ಯಶವಂತಪುರ-ಮಂಗಳೂರು ಜಂಕ್ಷನ್ ನಡುವೆ 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎರಡನೇ ಪ್ರಾಯೋಗಿಕ ಸಂಚಾರ ಗುರುವಾರ ಯಶಸ್ವಿಯಾಗಿ ನೆರವೇರಿತು. ಆದರೆ ತಾತ್ಕಾಲಿಕ ವೇಳಾಪಟ್ಟಿಯಂತೆ ಕಬಕ-ಪುತ್ತೂರು ನಿಲ್ದಾಣದಲ್ಲಿ ರೈಲು ನಿಲುಗಡೆಯಾಗದೆ ಮುಂದುವರಿದಿದೆ.

ಮಂಗಳೂರು: ಯಶವಂತಪುರ-ಮಂಗಳೂರು ಜಂಕ್ಷನ್ ನಡುವೆ 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎರಡನೇ ಪ್ರಾಯೋಗಿಕ ಸಂಚಾರ ಗುರುವಾರ ಯಶಸ್ವಿಯಾಗಿ ನೆರವೇರಿತು. ಆದರೆ ತಾತ್ಕಾಲಿಕ ವೇಳಾಪಟ್ಟಿಯಂತೆ ಕಬಕ-ಪುತ್ತೂರು ನಿಲ್ದಾಣದಲ್ಲಿ ರೈಲು ನಿಲುಗಡೆಯಾಗದೆ ಮುಂದುವರಿದಿದೆ.

ಬೆಳಗ್ಗೆ 6.50ಕ್ಕೆ ಯಶವಂತಪುರದಿಂದ ಹೊರಟ ರೈಲು ಮಧ್ಯಾಹ್ನ 1.55ಕ್ಕೆ ಮಂಗಳೂರು ಜಂಕ್ಷನ್ ತಲುಪಿತು. ಸುಮಾರು 7 ಗಂಟೆ 5 ನಿಮಿಷಗಳಲ್ಲಿ ಪ್ರಯಾಣ ಪೂರ್ಣಗೊಳಿಸಿದ ರೈಲು ಪ್ರಾಯೋಗಿಕ ಸಂಚಾರದಲ್ಲಿ ಮಂಗಳೂರು ಜಂಕ್ಷನ್‌ವರೆಗೆ ಮಾತ್ರ ಸಂಚರಿಸಿತು. ಮೊದಲ ಪ್ರಾಯೋಗಿಕ ಸಂಚಾರದಲ್ಲಿ ರೈಲನ್ನು ಮಂಗಳೂರು ಸೆಂಟ್ರಲ್‌ ವರೆಗೆ ಓಡಿಸಲಾಗಿತ್ತು. ಗುರುವಾರ ಮಂಗಳೂರು ಜಂಕ್ಷನ್‌ನಿಂದ ಯಶವಂತಪುರದತ್ತ ಮರು ಪ್ರಯಾಣ ಆರಂಭಿಸಿದ ವಂದೇ ಭಾರತ್ ರೈಲು ಮಧ್ಯಾಹ್ನ ಸುಮಾರು 2.25ಕ್ಕೆ ಹೊರಟು ಸಂಜೆ 3.17ರ ಸುಮಾರಿಗೆ ಕಬಕ- ಪುತ್ತೂರು ನಿಲ್ದಾಣವನ್ನು ದಾಟಿತು.

ಬಳಿಕ ಸಂಜೆ ಸುಮಾರು 6 ಗಂಟೆಗೆ ಸಕಲೇಶಪುರ ತಲುಪಿದ ರೈಲು 6.14ಕ್ಕೆ ಅಲ್ಲಿಂದ ಮುಂದುವರಿಯಿತು. ಸಂಜೆ 6.49ಕ್ಕೆ ಹಾಸನ ತಲುಪಿ, 6.54ಕ್ಕೆ ಯಶವಂತಪುರದತ್ತ ಪ್ರಯಾಣ ಮುಂದುವರಿಸಿತು.

ಪ್ರಾಯೋಗಿಕ ಸಂಚಾರದ ವೇಳೆ ರೈಲಿನ ಚಾಲನಾ ಸಮಯ, ತಾಂತ್ರಿಕ ಕಾರ್ಯಕ್ಷಮತೆ ಹಾಗೂ ಕಾರ್ಯಾಚರಣೆಯ ವಿವಿಧ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಹೀಗಾಗಿ ಪ್ರಾಯೋಗಿಕ ಸಂಚಾರದಲ್ಲಿ ಕಂಡುಬಂದ ಸಮಯ ಮತ್ತು ಮಾರ್ಗದ ನಿಲುಗಡೆಗಳನ್ನು ಕಾಯಂ ವೇಳಾಪಟ್ಟಿ ಎಂದು ಪರಿಗಣಿಸುವಂತಿಲ್ಲ ಎಂದು ರೈಲ್ವೆ ಮೂಲಗಳು ಸ್ಪಷ್ಟಪಡಿಸಿವೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮೊದಲ ಬಾರಿ ಬೆಂಗಳೂರಿನಿಂದ ಮಂಗಳೂರು ಸೆಂಟ್ರಲ್‌ ನಿಲ್ದಾಣ ವರೆಗೆ ಸಂಚರಿಸಿತ್ತು.

ವೇಳಾಪಟ್ಟಿಯಲ್ಲಿದ್ದರೂ ಕಬಕ-ಪುತ್ತೂರು ನೋ ಸ್ಟಾಪ್‌!

ವಂದೇ ಭಾರತ್ ರೈಲು ಕಬಕ- ಪುತ್ತೂರು ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ 1ರ ಮೂಲಕ ಹಾದುಹೋದರೂ ನಿಗದಿತ ತಾತ್ಕಾಲಿಕ ವೇಳಾಪಟ್ಟಿ ಹೊರತೂ ನಿಲುಗಡೆಯಾಗದೆ ಮುಂದುವರಿಯಿತು. ವಂದೇ ಭಾರತ್‌ಗೆ ನಿಲುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರೈಲ್ವೆ ಹೋರಾಟಗಾರರು, ಪ್ರಯಾಣಿಕರು ಸ್ವಾಗತಿಸಲು ಸೇರಿದ್ದರು. ಆದರೆ ನಿಗದಿಯಂತೆ 2 ನಿಮಿಷವೂ ರೈಲು ನಿಲುಗಡೆಯಾಗದೆ ಹಿನ್ನೆಲೆಯಲ್ಲಿ ಸೇರಿದ್ದ ಮಂದಿ ನಿರಾಶರಾದರು. ಇದೇ ರೈಲು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳುವಾಗಲೂ ಕಬಕ-ಪುತ್ತೂರಿನಲ್ಲಿ ನಿಲುಗಡೆಯಾಗದೆ ನೇರವಾಗಿ ಸಂಚರಿಸಿದೆ.

ವೇಳಾಪಟ್ಟಿ ಹೊರತೂ ಕಬಕ-ಪುತ್ತೂರಲ್ಲಿ ವಂದೇ ಭಾರತ್‌ ರೈಲು ನಿಲುಗಡೆಯಾಗದೆ ಸಂಚರಿಸಲು ಕಾರಣ ಮಾತ್ರ ನಿಗೂಢವಾಗಿದೆ. ಪುತ್ತೂರಲ್ಲಿ ವಂದೇ ಭಾರತ್‌ ನಿಲುಗಡೆ ಆಗ್ರಹಿಸಿ ರೈಲ್ವೆ ಹೋರಾಟಗಾರರು, ಸಂಘಟನೆಗಳು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ರೈಲ್ವೆ ಸಚಿವರು ಹಾಗೂ ಉನ್ನತಾಧಿಕಾರಿಗಳ ಮಟ್ಟದಲ್ಲಿ ಸಾಕಷ್ಟು ಶ್ರಮಿಸಿದ್ದರು. ಕೊನೆಗೂ ಎರಡನೇ ಬಾರಿ ವಂದೇ ಭಾರತ್‌ ಪ್ರಾಯೋಗಿಕ ಸಂಚಾರದ ವೇಳಾಪಟ್ಟಿಯಲ್ಲಿ ಕಬಕ-ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲಾಗಿತ್ತು. ಆದರೆ ವೇಳಾಪಟ್ಟಿಯಲ್ಲಿ ಮಾತ್ರ ನಿಲುಗಡೆ ನೀಡಿ, ಸಂಚಾರ ವೇಳೆ ನಿಲುಗಡೆ ನೀಡದೇ ಮುಂದುವರಿದಿರುವುದು ರೈಲ್ವೆ ಇಲಾಖೆ ಪ್ರಯಾಣಿಕರ ಬೇಡಿಕೆಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ರೈಲ್ವೆ ಸಂಘಟನೆಗಳು ಆರೋಪಿಸುತ್ತಿವೆ.