ಕನ್ನಡಪ್ರಭ ವಾರ್ತೆ ಮಂಡ್ಯ

ಒಂದು ಬೀದಿಯ ಎರಡೂ ಬದಿ ಚರಂಡಿ ನಿರ್ಮಿಸಿ ನಂತರ ರಸ್ತೆ ನಿರ್ಮಿಸುವುದು ನಿಯಮ. ಆದರೆ, ಇಲ್ಲಿನ ಕುವೆಂಪುನಗರದ ಒಂದನೇ ಕ್ರಾಸ್‌ನಲ್ಲಿ ಒಂದು ಕಡೆ ಮಾತ್ರ ಚರಂಡಿ ನಿರ್ಮಿಸಿ ಮತ್ತೊಂದು ಕಡೆ ಅವೈಜ್ಞಾನಿಕವಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ ಎಂದು ಸ್ಥಳೀಯ ನಿವಾಸಿ ಎಸ್.ಎಂ.ಅಶೋಕ್‌ಕುಮಾರ್ ದೂರಿದ್ದಾರೆ.

ಈ ವಿಷಯವಾಗಿ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ಅವರಿಗೆ ದೂರು ನೀಡಿರುವ ಅವರು, ಅಶೋಕ್‌ಕುಮಾರ್ ಮನೆಯ ಮುಂದಿನ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಕಳೆದ ೧೫ ದಿನಗಳಿಂದ ನಡೆಸುತ್ತಿದ್ದಾರೆ. ಆದರೆ, ರಸ್ತೆಯ ಎರಡೂ ಕಡೆ ಚರಂಡಿ ನಿರ್ಮಿಸಿ ರಸ್ತೆ ನಿರ್ಮಾಣ ಮಾಡದೆ ಒಂದು ಬದಿಯಷ್ಟೇ ಚರಂಡಿಯನ್ನು ನಿರ್ಮಿಸಿ ಮತ್ತೊಂದು ಬದಿಗೆ ಪೂರ್ತಿ ಕಾಂಕ್ರೀಟ್ ಹಾಕಲಾಗಿದೆ. ಇದು ನಿಯಮಬಾಹೀರ ಎಂದು ಆರೋಪಿಸಿದ್ದಾರೆ.

ಕಾಂಕ್ರೀಟ್ ರಸ್ತೆಯ ಬೆಡ್ ಕಾಮಗಾರಿಯಲ್ಲೂ ನೀರೆಲ್ಲವೂ ಅಶೋಕ್‌ಕುಮಾರ್ ಮನೆಯ ಕಡೆಗೆ ಹರಿದುಬರುವಂತೆ ನಿರ್ಮಿಸಲಾಗಿದೆ. ಇದರಿಂದ ಚರಂಡಿ ನೀರು, ರಸ್ತೆಯಲ್ಲಿ ಬಿದ್ದ ಮಳೆ ನೀರೆಲ್ಲವೂ ಮನೆಯತ್ತ ನುಗ್ಗಿ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ದೂರಿದ್ದಾರೆ.

ನಗರಸಭೆ ಕಾರ್ಯಪಾಲಕ ಎಂಜಿನಿಯರ್ ಅವರೊಂದಿಗೆ ಕೂಡಲೇ ಸ್ಥಳವನ್ನು ಮರುಪರಿಶೀಲನೆ ನಡೆಸಿ ಹಾಲಿ ನಡೆಸುತ್ತಿರುವ ಸಿಮೆಂಟ್ ರಸ್ತೆ ಕಾಮಗಾರಿಯನ್ನು ತಡೆಹಿಡಿದು ವೈಜ್ಞಾನಿಕ ರೀತಿಯಲ್ಲಿ ರಸ್ತೆಯ ಎರಡೂ ಬದಿ ಚರಂಡಿ ನಿರ್ಮಿಸಿ ರಸ್ತೆಯನ್ನು ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.


ಈ ವಿಷಯವಾಗಿ ನಗರಸಭೆಯ ಕಾರ್ಯಪಾಲಕ ಎಂಜಿನಿಯರ್ ಪುಟ್ಟಯ್ಯ ಅವರನ್ನು ಕೇಳಿದಾಗ, ಎರಡೂ ಕಡೆ ಚರಂಡಿ ನಿರ್ಮಿಸಬೇಕಾಗಿದ್ದರೂ ರಸ್ತೆ ಕಿರಿದಾಗಿದ್ದರಿಂದ ಒಂದು ಕಡೆ ಮಾತ್ರ ಚರಂಡಿ ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿ ಬಿದ್ದ ನೀರೆಲ್ಲವೂ ಸರಾಗವಾಗಿ ಮೋರಿಗೆ ಹರಿದುಹೋಗುವಂತೆ ವ್ಯವಸ್ಥೆ ಮಾಡಿದೆ. ಒಂದು ಭಾಗಕ್ಕೆ ಚರಂಡಿಯ ಅಗತ್ಯವಿಲ್ಲವೆಂದು ಸ್ಥಳೀಯ ಜನರು ಸಹಿಮಾಡಿಕೊಟ್ಟಿದ್ದರಿಂದ ಜನರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿರುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.