ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಪ್ರತಿ ತಿಂಗಳಂತೆ ಭಾನುವಾರ ಪಡೀಲ್‌ ಕರ್ಮಾರ್‌ನಲ್ಲಿರುವ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 38ನೇ ಬೃಹತ್ ಉಚಿತ ಆರೋಗ್ಯ, ಕಣ್ಣಿನ ತಪಾಸಣೆ- ಚಿಕಿತ್ಸಾ ಶಿಬಿರವನ್ನು ಆಯೋಜಿಸಿತ್ತು.

ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಪ್ರತಿ ತಿಂಗಳಂತೆ ಭಾನುವಾರ ಪಡೀಲ್‌ ಕರ್ಮಾರ್‌ನಲ್ಲಿರುವ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 38ನೇ ಬೃಹತ್ ಉಚಿತ ಆರೋಗ್ಯ, ಕಣ್ಣಿನ ತಪಾಸಣೆ- ಚಿಕಿತ್ಸಾ ಶಿಬಿರವನ್ನು ಆಯೋಜಿಸಿತ್ತು.

ಮಂಗಳೂರಿನ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆ ಹಾಗೂ ಚಿಕಿತ್ಸೆ ನೀಡಿದರು. ಒಟ್ಟು 300ಕ್ಕೂ ಹೆಚ್ಚು ಜನರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಕಣ್ಣಿನ ಸಮಸ್ಯೆ ಇದ್ದ 61 ಜನರಿಗೆ ಸ್ಥಳದಲ್ಲೇ ಕನ್ನಡಕಗಳನ್ನು ಹಾಗೂ ಎಲ್ಲ ಖಾಯಿಲೆಗಳಿಗೆ ಔಷಧಿಗಳನ್ನು 15 ದಿನಗಳಿಗೆ ಉಚಿತವಾಗಿ ನೀಡಲಾಯಿತು.

ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯುಳ್ಳ 37 ಜನರನ್ನು ಕೆಎಂಸಿ ಅತ್ತಾವರ ಆಸ್ಪತ್ರೆಗೆ ಬರಲು ಸೂಚಿಸಲಾಯಿತು. ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಆವಶ್ಯಕತೆಯುಳ್ಳ 12 ಜನರಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕತ್ಸೆ ಮಾಡಲಾಗುತ್ತದೆ. 115 ಜನರಿಗೆ ಇಸಿಜಿ ಮಾಡಲಾಯಿತು.

ಶಿಬಿರವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದ ಈ ವೈದ್ಯಕೀಯ ಶಿಬಿರವನ್ನು ಪ್ರಾಯೋಜಿಸುತ್ತಿರುವ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಉದಯ ಶಾಸ್ತ್ರಿ ಮಾತನಾಡಿ, ಶ್ರೀಶಾ ಸೊಸೈಟಿಯು ಆರಂಭದ ದಿನಗಳಿಂದಲೂ ತಾನು ಗಳಿಸಿದ ಲಾಭದ ದೊಡ್ಡ ಲಾಭಾಂಶವನ್ನು ಮರಳಿ ಸಮಾಜಕ್ಕೆ ಅನೇಕ ಬಗೆಯ ಸಮಾಜಮುಖಿ ಕಾರ್ಯಗಳ ಮೂಲಕ ನೀಡುತ್ತಿದೆ. ಸ್ಥಳೀಯ ಸಂಘ ಸಂಸ್ಥೆಗಳು ಇಂತಹ ಶಿಬಿರಗಳಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡುವ ಮೂಲಕ ಸಹಕರಿಸಿದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವಾ ಕಾರ್ಯಗಳನ್ನು ಸೊಸೈಟಿಯ ವತಿಯಿಂದ ಆಯೋಜಿಸಬಹುದು ಎಂದರು.ಶ್ರೀಶಾ ಸೊಸೈಟಿಯ ನಿರ್ದೇಶಕಿ ವತ್ಸಲಾ ಬಾಬು ಇದ್ದರು. ಶ್ರೀಶಾ ಸೊಸೈಟಿಯ ನಿರ್ದೇಶಕ ಹಾಗೂ ಬಾಲ ವಿಕಾಸ ಕೇಂದ್ರ ಮಂಗಳಾದೇವಿ ಸಂಚಾಲಕ ಸುರೇಶ್ ಬೈಂದೂರ್ ಶಿಬಿರದ ಬಗ್ಗೆ ಮಾಹಿತಿ ನೀಡಿ ನಿರ್ವಹಿಸಿದರು.