ಹಲವು ತಿಂಗಳುಗಳಿಂದ ಕೆಟ್ಟು ನಿಂತ ಸ್ವಚ್ಛ ವಾಹಿನಿ, ದುರಸ್ತಿ ಕಾಣದೆ ಮೂಲೆ ಸೇರಿ ತುಕ್ಕು ಹಿಡಿಯುತ್ತಿರುವ ವಾಹನ, ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯಕ್ಕೆ ಹಳ್ಳಿಗಳಲ್ಲಿ ಕಸದ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಜನರು ಹೈರಾಣಾಗಿದ್ದಾರೆ. ಖಾಲಿ ಜಾಗಗಳೇ ಕಸವನ್ನು ಡಂಪಿಂಗ್ ಮಾಡುವ ಯಾರ್ಡ್‌ಗಳಾಗಿ ಪರಿವರ್ತನೆಗೊಂಡಿದೆ. ಇದು ಮಂಡ್ಯ ತಾಲೂಕು ಹುಲಿವಾನ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಸಾಕ್ಷಾತ್ ದರ್ಶನ.
ಕನ್ನಡಪ್ರಭ ವಾರ್ತೆ ಮಂಡ್ಯ
ಹಲವು ತಿಂಗಳುಗಳಿಂದ ಕೆಟ್ಟು ನಿಂತ ಸ್ವಚ್ಛ ವಾಹಿನಿ, ದುರಸ್ತಿ ಕಾಣದೆ ಮೂಲೆ ಸೇರಿ ತುಕ್ಕು ಹಿಡಿಯುತ್ತಿರುವ ವಾಹನ, ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯಕ್ಕೆ ಹಳ್ಳಿಗಳಲ್ಲಿ ಕಸದ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಜನರು ಹೈರಾಣಾಗಿದ್ದಾರೆ. ಖಾಲಿ ಜಾಗಗಳೇ ಕಸವನ್ನು ಡಂಪಿಂಗ್ ಮಾಡುವ ಯಾರ್ಡ್‌ಗಳಾಗಿ ಪರಿವರ್ತನೆಗೊಂಡಿದೆ. ಇದು ಮಂಡ್ಯ ತಾಲೂಕು ಹುಲಿವಾನ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಸಾಕ್ಷಾತ್ ದರ್ಶನ.ಕಸ ವಿಲೇವಾರಿ ಮಾಡುವ ಲಕ್ಷಾಂತರ ರುಪಾಯಿ ಮೌಲ್ಯದ ‘ಸ್ವಚ್ಛ ವಾಹಿನಿ’ ಹಲವು ತಿಂಗಳುಗಳಿಂದ ಕೆಟ್ಟು ನಿಂತಿದೆ. ಅದನ್ನು ದುರಸ್ತಿ ಮಾಡಿ ಸ್ವಚ್ಛತೆಯ ಕೆಲಸಕ್ಕೆ ತೊಡಗಿಸುವಲ್ಲಿ ಅಧಿಕಾರಿಗಳು ನಿರಾಸಕ್ತಿ ವಹಿಸಿದ್ದಾರೆ. ಪರಿಣಾಮ ವಾಹನ ಪಂಚಾಯ್ತಿ ಆವರಣದಲ್ಲಿ ನಿಂತ ನಿಂತು ತುಕ್ಕು ಹಿಡಿಯುತ್ತಿದೆ.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಹಳ್ಳಿಗಳನ್ನು ಕಸ ಮುಕ್ತವಾಗಿಸಲು ಈ ವಿಶೇಷ ವಾಹನವನ್ನು ನೀಡಲಾಗಿದೆ. ಹುಲಿವಾನ ಪಂಚಾಯ್ತಿಯಲ್ಲಿ ಮಾತ್ರ ಈ ವಾಹನ ರಸ್ತೆಗಿಳಿಯದೆ ಮೂಲೆ ಸೇರಿದೆ. ಸರ್ಕಾರದ ಸೌಲಭ್ಯವಿದ್ದರೂ ಅದನ್ನು ಬಳಸಿಕೊಳ್ಳದ ಆಡಳಿತ ಮಂಡಳಿಯ ಧೋರಣೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಳ್ಳಿಗಳ ತುಂಬಾ ಕಸದ ಸಾಮ್ರಾಜ್ಯ:
ವಾಹನವು ಕಸ ಸಂಗ್ರಹಣೆಗೆ ಬಾರದೇ ಇರುವುದರಿಂದ ಹುಲಿವಾನ ಹಾಗೂ ಅದರ ವ್ಯಾಪ್ತಿಯ ಗ್ರಾಮಗಳ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಖಾಲಿ ಜಗಗಳೇ ಕಸದ ಡಂಪಿಂಗ್ ಯಾರ್ಡ್‌ಗಳಾಗಿ ಪರಿವರ್ತನೆಗೊಂಡಿವೆ. ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಕೊಡಬೇಕಾದ ಸಾರ್ವಜನಿಕರು, ಅನಿವಾರ್ಯವಾಗಿ ರಸ್ತೆ ಬದಿ, ಚರಂಡಿ ಹಾಗೂ ಶಾಲಾ-ಕಾಲೇಜುಗಳ ಮುಂಭಾಗದ ಖಾಲಿ ಜಗಗಳ ಎಸೆಯುತ್ತಿದ್ದಾರೆ.ಸಾಂಕ್ರಾಮಿಕ ರೋಗಗಳ ಭೀತಿ:
ಎಂದರಲ್ಲಿ ಬಿದ್ದಿರುವ ತ್ಯಾಜ್ಯ ಕೊಳೆತು ನಾರುತ್ತಿದೆ. ಇದರಿಂದ ಸೊಳ್ಳೆಗಳು ಹಾಗೂ ನೊಣಗಳ ಸಂತತಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಮುನ್ನುಡಿ ಬರೆದಿದೆ. ಕಸದ ರಾಶಿಯ ಸುತ್ತ ಬೀದಿನಾಯಿಗಳು ಮತ್ತು ಹಂದಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ.ಚಾಲಕನಿಲ್ಲವೇ? ಇಂಧನ ಸಿಗುತ್ತಿಲ್ಲವೇ?, ವಾಹನವೇಕೆ ಸಂಚರಿಸುತ್ತಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಪಂಚಾಯ್ತಿಯಿಂದ ಸೂಕ್ತ ಉತ್ತರವಿಲ್ಲ. ಚಾಲಕನಿಗೆ ಸಂಬಳ ನೀಡಲು ಹಣವಿಲ್ಲವೇ ಅಥವಾ ಇಂಧನ ಭರಿಸಲು ಗ್ರಾಪಂ ಬಳಿ ಅನುದಾನವಿಲ್ಲವೇ ಎಂಬ ಅನುಮಾನಗಳು ಮೂಡಿವೆ. ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿಸಿದ ವಾಹನ ಸದ್ಬಳಕೆಯಾಗದೆ ಹಾಳಾಗುತ್ತಿರುವುದು ಆಡಳಿತ ಯಂತ್ರದ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ಸಾರ್ವಜನಿಕರ ಆಕ್ರೋಶ:ನಮ್ಮ ಹಳ್ಳಿಯಲ್ಲಿ ಕಸ ಹಾಕಲು ಜಗವಿಲ್ಲ. ಸರ್ಕಾರ ಕಸ ವಿಲೇವಾರಿಗೆ ವಾಹನ ಕೊಟ್ಟಿದ್ದರೂ ಪಂಚಾಯ್ತಿಯವರು ಚಾಲನೆ ಮಾಡುತ್ತಿಲ್ಲ. ಅಧಿಕಾರಿಗಳು ಕೇವಲ ಕಚೇರಿಯ ಕುಳಿತುಕೊಳ್ಳದೆ ಹಳ್ಳಿಗಳ ಸ್ಥಿತಿಯನ್ನು ಬಂದು ನೋಡಲಿ. ತಕ್ಷಣವೇ ವಾಹನವನ್ನು ದುರಸ್ತಿಪಡಿಸಿ ರಸ್ತೆಗಿಳಿಸದಿದ್ದರೆ ಪಂಚಾಯ್ತಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಹುಲಿವಾನ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಯ ಉನ್ನತ ಅಧಿಕಾರಿಗಳು ತಕ್ಷಣ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಹುಲಿವಾನ ಗ್ರಾಪಂಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ ‘ಸ್ವಚ್ಛ ವಾಹಿನಿ’ಯನ್ನು ಪುನಃ ರಸ್ತೆಗಿಳಿಸುವ ಮೂಲಕ ಗ್ರಾಮಸ್ಥರ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಲು ಮುಂದಾಗಬೇಕು.ಸ್ವಚ್ಛ ವಾಹಿನಿ ವಾಹನ ಕೆಟ್ಟು ನಿಂತಿದ್ದು, ಅದನ್ನು ದುರಸ್ತಿ ಮಾಡಿಸಬೇಕಿದೆ. ವಾಹನಕ್ಕೆ ಚಾಲಕನಿಲ್ಲ. ವಾಟರ್‌ಮನ್‌ಗಳ ಮೂಲಕ ವಾಹನವನ್ನು ಚಾಲನೆ ಮಾಡಿಸಲಾಗುತ್ತಿತ್ತು. ಆದಷ್ಟು ಬೇಗ ವಾಹನವನ್ನು ದುರಸ್ತಿಗೊಳಿಸಿ ಕಸ ಸಂಗ್ರಹ ಕೆಲಸದಲ್ಲಿ ತೊಡಗಿಸಲಾಗುವುದು. ಖಾಸಗಿ ವಾಹನದಲ್ಲಿ ಕಸ ಸಂಗ್ರಹ ಮಾಡಲಾಗುತ್ತಿದೆ. ಶೀಘ್ರವೇ ಸಮರ್ಪಕ ಕಸ ವಿಲೇವಾರಿಗೆ ಕ್ರಮ ವಹಿಸಲಾಗುವುದು.- ಚಂದ್ರು, ಪಿಡಿಒ, ಹುಲಿವಾನ ಗ್ರಾಮ ಪಂಚಾಯ್ತಿ