ಮಂಗಳೂರು: ದೇಶದ ಅಭಿವೃದ್ಧಿಗೆ ಪೂರಕವಾಗಿರುವ ‘ವಿಕಸಿತ್‌ ಭಾರತ್‌- 2047’ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ವದ್ದಾಗಿದ್ದು, ದೇಶದ ಆರ್ಥಿಕ ವಿಕಾಸದಲ್ಲಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಮಾಜಿ ಐಎಎಸ್‌ ಅಧಿಕಾರಿ, ನೀತಿ ಸುಧಾರಕ ದೇಬಾಶೀಷ್‌ ಪಾಂಡ ಸಲಹೆ ನೀಡಿದ್ದಾರೆ.

ನಗರದಲ್ಲಿರುವ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಬುಧವಾರ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ‘ವಿಕಸಿತ್‌ ಭಾರತ್‌- 2047: ಹಣಕಾಸು ಸೇವೆಗಳ ಪಾತ್ರ’ ಎಂಬ ವಿಚಾರದ ಕುರಿತು ಅವರು ಪ್ರಧಾನ ಉಪನ್ಯಾಸ ನೀಡಿದರು.

ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಲಿದೆ ಎಂದು ಹಿಂದೆ ನಾವು ಅಂದುಕೊಂಡಿರಲಿಲ್ಲ. ವಿಶ್ವದ 4ನೇ ಅತಿ ದೊಡ್ಡ ಆರ್ಥಿಕತೆಯಾಗಲಿದ್ದೇವೆ ಎಂದೂ ಊಹಿಸಿರಲಿಲ್ಲ. ಈ ಸಾಧನೆಯೀಗ ಕಣ್ಣಮುಂದಿದೆ. ಇಂದು ನಾವು ವಿಕಸಿತ್‌ ಭಾರತ್‌ ಎಂಬ ಮಹಾ ದೃಷ್ಟಿಯತ್ತ ಸಾಗುತ್ತಿದ್ದೇವೆ. ಈ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಬದಲಿಗೆ ಸಂಘ ಸಂಸ್ಥೆಗಳು, ಉದ್ಯಮ ಕ್ಷೇತ್ರ, ಅಧಿಕಾರಿಗಳು ಮಾತ್ರವಲ್ಲದೆ, ಪ್ರತಿಯೊಬ್ಬ ನಾಗರಿಕನೂ ಇದರಲ್ಲಿ ಭಾಗೀದಾರರಾಗಬೇಕಾಗುತ್ತದೆ. ಇದಕ್ಕೆ ದೀರ್ಘಕಾಲಿಕ, ಉನ್ನತ ವೇಗದ ಕಾರ್ಯೋನ್ಮುಖತೆಯೊಂದಿಗೆ ಉತ್ಪಾದಕತೆ, ಬಂಡವಾಳದ ದಕ್ಷತೆ ಮತ್ತು ಕಾರ್ಯಗತ ಸಾಮರ್ಥ್ಯ ಹೆಚ್ಚಳದ ಅಗತ್ಯವಿದೆ. ಜತೆಗೆ ಆರ್ಥಿಕ ಸ್ಥಿರತೆ, ಶಕ್ತಿಶಾಲಿಯಾದ ಹಣಕಾಸು ವ್ಯವಸ್ಥೆ ಮತ್ತು ಜಾಗತಿಕ ಆಘಾತಗಳನ್ನು ಎದುರಿಸುವ ಸಾಮರ್ಥ್ಯವೂ ಇರಬೇಕಾಗುತ್ತದೆ. ಈ ಸವಾಲುಗಳನ್ನು ತಲುಪಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ದೇಬಾಶೀಷ್‌ ಪಾಂಡ ಹೇಳಿದರು.

ಬ್ಯಾಂಕ್‌ಗಳು ಕೇವಲ ಲಾಭ ಗಳಿಸುವ ಜತೆಗೆ ತನ್ನ ಮೂಲ ತತ್ವವಾದ ಸಾಮಾಜಿಕ ಪರಿವರ್ತನೆಯ ಭಾಗವೂ ಆಗಬೇಕಿವೆ. ದೇಶದ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆಯ ಆಧಾರ ಸ್ತಂಭಗಳಾದ ಈ ಹಣಕಾಸು ಸಂಸ್ಥೆಗಳು ಈ ನಿಟ್ಟಿನಲ್ಲಿ ತಮ್ಮ ಆದ್ಯತೆ ನೀಡಬೇಕು. ಏಕರೂಪದ ಕಾರ್ಯ ವಿಧಾನವನ್ನು ಪರಿವರ್ತಿಸಿ, ಫೈನಾನ್ಸಿಂಗ್‌ನ ವಿವಿಧ ಮಾದರಿಗಳ ಅನುಷ್ಠಾನಕ್ಕೆ ಮುಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ತಂತ್ರಜ್ಞಾನ ಅನಿವಾರ್ಯ:


ಇಂದಿನ ಡಿಜಿಟಲ್ ಯುಗದಲ್ಲಿ ಚೆಕ್‌ಬುಕ್ ಎಂಬುದು ಬಹುತೇಕ ಇತಿಹಾಸ ಪುಟ ಸೇರಿದೆ. ಟೆಲಿಫೋನ್ ಡಯಲ್ ಮಾಡುವ ಕಾಲದಿಂದ ಇಂದಿನ ಮೊಬೈಲ್ ಮತ್ತು ವೀಡಿಯೊ ಸಂವಹನದ ಯುಗದವರೆಗೆ ತಲೆಮಾರುಗಳ ಪರಿವರ್ತನೆಗೆ ಸಾಕ್ಷಿಯಾಗಿದ್ದೇವೆ. ಈಗ ಕೃತಕ ಬುದ್ಧಿಮತ್ತೆ ಬಾಗಿಲು ತಟ್ಟುತ್ತಿದೆ. ಆದರೆ ಇಂತಹ ತಂತ್ರಜ್ಞಾನ ಹೇಗೆ ಬಳಕೆ ಮಾಡಬೇಕು ಎಂಬುದು ಮಾನವ ನಿರ್ಣಯದ ಮೇಲಿದೆ. ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನ ಅನಿವಾರ್ಯ; ಅದಕ್ಕೆ ಹೊಂದಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಕರ್ಣಾಟಕ ಬ್ಯಾಂಕ್ ಪ್ರೇರಣಾದಾಯಕ ಪಯಣ:

ಕರ್ಣಾಟಕ ಬ್ಯಾಂಕ್‌ನ ಕಳೆದ 102 ವರ್ಷಗಳ ಪಯಣ, ಮೈಲುಗಲ್ಲುಗಳು, ಬದಲಾವಣೆಗಳು ಇವೆಲ್ಲವೂ ಪ್ರೇರಣಾದಾಯಕವಾಗಿವೆ. ಸಂಸ್ಥಾಪಕರ ದಿನವನ್ನು ನಾನು ಕೇವಲ ಒಂದು ಆಚರಣಾತ್ಮಕ ಮೈಲುಗಲ್ಲು ಎಂದು ನೋಡುವುದಿಲ್ಲ. ಇದು ಸಂಸ್ಥೆಯ ‘ಪಾಸ್ ಪಾಯಿಂಟ್’- ಅಂದರೆ ಕ್ಷಣಕಾಲ ನಿಂತು ಚಿಂತನೆ ಮಾಡುವ ದಿನ. ಈ ಮೂಲಕ ಒಂದು ಪರಂಪರೆಯನ್ನು ಗೌರವಿಸುತ್ತಿದ್ದೀರಿ. ಕರ್ಣಾಟಕ ಬ್ಯಾಂಕ್‌ನ ಮ್ಯೂಸಿಯಂಗೆ ಭೇಟಿ ನೀಡಿದಾಗ ಸ್ಥಾಪಕ ಮಹನೀಯರ ಜೀವನಯಾನ, ಅವರ ಮೌಲ್ಯ ವ್ಯವಸ್ಥೆ ಮತ್ತು ಬ್ಯಾಂಕಿನ ವಿನಮ್ರ ಆರಂಭದಿಂದ ಇಂದಿನ ಮಹತ್ತರ ಸಾಧನೆವರೆಗೆ ನಡೆದ ಬೆಳವಣಿಗೆಯನ್ನು ನೋಡುವ ಅವಕಾಶ ದೊರೆತದ್ದು ಸೌಭಾಗ್ಯ ಎಂದು ದೇಬಾಶೀಷ್‌ ಶ್ಲಾಘಿಸಿದರು.

ವಿಕಸಿತ್‌ ಭಾರತ್‌ನಲ್ಲಿ ಸಕ್ರಿಯ ಪಾತ್ರ:

ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್‌ ಕುಮಾರ್‌ ಮಾತನಾಡಿ, ವಿಕಸಿತ್‌ ಭಾರತ್‌ ದೃಷ್ಟಿಕೋನವು ಬ್ಯಾಂಕ್‌ಗಳಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸಲಿದೆ. ಈ ಬೆಳವಣಿಗೆಯಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್‌ ಬದ್ಧತೆಯಿಂದ ಕಾರ್ಯ ನಿರ್ವಹಿಸಲಿದೆ. ಬ್ಯಾಂಕಿನ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಜತೆಗೆ ವಿಕಸಿತ್‌ ಭಾರತ್‌ ಕಾರ್ಯ ಸಾಧನೆಯಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದೇವೆ ಎಂದು ಹೇಳಿದರು.

ಬ್ಯಾಂಕ್‌ನ ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್‌. ಭಟ್‌ ಮಾತನಾಡಿ, ಕರ್ಣಾಟಕ ಬ್ಯಾಂಕ್‌ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಯಲ್ಲಿ ಉನ್ನತ ಸ್ಥಾನಕ್ಕೇರಿದ್ದು, ಇದಕ್ಕೆ ಬ್ಯಾಂಕ್‌ನ ಸಂಸ್ಥಾಪಕರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಕಾರಣ. ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಮುಂದುವರಿಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದು ಹೇಳಿದರು.

ಬ್ಯಾಂಕ್‌ನ ಸಂಸ್ಥಾಪಕರ ಭಾವಚಿತ್ರಗಳಿಗೆ ಅತಿಥಿಗಳು ಗೌರವ ನಮನ ಸಲ್ಲಿಸಿದರು. ದೇಬಾಶೀಷ್‌ ಪಾಂಡ ಅವರನ್ನು ಪಿ. ಪ್ರದೀಪ್‌ ಕುಮಾರ್‌ ಸನ್ಮಾನಿಸಿದರು. ಕಾರ್ಯಕ್ರಮದ ಬಳಿಕ ಮಹಿಳಾ ಕಲಾವಿದರಿಂದ ‘ನಾರಿ ತರಂಗಿಣಿ’ ಸಂಗೀತ ಕಛೇರಿ ಪ್ರೇಕ್ಷಕರ ಮನಸೂರೆಗೊಳಿಸಿತು.