ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ತುಂಬೆ ಶಾಖೆಯ 5ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ, ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ತುಂಬೆ ಶಾಖೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಗಣೇಶ್ ಸುವರ್ಣ, ಹೊನ್ನಪ್ಪ ಪೂಜಾರಿ, ಅಬ್ದುಲ್ ಹಕೀಮ್, ಅಶೋಕ್ ಕುಲಾಲ್, ಭಾಸ್ಕರ್ ಕುಲಾಲ್ ಹಾಗೂ ಭಾರತಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಹೊನ್ನಪ್ಪ ಪೂಜಾರಿ, ಸಂಘದ ಸಿಬ್ಬಂದಿ ನಗುಮುಖದ ಸೇವೆಯೊಂದಿಗೆ ಉತ್ತಮ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ರಾಷ್ಟ್ರಿಕೃತ ಬ್ಯಾಂಕುಗಳಲ್ಲಿ ಸಿಗುವ ಎಲ್ಲ ವಿಧದ ಬ್ಯಾಂಕಿಂಗ್ ಸೇವಾ ಸೌಲಭ್ಯಗಳು ಸಂಘದಲ್ಲಿ ಲಭ್ಯವಿದ್ದು, ಇನ್ನೂ ಹೆಚ್ಚಿನ ಸೇವಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಸದಸ್ಯರಾದ ಭಾಸ್ಕರ್ ಕುಲಾಲ್ ಮಾತನಾಡಿ, ಆತ್ಮಶಕ್ತಿ ಸಂಘವು ಶೀಘ್ರಗತಿಯ ಸೇವೆ ನೀಡುವ ಮೂಲಕ ಗ್ರಾಹಕ ಸ್ನೇಹಿ ಸಂಘವಾಗಿದೆ ಎಂದರು.

ಸದಸ್ಯೆ ಭಾರತಿ ಮಾತನಾಡಿ, ಸಂಘದ ಹಿರಿಯ ಸದಸ್ಯರಿಗೆ ಮನೆಯ ಬಾಗಿಲಿಗೆ ಬಂದು ಬ್ಯಾಂಕಿಂಗ್ ಸೇವೆ ನೀಡುತ್ತಿರುವುದರಿಂದ ಹಿರಿಯ ನಾಗರಿಕರಿಗೆ ತುಂಬ ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಂಘದ ತುಂಬೆ ಶಾಖೆಯಲ್ಲಿ ಉತ್ತಮ ರೀತಿಯಲ್ಲಿ ನಿರಖು ಠೇವಣಿ ಸಂಗ್ರಹಣೆ ಹಾಗೂ ಆಭರಣ ಸಾಲ ವಿತರಿಸಿದ್ದು, ಆಭರಣ ಸಾಲದ ಮರುಪಾವತಿಯು ಉತ್ತಮ ರೀತಿಯಲ್ಲಿದೆ. ಸಂಘವು ಆರೋಗ್ಯ ಶಿಬಿರವನ್ನು ಸಹ ನಿರಂತರವಾಗಿ ಹಮ್ಮಿಕೊಂಡು ಬರುತ್ತಿದ್ದು, ಕೇವಲ ಹಣಕಾಸಿನ ವ್ಯವಹಾರವಲ್ಲದೆ ಜನರ ಆರೋಗ್ಯದ ಬಗ್ಗೆಯು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ. ಸಂಘವು ಒಟ್ಟು 300 ಕೋಟಿ ರು.ಗೂ ಅಧಿಕ ದುಡಿಯುವ ಬಂಡವಾಳ ಹೊಂದಿದ್ದು, ಅಭಿವೃದ್ದಿಯತ್ತ ಸಾಗುತ್ತಿದೆ ಎಂದರು.


ಸಂಘದ ನಿರ್ದೇಶಕ ಗೋಪಾಲ್ ಎಂ., ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಇದ್ದರು. ಶಾಖೆಯ ಸಿಬ್ಬಂದಿ ಭವ್ಯಾ ಸ್ವಾಗತಿಸಿದರು. ಶಾಖಾಧಿಕಾರಿ ಧನಲಕ್ಷ್ಮಿ ವಂದಿಸಿದರು. ಶ್ರಾವ್ಯ ನಿರೂಪಿಸಿದರು.