ಮಂಡ್ಯ ವಿವಿ ಕ್ಯಾಂಪಸ್‌ಗೆ ವಿಶ್ವಗಂಗೋತ್ರಿ ಎಂದು ನಾಮಕರಣ: ಪಿ.ರವಿಕುಮಾರ್

| Published : Aug 19 2025, 01:00 AM IST

ಮಂಡ್ಯ ವಿವಿ ಕ್ಯಾಂಪಸ್‌ಗೆ ವಿಶ್ವಗಂಗೋತ್ರಿ ಎಂದು ನಾಮಕರಣ: ಪಿ.ರವಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ವಿಶ್ವವಿದ್ಯಾನಿಲಯವನ್ನುಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಉತ್ತರ ನೀಡಿದ್ದಾರೆ. ಹಾಗಾಗಿ ಇದು ಮುಚ್ಚುವಂತಹ ಶಿಕ್ಷಣ ಸಂಸ್ಥೆಯಲ್ಲ, ಇದನ್ನು ಮುನ್ನಡೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ವಿಶ್ವ ಗಂಗೋತ್ರಿ ಕ್ಯಾಂಪಸ್ ಎಂದು ನಾಮಕರಣ ಮಾಡಲಾಗಿದ್ದು, ಇದು ವಿಶ್ವ ಮಟ್ಟದಲ್ಲಿ ತನ್ನ ಸ್ಥಾನ ಪಡೆದುಕೊಳ್ಳಲಿ ಎಂದು ಶಾಸಕ ಪಿ.ರವಿಕುಮಾರ್ ಆಶಿಸಿದರು.

ಮಂಡ್ಯ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಪ್ರಾರಂಭವಾದ ಎಂಬಿಎ, ಎಂಸಿಎ, ಇಂಡಿಯನ್ ಬ್ಯಾಂಕ್ ಕೌಂಟರ್ ಉದ್ಘಾಟನೆ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಅದೇ ರೀತಿ ಮಂಡ್ಯ ವಿವಿ ಸಹ ಹೆಸರು ಮಾಡುವತ್ತ ಮುನ್ನಡೆಯುತ್ತಿರುವುದು ಸಂತಸ ಮೂಡಿಸಿದೆ ಎಂದರು.

ಮಂಡ್ಯ ವಿಶ್ವವಿದ್ಯಾನಿಲಯವನ್ನುಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಉತ್ತರ ನೀಡಿದ್ದಾರೆ. ಹಾಗಾಗಿ ಇದು ಮುಚ್ಚುವಂತಹ ಶಿಕ್ಷಣ ಸಂಸ್ಥೆಯಲ್ಲ, ಇದನ್ನು ಮುನ್ನಡೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲೆಯ ರೈತಾಪಿ ಮಕ್ಕಳು ಎಂಬಿಎ, ಎಂಸಿಎ ಕಲಿಯಲು ಖಾಸಗಿ ಕಾಲೇಜುಗಳಿಗೆ ಹೋಗಿ ಅತಿ ಹೆಚ್ಚು ಶುಲ್ಕ ಪಾವತಿ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಮುಖಂಡರು ಹಾಗೂ ಇಲ್ಲಿನ ಪ್ರಾಧ್ಯಾಪಕರಿಗೆ ಈ ವಿಷಯಗಳ ಕುರಿತು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ಒತ್ತಡ ಹಾಕಿದ್ದರು. ಇದರ ಫಲವಾಗಿ ನಾನೂ ಸಹ ಉನ್ನತ ಶಿಕ್ಷಣ ಸಚಿವರನ್ನು ಸಂಪರ್ಕಿಸಿ ಚರ್ಚೆ ಮಾಡಿದ್ದೆ. ಕುಲಪತಿಯವರು ಸಹ ಶ್ರಮ ಹಾಕಿದ್ದರು. ಇದರ ಫಲವಾಗಿ ಇದೀಗ ಮಂಡ್ಯ ವಿವಿಯಲ್ಲೇ ಎಂಬಿಎ, ಎಂಸಿಎ ಪದವಿಗಳನ್ನು ಅಭ್ಯಾಸ ಮಾಡಲು ಸಾಧ್ಯವಾಗಿದೆ ಎಂದು ವಿವರಿಸಿದರು.

ಇಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಇದನ್ನು ಹಂತ ಹಂತವಾಗಿ ಪರಿಹರಿಸಬೇಕಾಗಿದೆ. ಮೊದಲು ಆಡಿಟೋರಿಯಂ ಬೇಕಾಗಿದೆ. ಇದಕ್ಕಾಗಿ ಶಾಸಕರ ಅನುದಾನದಿಂದ ೨ ಕೋಟಿ ರು. ನೀಡುವುದಾಗಿ ಘೋಷಿಸಿದರು. ಅಲ್ಲದೇ, ಕ್ಯಾಂಟೀನ್ ಸೌಲಭ್ಯ ಬೇಕಾಗಿದ್ದು ಮುಂದಿನ ವಾರ ಕ್ಯಾಂಟೀನ್ ಬಗ್ಗೆ ಚರ್ಚೆ ನಡೆಸಿ ಗಣೇಶ ಹಬ್ಬದ ಸಂದರ್ಭದಲ್ಲೇ ಕ್ಯಾಂಟೀನ್ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ನಮ್ಮ ಸರ್ಕಾರದಿಂದ ಮಂಡ್ಯದಲ್ಲಿ ಹಲವಾರು ಕಾರ್ಯಗಳು ನಡೆಯುತ್ತಿವೆ. ಶಾಲೆಗಳು, ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ೨ ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಇರುವವರಿಗಾಗಿ ಕ್ರೀಡಾಂಗಣ ಆವರಣದಲ್ಲೇ ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣವನ್ನೂ ಸಹ ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಹಲವಾರು ಸೌಲಭ್ಯಗಳನ್ನು ಸರ್ಕಾರದಿಂದ ದೊರಕಿಸಿಕೊಡುವ ಭರವಸೆ ನೀಡಿದರು.

ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಮೌಲ್ಯಮಾಪನ ಕುಲಸಚಿವ ಪ್ರೊ. ಕೆ. ಯೋಗನರಸಿಂಹಾಚಾರಿ, ಹಣಕಾಸು ಅಧಿಕಾರಿ ಡಾ.ಖಾದರ್ ಪಾಷ, ಕಾಲೇಜು ಪ್ರಾಂಶುಪಾಲೆ ಸ್ವರ್ಣ ಬಿ., ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕ ಎನ್.ಶ್ರೀಧರ್, ಕುಲಸತಿವ (ಆಡಳಿತ) ಪ್ರೊ.ಎಸ್.ಚಂದ್ರಕಿರಣ್, ಉಪ ಕುಲಸಚಿವ (ಶೈಕ್ಷಣಿಕ) ಡಾ.ಎಂ.ವೈ. ಶಿವರಾಮು ಸಮಾರಂಭದಲ್ಲಿ ಭಾಗವಹಿಸಿದ್ದರು.