ಮಂಗಳೂರು ನಗರದಲ್ಲಿ ಕೆಯುಐಡಿಎಫ್‌ಸಿ ವತಿಯಿಂದ ಕೈಗೊಂಡ ವಿವಿಧ ಕಾಮಗಾರಿಗಳ ಪರಿಶೀಲನೆ
ಮಂಗಳೂರು: ಮಂಗಳೂರು ನಗರದಲ್ಲಿ ಈ ಹಿಂದೆ ನಡೆಸಲಾಗಿರುವ ಯುಜಿಡಿ ಕಾಮಗಾರಿಗಳಲ್ಲಿ ವೈಫಲ್ಯಗಳು ಇದೆ ಎಂದಾದರೆ, ಈ ಬಗ್ಗೆ ಮಾಹಿತಿ ಸಂಗ್ರಹಿಸಿ, ಸಭೆಯಲ್ಲಿ ನ್ಯೂನತೆಗಳ ಬಗ್ಗೆ ಚರ್ಚಿಸಿ ತಪ್ಪುಗಳು ಕಂಡುಬಂದಲ್ಲಿ, ಅಂತಹವರ ವಿರುದ್ಧ ಕ್ರಮಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿ ಅಧ್ಯಕ್ಷ ರಘುಮೂರ್ತಿ ಹೇಳಿದರು.
ಅವರು ಬುಧವಾರ ಮಂಗಳೂರು ನಗರದಲ್ಲಿ ಕೆಯುಐಡಿಎಫ್‌ಸಿ ವತಿಯಿಂದ ಕೈಗೊಂಡ ವಿವಿಧ ಕಾಮಗಾರಿಗಳ ಪರಿಶೀಲನೆಯನ್ನು ಸಮಿತಿ ವತಿಯಿಂದ ನಡೆಸಿ ಬಳಿಕ ನಗರದ ಖಾಸಗಿ ಹೊಟೇಲ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ನಮ್ಮ ಸಮಿತಿ ಉಡುಪಿಯಲ್ಲಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಹಾಗೂ ಮಂಗಳೂರಿನ ಮೂರು ಕಡೆಗಳಲ್ಲಿ ಯುಜಿಡಿ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸ್ಥಳ ಪರಿಶೀಲನೆ ವೇಳೆ ಸಮಸ್ಯೆಗಳ ತೀವ್ರತೆ ಬಗ್ಗೆ ಗಮನಿಸಿದ್ದೇವೆ, ಸ್ಥಳೀಯರು ಕೂಡ ಸಮಸ್ಯೆಗಳನ್ನು ತಿಳಿಸಿದ್ದಾರೆ. ನೀರು ಹರಿಯುವಲ್ಲಿ ನೀರು ಹರಿಯಬೇಕು. ಆದರೆ ಇಲ್ಲಿ ಡ್ರೈನೇಜ್ ನೀರು ಹರಿಯುತ್ತಿದೆ. ಅದನ್ನು ಸರಿಪಡಿಸಲು, ಯುಜಿಡಿ ವ್ಯವಸ್ಥೆ ಸರ್ಪಕವಾಗಿಸಲು ಬದ್ಧರಾಗಿದ್ದೇವೆ. ಸಮಸ್ಯೆಗಳನ್ನು ಸರಿಪಡಿಸಲು ಆದ್ಯತೆ ನೀಡಲಾಗುವುದು. ಆ ನಿಟ್ಟಿನಲ್ಲಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ, ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿ ಸಮರ್ಪಕ ಯೋಜನೆಯ ಬಗ್ಗೆ ವರದಿ ಸಲ್ಲಿಸಲಿದ್ದೇವೆ ಎಂದರು.
1,250 ಕೋಟಿ ರು. ಬೇಕು:ಮಂಗಳೂರು ನಗರದಲ್ಲಿ ಈಗಾಗಲೇ ಎಡಿಬಿಯ 218 ಕೋಟಿ ರು., ಅಮೃತ್‌ನಡಿ 150 ಕೋಟಿ ರು., ಕರ್ನಾಟಕ ಸರ್ಕಾರದ 80 ಕೋಟಿ ರು. ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಲ್ಲಿ ಕಾಮಗಾರಿಗಳನ್ನು ನಡೆಸಲಾಗಿದೆ. ಇನ್ನೂ ನಗರದಲ್ಲಿ ಸಮರ್ಪಕ, ವ್ಯವಸ್ಥಿತ ಒಳಚರಂಡಿ ಯೋಜನೆ ಉನ್ನತೀಕರಿಸಲು 1,250 ಕೋಟಿ ರು. ಅನುದಾನದ ಅವಶ್ಯಕತೆ ಬೇಡಿಕೆ ಜಿಲ್ಲಾಡಳಿತದಿಂದ ಸಲ್ಲಿಕೆಯಾಗಿದೆ. ಈ ಬಗ್ಗೆ ಯೋಜನೆ ತಯಾರಿಸಲಾಗಿದೆ. ಇಂದಿನ ಸಭೆಯಲ್ಲಿ ಆ ನಿಟ್ಟಿನಲ್ಲಿ ಚರ್ಚಿಸುತ್ತೇವೆ. ಬಳಿಕ ವರದಿ ಸಿದ್ದಪಡಿಸಿ ಅದರ ಅಗತ್ಯತೆಯ ಕುರಿತಂತೆ ನಡೆಸಲಾದ ಪರಿಶೀಲನಾ ವರದಿಯನ್ನು ಜುಲೈನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಸಲ್ಲಿಸಲಾಗುವುದು ಎಂದರು.
ಪಾಲಿಕೆ ವ್ಯಾಪ್ತಿಯ ಒಟ್ಟು 850 ಕಿ.ಮೀ. ವ್ಯಾಪ್ತಿಯಲ್ಲಿ ಶೇ. 65ರಷ್ಟು ಮಾತ್ರವೇ ಯುಜಿಡಿ ವ್ಯವಸ್ಥೆ ಇದ್ದು, ಉಳಿದ ಶೇ. 35 ಹಾಗೂ ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ಹಳೆಯ ವ್ಯವಸ್ಥೆಗಳನ್ನು ಬದಲಾಯಿಸುವುದು ಸೇರಿದಂತೆ ನಗರದಲ್ಲಿ 2046ರ ವೇಳೆಯ 8 ಲಕ್ಷ ಜನಸಂಖ್ಯೆಯ ಆಧಾರವಾಗಿಟ್ಟುಕೊಂಡು 1,250 ಕೋಟಿ ರು.ಗಳ ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಉಡುಪಿಯಲ್ಲಿ ಕುಡಿಯುವ ನೀರು ಯೋಜನೆಯ ಶೇ.90 ಕಾಮಗಾರಿ ಪೂರ್ಣಗೊಂಡಿದೆ. ನಿರಂತರ ನೀರು ಸರಬರಾ ಯೋಜನೆಯ ಎಡಿಬಿ ಅನುದಾನದ 106 ಕೋಟಿ ರು. ವೆಚ್ಚದ ಕಾಮಗಾರಿ ಮುಂದಿನ ಆಗಸ್ಟ್‌ನಲ್ಲಿ, ಸಗಟು ನೀರು ಸರಬರಾಜು, 45 ಎಂಎಲ್‌ಡಿ ನೀರು ಶುದ್ಧೀಕರಣ ಘಟಕದ 50.80 ಕೋಟಿ ರು. ವೆಚ್ಚದ ಕಾಮಗಾರಿ 2027ರ ಜನವರಿಯಲ್ಲಿ, ಸಗಟು ನೀರು ಸರಬರಾಜು (ವರಾಹಿ) ಅಮೃತ್ ಅನುದಾನದ 116 ಕೋಟಿ ರು. ವೆಚ್ಚದ ಕಾಮಗಾರಿ ಈ ವರ್ಷದ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ರಘುಮೂರ್ತಿ ಮಾಹಿತಿ ನೀಡಿದರು.ವಿವಿಧ ಸ್ಥಳಗಳ ಪರಿಶೀಲನೆ:
ಮಂಗಳೂರಿನ ಸುರತ್ಕಲ್, ಬಿಜೈ ಅನೆಗುಂಡಿ ಸೇತುವೆಯ ಬಳಿ, ಕೊಡಿಯಾಲ್‌ಗುತ್ತು ಬಳಿ ಸಮಿತಿ ತಂಡ ಸ್ಥಳ ಪರಿಶೀಲನೆ ನಡೆಸಿದರು. ಬಿಜೈ ಆನೆಗುಂಡಿಯಲ್ಲಿ ರಾಜಕಾಲುವೆಯಲ್ಲಿ ಹರಿಯುತ್ತಿರುವ ಒಳಚರಂಡಿ ತ್ಯಾಜ್ಯದ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಕೊಡಿಯಾಲ್ ಗುತ್ತು ಸಮೀಪದ ವೆಟ್‌ವೆಲ್‌ಗೆ ಭೇಟಿ ನೀಡಿದರು. ವೆಟ್‌ವೆಲ್ ಕಾರ್ಯ ಸ್ಥಗಿತಗೊಳಿಸಿದ್ದು, ಒಳ ಚರಂಡಿ ಕೊಳಚೆಯನ್ನು ನೇರವಾಗಿ ರಾಜಕಾಲುವೆಗೆ ಬಿಡಲಾಗುತ್ತಿದೆ. ಮಳೆಗಾಲದಲ್ಲಿ ನೆರೆಯಾಗುತ್ತಿದ್ದು, ಶೌಚಾಲಯಗಳಿಗೆ ನೀರು ನುಗ್ಗುತ್ತಿದೆ. ಮನೆಗಳು ನೆರೆಯಿಂದ ಅವೃತ್ತಗೊಳ್ಳುತ್ತವೆ. ಪರಿಸರ ದುರ್ವಾಸನೆಯಿಂದಾಗಿ ವಾಸಿಸಲು ಸಂಕಷ್ಟ ಅನುಭವಿಸುವಂತಾಗಿದೆ. ಪ್ರತೀ ನಿತ್ಯ ನಿವಾಸಿಗಳು ನರಕ ಯಾತನೆ ಅನುಭವಿಸುತ್ತಿದ್ದೇವೆ. ಪಾಲಿಕೆಯ ಮೂಲಕ ರಸ್ತೆಯನ್ನು ಅಗೆಯುವುದು, ಪೈಪ್ ಅಳವಡಿಸುವುದು, ಮತ್ತೆ ಅಗೆಯುವುದು ಇದೇ ಪರಿಪಾಠವಾಗಿದೆ. ಪಾಲಿಕೆ ಅಧಿಕಾರಿಗಳಿಗೆ ಸರಿಯಾದ ಸೂಚನೆ ನೀಡಬೇಕು ಎಂದು ಸ್ಥಳೀಯರು ಸಮಿತಿಯವರೊಂದಿಗೆ ಅಹವಾಲು ಸಲ್ಲಿಸಿದರು.ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಕಿಶೋರ್ ಕುಮಾರ್ ಪುತ್ತೂರು, ಸಮಿತಿ ಸದಸ್ಯರಾದ ಎಂ.ಕೃಷ್ಣಪ್ಪ, ಡಿ.ಜಿ.ಶಾಂತನಗೌಡ, ಎಸ್, ಮುನಿರಾಜ್, ಟಿ.ಎಂ. ಜವರೇ ಗೌಡ, ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಹಾನಗರ ಪಾಲಿಕೆ ಕಮಿಷನರ್ ರವಿಚಂದ್ರ ನಾಯಕ್ ಮತ್ತಿತರರು ಇದ್ದರು.