ದಯಾನಂದ ಕಲ್ನಾರ್
ಮಂಗಳೂರು: ಮಂಗಳೂರಿನ ಬೈಕ್ ರೈಡರ್ ಓರ್ವರು ತಮ್ಮ 60ನೇ ವಯಸ್ಸಿನಲ್ಲಿ ಯುರೋಪಿಯನ್ ಮತ್ತು ಗಲ್ಫ್‌ನ ಸುಮಾರು 38 ದೇಶಗಳಿಗೆ ಬೈಕ್‌ನಲ್ಲಿ ಸುತ್ತಾಟಕ್ಕೆ ಸಿದ್ಧತೆ ನಡೆಸಿದ್ದು, ಇದು ಅವರ ಬೈಕ್‌ನಲ್ಲಿ ಎರಡನೇ ಪ್ರವಾಸವಾಗಿದೆ.ಮಂಗಳೂರಿನ ಉದ್ಯಮಿ ಶರತ್ ಎಕ್ಕೂರು ಇದೀಗ ತಮ್ಮ ಬೈಕ್‌ನಲ್ಲಿ ವಿದೇಶ ಪ್ರವಾಸಕ್ಕೆ ಯೋಜನೆ ಹಾಕಿಕೊಂಡಿದ್ದು, ಮೇ 31ರಂದು ಮಂಗಳೂರಿನಿಂದ ತಮ್ಮ ಪ್ರಯಾಣ ಆರಂಭಿಸಲಿದ್ದು, ಮುಂದಿನ 5-6 ತಿಂಗಳ ವರೆಗೆ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.
ಶರತ್ ಎಕ್ಕೂರು ಅವರು ತಮ್ಮ ರೋಯಲ್ ಎನ್‌ಫೀಲ್ಡ್ ಸೂಪರ್ ಮಿಟಿವ್ಯೂರ್ 650 ಬೈಕ್‌ನಲ್ಲಿ ಮೇ 31ರಂದು ಬೆಳಗ್ಗೆ ಮಂಗಳೂರಿನ ಶಾಂತಿ ಕೆಥಡ್ರಿಯಲ್ ಚರ್ಚ್ ಬಳಿಯಿಂದ ಬೈಕ್ ಜರ್ನಿ ಆರಂಭಿಸಲಿದ್ದಾರೆ.ಬೆಂಗಳೂರು, ಹೈದರಾಬಾದ್, ಮಧ್ಯಪ್ರದೇಶ, ಉತ್ತರಪ್ರದೇಶದ ಮೂಲಕ ನೇಪಾಳ ಪ್ರವೇಶಿಸಿ ವಿದೇಶ ಪ್ರವಾಸ ಆರಂಭವಾಗಲಿದೆ. ಅಲ್ಲಿಂದ ಟಿಬೇಟ್, ಚೈನಾ, ಕಜಕಿಸ್ಥಾನ್, ಉರುಬಿಸ್ಥಾನ್, ರಷ್ಯಾ, ಇರಾನ್, ಇರಾಕ್, ಸೌಧಿ, ಸೇರಿದಂತೆ ಯುರೋಪಿಯನ್‌ನ ಆಸ್ಟ್ರೀಯಾ, ಬೆಲ್ಜಿಯಂ, ಬಲ್ಗೇರಿಯಾ, ಕ್ರೊಯೇಷಿಯಾ, ಸೈಪ್ರಸ್, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಸ್ಟೋನಿಯಾ, ಫಿನ್‌ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಐರ್ಲೇಂಡ್, ಇಟಲಿ, ಲಾಟ್ವಿಯಾ, ಲಿಥುವೇನಿಯಾ, ಲಕ್ಸೇಂಬರ್ಗ್, ಮಾಲ್ಟಾ, ನೆದರ್ಲ್ಯಾಂಡ್ಸ್, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ಸ್ಲೊವೇನಿಯಾ, ಸ್ಪೇನ್, ಸ್ವೀಡನ್, ಸ್ವಟ್ಜರ್ಲ್ಯಾಂಡ್, ನಾರ್ವೆ, ಟರ್ಕಿ ಮೊದಲಾದ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಪ್ರತೀ ದಿನದ 500 ಕಿ.ಮೀ. ದೂರದ ಪ್ರಯಾಣ ನಡೆಸಲು ಉದ್ದೇಶಿರುವ ಶರತ್ ಅವರು ತಮ್ಮ ಒಟ್ಟು ಪ್ರವಾಸದಲ್ಲಿ 35ರಿಂದ 40 ಸಾವಿರ ಕಿ.ಮೀ. ದೂರದವರೆಗೆ ಸುತ್ತಾಟ ನಡೆಸಲಿದ್ದಾರೆ. ತಮ್ಮ ಬೈಕ್‌ನಲ್ಲಿ ಭಾರತದ ಧ್ವಜ ಹಾಗೂ ತುಳುನಾಡಿನ ಧ್ವಜದೊಂದಿಗೆ ಪ್ರವಾಸ ಕೈಗೊಳ್ಳುವರು. ಬೈಕ್‌ನಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಕೆಲವೇ ಹಿರಿಯ ರೈಡರ್‌ಗಳಲ್ಲಿ ಶರತ್ ಅವರೂ ಗುರುತಿಸಿಕೊಳ್ಳುವ ನಿರೀಕ್ಷೆ ಇದೆ.
ಚೈನಾದಲ್ಲಿ ಟೂರ್ ಗೈಡ್ ನೆರವು:
ವಿದೇಶಿ ಪ್ರವಾಸದ ವೇಳೆ ಇತರ ಕಡೆಗಳಲ್ಲಿ ಟೂರ್ ಗೈಡ್ ನೆರವಿಲ್ಲದೇ ಸಾಗುವ ಶರತ್ ಅವರು ಚೈನಾದಲ್ಲಿ ಅಲ್ಲಿನ ಟೂರ್ ಗೈಡ್ ನೆರವು ಪಡೆಯಲಿದ್ದಾರೆ. ಚೈನಾದಲ್ಲಿ ಬೆಂಗಳೂರಿನ ತಂಡ ಮೂರು ಕಾರಿನಲ್ಲಿ ಲಂಡನ್‌ಗೆ ಟ್ರಿಪ್ ಹೋಗುತ್ತಿದ್ದು, ಅಲ್ಲಿ ಶರತ್ ಕೂಡ ಅವರೊಂದಿಗೆ ಸೇರಿಕೊಳ್ಳಲಿದ್ದು, ತಮ್ಮ ಟೂರ್ ಗೈಡ್‌ನ್ನು ಅವರ ಕಾರಿನಲ್ಲಿ ಕರೆದೊಯ್ದು, ತಾವು ತಮ್ಮ ಬೈಕ್‌ನಲ್ಲಿ ಸಂಚರಿಸಲಿದ್ದಾರೆ. ಚೈನಾದಾದ್ಯಂತ ಟೂರ್ ಗೈಡ್ ಹಾಗೂ ಬೆಂಗಳೂರಿನ ತಂಡದೊಂದಿಗೆ ಮುಂದೆ ಸಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಾಧ್ಯವಾದರೆ ಅಫಘಾನಿಸ್ತಾನಕ್ಕೂ ಭೇಟಿ ನೀಡಲಿರುವ ಶರತ್ ಅವರು ಒಮನ್‌ನಲ್ಲಿ ತಮ್ಮ ಪ್ರವಾಸ ಕೊನೆಗೊಳಿಸಲಿದ್ದು, ಅಲ್ಲಿಂದ ಹಡಗಿನಲ್ಲಿ ಭಾರತಕ್ಕೆ ಹಿಂದಿರುಗಲಿದ್ದಾರೆ.ಏನೆಲ್ಲ ಸಿದ್ಧತೆ?:ಬೈಕ್ ಮೂಲಕ 5-6 ತಿಂಗಳ ವಿದೇಶ ಸುತ್ತಾಟಕ್ಕೆ ಸಾಮಾನ್ಯ ಅಗತ್ಯತೆಗಳ ಜೊತೆಗೆ ಆಡಳಿತಾತ್ಮಕ ಸಿದ್ಧತೆಗಳನ್ನು ನಡೆಸಿಕೊಂಡಿದ್ದಾರೆ. ಏಜೆನ್ಸಿಯೊಂದರ ಸಹಕಾರದಲ್ಲಿ ಈಗಾಗಲೇ ಪಾಸ್‌ಪೋರ್ಟ್, ವೀಸಾ ಮಾಡಿಕೊಂಡಿದ್ದಾರೆ. ವಿದೇಶದಲ್ಲಿ ಬೈಕ್ ಓಡಿಸಲು ತಮ್ಮ ಬೈಕ್‌ಗೂ ತಾತ್ಕಲಿಕ ಅನುಮತಿ ದಾಖಲೆ ಮಾಡಿಕೊಂಡಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸನ್ಸ್, ಆರೋಗ್ಯ ವಿಮೆ ಮೊದಲಾದ ಆಡಳಿತಾತ್ಮ ಪ್ರಕ್ರಿಯೆಗಳು ಕಡ್ಡಾಯವಾಗಿದ್ದು, ಅದನ್ನು ಸಿದ್ಧತೆ ಮಾಡಿಕೊಂಡಿದ್ದಾರೆ. ತಮ್ಮ ಖರ್ಚುಗಳಿಗಾಗಿ ವಿದೇಶಗಳಲ್ಲಿ ಬಳಕೆ ಮಾಡುವ ಡಿಜಿಟಲ್ ಕಾರ್ಡ್ ಮಾಡಿದ್ದಾರೆ.
ಶರತ್ ಅವರು 2024ರಲ್ಲೂ ಮಂಗಳೂರಿನಿಂದ ಗಲ್ಫ್ ದೇಶಗಳಿಗೆ ತಮ್ಮ ಬುಲೆಟ್ ಬೈಕ್‌ನಲ್ಲಿ ಪ್ರವಾಸ ಕೈಗೊಂಡಿದ್ದರು. ಅಂದು ಮುಂಬಾಯಿಂದ ದುಬೈಗೆ ಬೈಕ್‌ನ್ನು ಹಡಗಿನಲ್ಲಿ ಶಿಫ್ಟ್ ಮಾಡಿ ಪ್ರವಾಸ ಕೈಗೊಂಡಿದ್ದರು. ‘ಸೇ ನೋ ಟು ಡ್ರಗ್ಸ್’ ಘೋಷಣೆಯೊಂದಿಗೆ ಪ್ರವಾಸ ಕೈಗೊಂಡಿದ್ದರು.ಮೇ 31ರಂದು ಮಂಗಳೂರಿನಿಂದ ನಾನು ಬೈಕ್‌ನಲ್ಲಿ ನನ್ನ ಎರಡನೇ ವಿದೇಶ ಪ್ರವಾಸ ಕೈಗೊಳ್ಳಲಿದ್ದೇನೆ. ಸುಮಾರು 38 ದೇಶಗಳಿಗೆ ಬೈಕ್‌ನಲ್ಲಿ ಸುತ್ತಾಟ ನಡೆಸಿ ಒಮನ್‌ನಲ್ಲಿ ಪ್ರವಾಸ ಕೊನೆಗೊಳಿಸಲಿದ್ದೇನೆ. ಸುಮಾರು 5-6 ತಿಂಗಳು ಬೇಕಾಗಬಹುದು. 35ರಿಂದ 40 ಸಾವಿ ಕಿ.ಮೀ. ದೂರ ಸಂಚರಿಸಲಿದ್ದೇನೆ.-ಶರತ್ ಕುಮಾರ್ ಎಕ್ಕೂರು, ಮಂಗಳೂರು, ಬೈಕ್ ರೈಡರ್