ಸಿರಿಧಾನ್ಯ ಬೆಳೆಗಳ ಮಹತ್ವ ಹೆಚ್ಚಾಗುತ್ತಿರುವುದರಿಂದ ರೈತರು ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ (ಕಿರು ಧಾನ್ಯಗಳು), ಮಂಡ್ಯ ವಿ.ಸಿ. ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರ ಹಾಗೂ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಭಾರತ ಸರ್ಕಾರದ ಪ.ಜಾತಿ ಉಪಯೋಜನೆಯಡಿ ಎಚ್.ಡಿ. ಕೋಟೆ ತಾಲೂಕಿನ ದಟ್ಟಹಳ್ಳಿಯಲ್ಲಿ ಕೆ.ಎಂ.ಆರ್-630 ರಾಗಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಪ್ರಗತಿಪರ ರೈತ ಶಿವರಾಮು ಅವರ ಜಮೀನಿನಲ್ಲಿ ಏರ್ಪಡಿಸಲಾಗಿತ್ತು.ಕಾರ್ಯಕ್ರಮವನ್ನು ಮಂಡ್ಯದ ಕೃಷಿ ವಿಜ್ಞಾನಗಳ ವಿವಿಯ ವಿಸ್ತರಣಾ ನಿರ್ದೇಶಕ ಡಾ.ಸಿ. ರಾಮಚಂದ್ರ ಉದ್ಘಾಟಿಸಿ ಮಾತನಾಡಿ, ರೈತರು ರಾಗಿ ಬೆಳೆಯನ್ನು ಬೆಳೆಯುವಾಗ ಸುಧಾರಿತ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದರು,ಸಿರಿಧಾನ್ಯ ಬೆಳೆಗಳ ಮಹತ್ವ ಹೆಚ್ಚಾಗುತ್ತಿರುವುದರಿಂದ ರೈತರು ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರಬೇಕು. ಜೊತೆಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯಬಹುದು ಎಂದು ತಿಳಿಸಿದರು.ಸುಧಾರಿತ ತಳಿಗಳನ್ನು ಬಳಕೆ ಮಾಡಬೇಕು. ಬೆಳೆ ಪರಿವರ್ತನೆ, ಸಮತೋಲನ ಗೊಬ್ಬರಗಳ ಬಳಕೆಯ ಬಗ್ಗೆ ರೈತರೊಂದಿಗೆ ಚರ್ಚಿಸಿದರು. ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ದಿ ಪಡಿಸಿರುವ ಇತರೆ ಅಧಿಕ ಇಳುವರಿ ನೀಡುವ ತಳಿಗಳ ವಿಶೇಷ ಗುಣಗಳನ್ನು ತಿಳಿಸಿದರು. ವಿ.ಸಿ. ಫಾರಂನ ಸಹ ಸಂಶೋಧನಾ ನಿರ್ದೇಶಕ ಡಾ. ಬಿ.ಎಸ್. ಬಸವರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಕಂಡುಬರುತ್ತಿದ್ದು ಪೋಷಕರು ಸಿರಿಧಾನ್ಯ ಬೆಳೆಗಳನ್ನು ಬೆಳೆದು ಯಾವುದಾದರೂ ರೂಪದಲ್ಲಿ ಮಕ್ಕಳಿಗೆ ನೀಡಿದ್ದಲ್ಲಿ ಮಕ್ಕಳ ಆರೋಗ್ಯ ಕಾಪಾಡಬಹುದು ಎಂದು ತಿಳಿಸಿದರು.ಕಿರಿಯ ಬೇಸಾಯ ತಜ್ಞ ಡಾ.ಸಿ.ಎಂ. ಸುನಿಲ್, ಸಹಾಯಕ ಕೃಷಿ ನಿರ್ದೇಶಕ ವೈ. ಪ್ರಸಾದ್‌, ಪ್ರಾಧ್ಯಾಪಕ ಡಾ.ಎಚ್.ಆರ್. ರವೀಂದ್ರ, ಗ್ರಾಮದ ಮುಖಂಡರಾದ ಶ್ರೀನಿವಾಸ, ರವಿ, ವಿಸ್ತರಣಾ ಶಿಕ್ಷಣ ಘಟಕದ ಕ್ಷೇತ್ರ ಸಹಾಯಕ ಧರಣೇಶ್ ಇದ್ದರು.ಶಿವರಾಮು ಮತ್ತು ಪ್ರೇಮಮ್ಮ ಅವರು ಕೆ.ಆರ್.ಆರ್-630 ರಾಗಿ ತಳಿಯನ್ನು ಬಳಸಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದರು.