು. ಮೊದಲ ಹಂತದ ಟೆಂಡರ್‌ನ್ನು ಬೆಂಗಳೂರಿನ ಮೆ.ಕೇರ್ ಆಫ್ ವಾಯ್ಸ್‌ಲೆಸ್ ಅನಿಮಲ್ ಟ್ರಸ್ಟ್‌ನವರಿಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ನಿತ್ಯ 10 ರಿಂದ 20 ನಾಯಿಗಳಿಗೆ ಶಸ್ತ್ರಚಿಕಿತ್ಸೆನಗರದ ವಿವಿಧ ವಾರ್ಡ್‌ಗಳಲ್ಲಿರುವ ನಾಯಿಗಳನ್ನು ಸೆರೆ ಹಿಡಿದು ವಾಹನಗಳಲ್ಲಿ ತುಂಬಿಕೊಂಡು ಕಾಳೇನಹಳ್ಳಿ ಹೊರ ವಲಯದ ಕಸ ಸಂಗ್ರಹಣಾ ಘಟಕಕ್ಕೆ ಕರೆದೊಯ್ಯಲಾಗುವುದು. ಅಲ್ಲಿ ನಿತ್ಯ 10 ರಿಂದ 20 ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿ ಬಳಿಕ ಅಲ್ಲೇ ಆರೈಕೆ ಮಾಡಲಾಗುತ್ತದೆ. ಬಳಿಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆಯೇ ಎಂಬುದನ್ನು ಖಚಿತ ಪಡಿಸಿಕೊಂಡು ರೇಬಿಸ್ ಚುಚ್ಚುಮದ್ದು ನೀಡಿ ಮತ್ತೆ ಅವುಗಳನ್ನು ಹಿಡಿದಿದ್ದ ಜಾಗದಲ್ಲೇ ಬಿಡುವ ಪ್ರಕ್ರಿಯೆ ನಡೆಸಲಾಗುತ್ತಿದೆ.ನಾಯಿಗಳ ಸಂತಾನಶಕ್ತಿ ಕ್ಷೀಣ
ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಎಂದರೆ ನಾಯಿಗಳ ಸಂತಾನವನ್ನೇ ನಿಗ್ರಹಿಸುವುದು ಎಂದರ್ಥವಲ್ಲ. ಶಸ್ತ್ರಚಿಕಿತ್ಸೆ ನಡೆಸುವುದರಿಂದ ನಾಯಿಗಳು ವರ್ಷಕ್ಕೆ ಎರಡು ಬಾರಿ ಮರಿ ಹಾಕುತ್ತವೆ. ಒಮ್ಮೆಲೆ ಅವು 5 ರಿಂದ 6 ಮರಿಗಳನ್ನು ಹಾಕುವ ಸಾಮಥ್ಯ ಹೊಂದಿರುತ್ತವೆ. ಶಸ್ತ್ರಚಿಕಿತ್ಸೆ ನಡೆಸುವುದರಿಂದ ಅವುಗಳ ಸಂತಾನ ಶಕ್ತಿ ಕ್ಷೀಣಿಸುತ್ತದೆ. ಅಂದರೆ ಆರು ಮರಿಗಳನ್ನು ಹಾಕುವ ನಾಯಿಯ ಸಾಮರ್ಥ್ಯವನ್ನು ಎರಡು ಅಥವಾ ಮೂರು ಮರಿಗಳಿಗೆ ಇಳಿಕೆಯಾಗುತ್ತದೆ. ಶಸ್ತ್ರಚಿಕಿತ್ಸೆಯಿಂದ ನಾಯಿಗಳಿಗೆ ಮದ ಬಂದಂತಾಗುತ್ತದೆ. ಇದರಿಂದ ಅವುಗಳು ಉದ್ವೇಗಗೊಳ್ಳುವುದಿಲ್ಲ. ಸಾರ್ವಜನಿಕರನ್ನು ಕಂಡು ದಾಳಿ ನಡೆಸುವುದೂ ಇಲ್ಲ. ಶಾಂತ ಸ್ವಭಾವವನ್ನು ಹೊಂದುತ್ತವೆ. ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡುವುದರಿಂದ ಯಾರಿಗಾದರೂ ಕಚ್ಚಿದರೆ ರೋಗ ಹರಡುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ವೈದ್ಯ ಡಾ.ರೋಹಿತ್ ತಿಳಿಸಿದ್ದಾರೆ.ಯಾವ ವರ್ಷ, ಎಷ್ಟು ವೆಚ್ಚ?ನಗರಸಭೆ 2022ರಲ್ಲಿ ಒಟ್ಟು 1762 ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ಚುಚ್ಚುಮದ್ದು ನೀಡಲಾಗಿತ್ತು. ಇದಕ್ಕಾಗಿ ಒಟ್ಟು 13,44,400 ರು.ಗಳನ್ನು ವೆಚ್ಚ ಮಾಡಲಾಗಿತ್ತು. 2024ರಲ್ಲಿ 30 ಲಕ್ಷ ರು. ವೆಚ್ಚ ಮಾಡಿ 1742 ನಾಯಿಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇದೀಗ 30 ಲಕ್ಷ ರು. ವೆಚ್ಚದಲ್ಲಿ 3 ಸಾವಿರ ನಾಯಿಗಳನ್ನು ಶಸ್ತ್ರಚಿಕಿತ್ಸೆ, ರೇಬಿಸ್ ಚುಚ್ಚುಮದ್ದು ನೀಡುವುದಕ್ಕೆ ಒಳಪಡಿಸಲಾಗಿದೆ.ಬೀದಿ ನಾಯಿಗಳನ್ನು ನಿಯಂತ್ರಿಸುವುದಕ್ಕ ಬಜೆಟ್‌ನಲ್ಲಿ 30 ಲಕ್ಷ ರು. ತೆಗೆದಿರಿಸಲಾಗಿದ್ದು, ನಾಯಿಗಳಿಗೆ ಕಾಳೇನಹಳ್ಳಿಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಒಂದು ನಾಯಿಗೆ 1722 ರು. ವೆಚ್ಚ ಮಾಡುತ್ತಿದ್ದು, ಅವುಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿ ಯಾವ ಜಾಗದಲ್ಲಿ ಹಿಡಿದಿದ್ದೇವೋ ಅದೇ ಜಾಗಕ್ಕೆ ಬಿಡಲಾಗುತ್ತಿದೆ.
-ಯು.ಪಿ.ಪಂಪಾಶ್ರೀ, ಆಯುಕ್ತರು, ನಗರಸಭೆ ಮಂಡ್ಯ;Resize=(128,128))
;Resize=(128,128))
;Resize=(128,128))