ಮಂಗಳೂರು: ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ವಿಶೇಷ ಚೇತನ ಫಲಾನುಭವಿಗಳಿಗೆ ಅತ್ಯಾಧುನಿಕ ಎಲೆಕ್ಟ್ರಿಕ್ ಗಾಲಿಕುರ್ಚಿಗಳು ಹಾಗೂ ಇತರ ಸಾಧನಗಳನ್ನು ತಮ್ಮ ಕಚೇರಿಯಲ್ಲಿ ವಿತರಿಸಿದರು.ಸಂಸದ ಕ್ಯಾ. ಚೌಟ ಅವರ ವಿಶೇಷ ಮನವಿಗೆ ಸ್ಪಂದಿಸಿದ ಮಂಗಳೂರು ಎಸ್‌ಇಝಡ್ ಲಿಮಿಟೆಡ್ ಸಂಸ್ಥೆಯು ತನ್ನ 2025-26ನೇ ಸಾಲಿನ ಸಿಎಸ್ಆರ್ ಯೋಜನೆಯಡಿ ಈ ಸಾಧನಗಳನ್ನು ಒದಗಿಸಿದೆ.ಅಂಗ ವೈಕಲ್ಯ ಹೊಂದಿರುವ ಫಲಾನುಭವಿಗಳ ದೈನಂದಿನ ಓಡಾಟಕ್ಕೆ ಅನುಕೂಲ ಕಲ್ಪಿಸಲು ಅತ್ಯಾಧುನಿಕ ಆರು ಎಲೆಕ್ಟ್ರಿಕ್ ಗಾಲಿಕುರ್ಚಿಗಳು, ಗಾಲಿಕುರ್ಚಿಯನ್ನು ಸ್ಕೂಟರ್ ಆಗಿ ಪರಿವರ್ತಿಸುವ ಒಂದು ನಿಯೋ ಫ್ಲೈ ಮತ್ತು ನಿಯೋ ಬೋಲ್ಟ್ ಸಾಧನ, ಒಂದು ಅತ್ಯಾಧುನಿಕ ಎಂಡೋಲೈಟ್ ಸೈಮ್ಸ್ ಪ್ರೊಸ್ಥೆಸಿಸ್ (ಕೃತಕ ಕಾಲು)ನ್ನು ಸಂಸದರ ಶಿಫಾರಸಿನಂತೆ ಎಸ್‌ಇಝಡ್ ಒದಗಿಸಿದ್ದು, ಅದನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.

ಮೂಲ್ಕಿ- ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಈ ಸಂದರ್ಭ ಹಾಜರಿದ್ದರು. ಎಂಎಸ್‌ಇಝಡ್‌ ಸಂಸ್ಥೆಯ ಸಿಇಒ ಸೂರ್ಯನಾರಾಯಣ್, ಆಪರೇಷನ್ಸ್ ಹೆಡ್‌ ಈಟಾ ಶ್ರೀನಿವಾಸಲು, ಪಣಿಭೂಷಣ್, ಯೋಗೀಶ್ , ಜಯಪ್ರಕಾಶ್ ಸೂರಿಂಜೆ ಮತ್ತಿತರರಿದ್ದರು.