ಮಂಗಳೂರು- ಬೆಂಗಳೂರು ಪ್ಯಾಸೆಂಜರ್‌ ರೈಲು ಶುರು : ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆ

| Published : Aug 09 2024, 12:52 AM IST / Updated: Aug 09 2024, 12:14 PM IST

ಮಂಗಳೂರು- ಬೆಂಗಳೂರು ಪ್ಯಾಸೆಂಜರ್‌ ರೈಲು ಶುರು : ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳು ಓಡಾಟಕ್ಕೆ ಮುಕ್ತವಾಗಿದೆ ಎಂದು ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಮಂಗಳೂರು: ಕಳೆದ ಎರಡು ವಾರಗಳಿಂದ ಸಿರಿಬಾಗಿಲು ಘಾಟ್‌ನಲ್ಲಿ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ನಿಲುಗಡೆಗೊಂಡಿದ್ದ ಮಂಗಳೂರು-ಬೆಂಗಳೂರು ನಡುವಿನ ಪ್ಯಾಸೆಂಜರ್‌ ರೈಲು ಓಡಾಟ ಗುರುವಾರ ಪುನಾರಂಭಗೊಂಡಿದೆ. ಗುರುವಾರ ಮಧ್ಯಾಹ್ನ 12.30ಕ್ಕೆ ದೋಣಿಗಲ್‌-ಕಡಗರವಳ್ಳಿ ನಡುವೆ ಭೂಕುಸಿತ ನಡೆದ ಪ್ರದೇಶದಲ್ಲಿ ಯಶವಂತಪುರ-ಮಂಗಳೂರು ಜಂಕ್ಷನ್‌ ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಹಾದುಹೋಗಿದೆ. ಸದ್ಯದ ಮಟ್ಟಿಗೆ ರೈಲ್ವೆ ತಾಂತ್ರಿಕ ವರ್ಗ ಅಲ್ಲೇ ಬೀಡುಬಿಟ್ಟಿದ್ದು, ಅಲ್ಲಲ್ಲಿ ರಕ್ಷಣಾತ್ಮಕ ತಡೆಗೋಡೆ ನಿರ್ಮಿಸುವ ಕಾರ್ಯದಲ್ಲಿ ನಿರತವಾಗಿದೆ.

ಜು.26ರಂದು ದೋಣಿಗಲ್‌-ಕಡಗರವಳ್ಳಿ ನಡುವೆ ಭಾರಿ ಪ್ರಮಾಣದಲ್ಲಿ ಗುಡ್ಡಕುಸಿತದಿಂದ ಮಣ್ಣು ಹಳಿಗೆ ಬಿದ್ದಿತ್ತಲ್ಲದೆ, ಕೆಳಗೆ ಭೂಕುಸಿತದಿಂದ ಪ್ರಪಾತ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ರೈಲ್ವೆ ತಾಂತ್ರಿಕ ವರ್ಗ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭಾರಿ ಮಳೆಯ ನಡುವೆಯೂ ಹಗಲು ರಾತ್ರಿ ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೂ ಗುರುವಾರ ಪ್ಯಾಸೆಂಜರ್‌ ರೈಲು ಸಂಚಾರಕ್ಕೆ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದೆ.

ರೈಲ್ವೆ ತಾಂತ್ರಿಕ ತಂಡ ಅಲ್ಲೇ ಬೀಡುಬಿಟ್ಟಿದ್ದು, ಇನ್ನೂ ಕೆಲವು ರಕ್ಷಣಾತ್ಮಕ ಕಾಮಗಾರಿ ಕೈಗೊಂಡ ಬ‍ಳಿಕವೇ ಅಲ್ಲಿಂದ ನಿರ್ಗಮಿಸಲಿದೆ. ಈಗಾಗಲೇ ಹಳಿ ಹಾಗೂ ತಡೆಗೋಡೆ ದುರಸ್ತಿ ಪೂರ್ಣಗೊಂಡು ಭಾನುವಾರದಿಂದ ಎರಡು ದಿನಗಳ ಕಾಲ ಪ್ರಾಯೋಗಿಕವಾಗಿ ಗೂಡ್ಸ್‌ ರೈಲು ಸಂಚಾರ ನಡೆಸಲಾಗಿತ್ತು. ಅದು ಯಶಸ್ವಿಯಾದ ನಂತರ ಗುರುವಾರದಿಂದ ಪ್ಯಾಸೆಂಜರ್‌ ಓಡಾಟಕ್ಕೆ ಅನುಮತಿಸಲಾಗಿದೆ. ಈಗ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳು ಓಡಾಟಕ್ಕೆ ಮುಕ್ತವಾಗಿದೆ ಎಂದು ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.