ವಿವಿ ಹಣಕಾಸು ಸಮಿತಿ, ಸಿಂಡಿಕೇಟ್ ಸಭೆಗಳಲ್ಲೂ ಈ ವಿಷಯ ಚರ್ಚೆಗೆ ಬಂದಾಗ ಹಣಕಾಸು ಸಮಿತಿ ವೇತನ ಪಾವತಿಗೆ ಸಮ್ಮತಿ ಸೂಚಿಸಿತ್ತು. ಆದರೂ ಆಡಳಿತ ಮಂಡಳಿ ಇದುವರೆಗೂ ವೇತನ ಪಾವತಿಸದೆ ಮೀನಮೇಷ ಎಣಿಸುತ್ತಿರುವುದರಿಂದ ವೇತನವಿಲ್ಲದೆ ಅತಿಥಿ ಉಪನ್ಯಾಸಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರು ಎರಡು ತಿಂಗಳ ವೇತನವನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಕುಲಸಚಿವರ ಎದುರು ಸೋಮವಾರ ಬಿಗಿಪಟ್ಟು ಹಿಡಿದರು.

ಅತಿಥಿ ಉಪನ್ಯಾಸಕರೆಲ್ಲರೂ ಸಾಮೂಹಿಕವಾಗಿ ಕುಲಸಚಿವರನ್ನು ಭೇಟಿಯಾಗಿ ವೇತನ ಪಾವತಿಗೆ ವಿಳಂಬ ಮಾಡುತ್ತಿರುವ ಆಡಳಿತ ಮಂಡಳಿ ಧೋರಣೆ ವಿರೋಧಿಸಿದರು. ಇನ್ನೆರಡು ದಿನದಲ್ಲಿ ವೇತನ ನೀಡದಿದ್ದರೆ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಬಾರಿ ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಕ ಮಾಡಿದರೂ ವೇತನ ಪಾವತಿಯನ್ನು ವಿಶ್ವವಿದ್ಯಾಲಯವೇ ಪಾವತಿಸಬೇಕು. ಅದಕ್ಕಾಗಿ ಸ್ವಂತ ಆರ್ಥಿಕ ಸಂಪನ್ಮೂಲವನ್ನು ಸೃಷ್ಟಿಸಿಕೊಳ್ಳುವಂತೆ ತಿಳಿಸಿತ್ತು. ಮಕ್ಕಳ ದಾಖಲಾತಿ ಕಡಿಮೆ ಇರುವುದರಿಂದ ವೇತನ ಪಾವತಿ ಕಷ್ಟವಾಗಲಿದೆ ಎಂದು ಸರ್ಕಾರಕ್ಕೆ ಪತ್ರ ಬರೆದರೂ ಅದನ್ನು ಒಪ್ಪದೆ ವೇತನ ಭರಿಸುವ ಜವಾಬ್ದಾರಿಯನ್ನು ವಿವಿಗೇ ವಹಿಸಿತ್ತು ಎಂದು ಅತಿಥಿ ಉಪನ್ಯಾಸಕರು ತಿಳಿಸಿದರು.

ವಿವಿ ಹಣಕಾಸು ಸಮಿತಿ, ಸಿಂಡಿಕೇಟ್ ಸಭೆಗಳಲ್ಲೂ ಈ ವಿಷಯ ಚರ್ಚೆಗೆ ಬಂದಾಗ ಹಣಕಾಸು ಸಮಿತಿ ವೇತನ ಪಾವತಿಗೆ ಸಮ್ಮತಿ ಸೂಚಿಸಿತ್ತು. ಆದರೂ ಆಡಳಿತ ಮಂಡಳಿ ಇದುವರೆಗೂ ವೇತನ ಪಾವತಿಸದೆ ಮೀನಮೇಷ ಎಣಿಸುತ್ತಿರುವುದರಿಂದ ವೇತನವಿಲ್ಲದೆ ಅತಿಥಿ ಉಪನ್ಯಾಸಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಅಳಲು ವ್ಯಕ್ತಪಡಿಸಿದರು.

ಒಂದು ವರ್ಷದಲ್ಲಿ ಕೊಡುವುದೇ ಹತ್ತು ತಿಂಗಳ ವೇತನ. ಅದನ್ನೂ ಸರಿಯಾಗಿ ನೀಡದಿದ್ದರೆ ಹೇಗೆ. ವೇತನವಿಲ್ಲದಿದ್ದರೂ ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ನಿತ್ಯ ತರಗತಿಗಳಿಗೆ ಹಾಜರಾಗಿ ಪಾಠ-ಪ್ರವಚನಗಳನ್ನು ಮುಗಿಸುತ್ತಿದ್ದೇವೆ. ಅತಿಥಿ ಉಪನ್ಯಾಸಕರು ಜೀವನದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಆಡಳಿತ ಮಂಡಳಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಅತಿಥಿ ಉಪನ್ಯಾಸಕರೆಲ್ಲರೂ ಕುಲಸಚಿವೆ ಕಲ್ಪಶ್ರೀ ಅವರನ್ನು ಭೇಟಿಯಾಗಿ ವೇತನ ಪಾವತಿಸುವಂತೆ ಬಿಗಿಪಟ್ಟು ಹಿಡಿದರು. ಆಗ ಅವರನ್ನು ಸಮಾಧಾನಪಡಿಸಿದ ಕಲ್ಪಶ್ರೀ ಅವರು, ಅತಿಥಿ ಉಪನ್ಯಾಸಕರ ಹಾಜರಾತಿಯನ್ನು ಪರಿಶೀಲಿಸಿ ವೇತನ ಪಾವತಿಗೆ ಕ್ರಮವಹಿಸುವಂತೆ ಸೂಚಿಸಿದ್ದೇನೆ. ಇನ್ನೆರಡು ದಿನದಲ್ಲಿ ವೇತನ ಪಾವತಿಯಾಗಲಿದೆ. ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ಆಗ ಅತಿಥಿ ಉಪನ್ಯಾಸಕರು ಇನ್ನೆರಡು ದಿನಗಳಲ್ಲಿ ನಮಗೆ ವೇತನ ಪಾವತಿಯಾಗದಿದ್ದರೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಕುಲಸಚಿವರಿಗೆ ಎಚ್ಚರಿಕೆ ನೀಡಿದರು.

ಮಂಡ್ಯ ವಿವಿ ಹಣಕಾಸು ಸಮಿತಿ ವೇತನ ಪಾವತಿಗೆ ಒಪ್ಪಿದ್ದರೂ ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಅತಿಥಿ ಉಪನ್ಯಾಸಕರ ವಾರ್ಷಿಕ ಸುಮಾರು ೫ ಕೋಟಿ ರು. ಆಗಬಹುದು. ಕಾಲೇಜಿನಲ್ಲಿ ೧೫೬ ಅತಿಥಿ ಉಪನ್ಯಾಸಕರಿದ್ದು, ೨೮ ಸಾವಿರ ರು.ನಿಂದ ೪೦ ಸಾವಿರ ರು.ವರೆಗೆ ವೇತನ ಪಡೆಯುತ್ತಿದ್ದಾರೆ. ವೇತನ ವಿಳಂಬದಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ.

- ಉಮೇಶ್ ದಡಮಹಳ್ಳಿ, ಅತಿಥಿ ಉಪನ್ಯಾಸಕ

ಅತಿಥಿ ಉಪನ್ಯಾಸಕರು ಸರ್ಕಾರದಿಂದ ನೇಮಕಗೊಂಡಿದ್ದರೂ ವಿವಿಗಳೇ ವೇತನ ಪಾವತಿಸುವಂತೆ ಸೂಚನೆ ನೀಡಿದೆ. ವಿವಿ ಹಣಕಾಸು ಸಮಿತಿ ಸಮ್ಮತಿಸಿದ್ದರೂ ವೇತನ ಪಾವತಿಸದಿರುವುದು ಸರಿಯಲ್ಲ. ಕೂಡಲೇ ವೇತನ ಪಾವತಿಗೆ ವಿವಿಯ ಆಡಳಿತ ಮಂಡಳಿ ಕ್ರಮ ವಹಿಸಬೇಕು. ಇಲ್ಲದಿದ್ದರೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಲಿದೆ.

-ಗಣೇಶ್, ಅತಿಥಿ ಉಪನ್ಯಾಸಕ