ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿ.ಯು ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ

ಮಂಗಳೂರು: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಕಠಿಣ ಶ್ರಮ, ಆತ್ಮವಿಶ್ವಾಸ ಮತ್ತು ಗುರಿಯೊಂದಿಗೆ ಸಾಗಿದರೆ ನಾವು ಉನ್ನತಮಟ್ಟಕ್ಕೆ ಏರಲು ಸಾಧ್ಯ. ಬದುಕಿನಲ್ಲಿ ಯಾವುದೇ ಸವಾಲುಗಳು ಬಂದರು ಧೈರ್ಯದಿಂದ ಎದುರಿಸಿ ಸದಾ ಹೊಸದನ್ನು ಕಲಿಯುವ ಮನೋಭಾವವನ್ನು ಹೊಂದಿರಬೇಕು. ಶಿಕ್ಷಣ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ, ವ್ಯಕ್ತಿತ್ವ ನಿರ್ಮಾಣಕ್ಕೂ ಸಹಾಯಕವಾಗಬೇಕು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹೇಳಿದರು.

ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿ.ಯು ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿ ಜೀವನದಲ್ಲಿ ಶಿಕ್ಷಣದ ಮಹತ್ವವನ್ನು ವಿವರಿಸಿದರು. ದೇಶದ ಅಭಿವೃದ್ಧಿಗೆ ಯುವಜನತೆ ಪ್ರಮುಖ ಶಕ್ತಿಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಹೊಣೆಗಾರಿಕೆಯನ್ನು ಅರಿತು ಸಾಗಬೇಕು ಎಂದು ಹೇಳುತ್ತಾ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶುಭ ಹಾರೈಸಿದರು. ಶೈಕ್ಷಣಿಕ ಸಾಲಿನ ಮ್ಯಾಗಜೀನ್ ‘ಎಕ್ಸ್‌ಪ್ಲೋರ್’ ಬಿಡುಗಡೆಗೊಳಿಸಿ ಮಾತನಾಡಿದ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್‌, ಯಶಸ್ಸಿನ ಸಾಧನೆಗೆ ಶಿಸ್ತು ಅತಿ ಮುಖ್ಯ. ಪದವಿ ಪೂರ್ವ ಹಂತದಲ್ಲಿ ಕಠಿಣ ಪರಿಶ್ರಮ, ಶಿಸ್ತು ಅಳವಡಿಸಿಕೊಂಡರೆ ಮುಂದಿನ ಹಂತದಲ್ಲಿ ಅತ್ಯುನ್ನತ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಮುಂಬರಲಿರುವ ಕೆಸಿಇಟಿ, ನೀಟ್ ಪರೀಕ್ಷೆಯನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯೊಂದಿಗೆ ಅಧ್ಯಯನಶೀಲತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉನ್ನತ ಸಾಧನೆಯನ್ನು ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿಬರಬೇಕು ಎಂದು ಹೇಳಿದರು.

೨೦೨೪-೨೬ರ ಶೈಕ್ಷಣಿಕ ಸಾಲಿನಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.ಕಳೆದ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಕ್ಕೆ ವಿಜ್ಞಾನ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿನಿಯಾಗಿರುವ ಅಮೂಲ್ಯ ಕಾಮತ್ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ತಾವು ಕಾಲೇಜಿನಲ್ಲಿ ಕಳೆದ ಎರಡು ವರ್ಷದ ಸವಿ ನೆನಪುಗಳನ್ನು ಮೆಲುಕು ಹಾಕಿದರು.

ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನದ ನಿರ್ದೇಶಕ ಅಂಕುಶ್ ಎನ್. ನಾಯಕ್, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಕೋರ್‌ ಕಮಿಟಿ ಸದಸ್ಯ ಬಿ. ವಿನಯ್ ಕುಮಾರ್, ಕೋಚಿಂಗ್ ಸಂಯೋಜಕ ಕರುಣಾಕರ್ ಬಳ್ಕೂರು, ಭೌತಶಾಸ್ತ್ರದ ಉಪನ್ಯಾಸಕಿ ಶ್ರೀವಿದ್ಯಾ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳಾದ ಅಶ್ವಿನಿ ಪೈ, ಪ್ರಶಾಂತ್ ಪೈ ಇದ್ದರು.

ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕ ಪೃಥ್ವಿ ಡಿಸೋಜಾ ನಿರೂಪಿಸಿದರು. ವಿದ್ಯಾರ್ಥಿ ಪರಿಷತ್‌ ಕಾರ್ಯದರ್ಶಿ ನಿಹಾರಿಕಾ ವಂದಿಸಿದರು. ಕಾರ್ಯಕ್ರಮದ ಸಂಯೋಜಕಿ ಶ್ವೇತಾ ಸುವರ್ಣ ಸಹಕರಿಸಿದರು.

--------------