ಮಂಗಳೂರಿನ ಕೊಂಕಣಿ ಸಾಹಿತಿ, ಪತ್ರಕರ್ತ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅವರ ಸಾಹಿತ್ಯ ವಿಮರ್ಶೆ ಕೃತಿಯಾದ ‘ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ’ (2021)ಗೆ ಈ ಪ್ರಶಸ್ತಿ ಲಭಿಸಿದೆ.

ಮಂಗಳೂರು: ಮಂಗಳೂರಿನ ಕೊಂಕಣಿ ಸಾಹಿತಿ, ಪತ್ರಕರ್ತ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅವರ ಸಾಹಿತ್ಯ ವಿಮರ್ಶೆ ಕೃತಿಯಾದ ‘ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ’ (2021)ಗೆ ಈ ಪ್ರಶಸ್ತಿ ಲಭಿಸಿದೆ.

ಪೆರ್ನಾಲ್ ಅವರ ಈ ಕೃತಿಯು ಸಾಹಿತ್ಯ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮೊದಲ ಕೊಂಕಣಿ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೃತಿಗೆ 2021ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಮತ್ತು 2023ರಲ್ಲಿ ಗೋವಾ ಕೊಂಕಣಿ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಲಭಿಸಿತ್ತು. ಪುಸ್ತಕಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕೊಂಕಣಿ ಸಾಹಿತಿ ದಾಮೋದರ್ ಮೌಜೋ ಮುನ್ನುಡಿ ಬರೆದಿದ್ದು, ಮಂಗಳೂರಿನ ಕವಿತಾ ಪಬ್ಲಿಕೇಷನ್ಸ್ ಪುಸ್ತಕ ಪ್ರಕಟಿಸಿದೆ.ಉಡುಪಿ ಜಿಲ್ಲೆಯ ಪೆರ್ನಾಲ್‌ನಲ್ಲಿ ಹುಟ್ಟಿ, ಶಿರ್ವದ ಹಿಂದೂ ಜ್ಯೂನಿಯರ್ ಕಾಲೇಜು ಮತ್ತು ಎಂ.ಎಸ್.ಆರ್.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮುಂಬೈನಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ಹೆನ್ರಿ ಮೆಂಡೋನ್ಸಾ, ವೃತ್ತಿಯಲ್ಲಿ ಕಮರ್ಶಿಯಲ್ ಅಕೌಂಟೆಂಟ್‌. ತರಂಗ, ಸಂಕ್ರಮಣ, ಶೂದ್ರ ಮುಂತಾದ ಪತ್ರಿಕೆಗಳ ಮೂಲಕ ಬರವಣಿಗೆ ಆರಂಭಿಸಿದ ಅವರು, 1980ರ ದಶಕದ ಆರಂಭದಲ್ಲಿ ಯುವಕ್ ಮಾಸಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೊಂಕಣಿಗೆ ಪಾದಾರ್ಪಣೆ ಮಾಡಿ, ಪ್ರಸ್ತುತ ಕಥೆಗಾರ, ಕವಿ, ವಿಮರ್ಶಕ, ಸಂಪಾದಕ, ಪ್ರಕಾಶಕರಾಗಿ ಛಾಪು ಮೂಡಿಸಿದ್ದಾರೆ.2011ರಲ್ಲಿ ಅವರು ಸ್ಥಾಪಿಸಿದ ಕಿಟಾಳ್ ಸಾಹಿತ್ಯಿಕ ಅಂತರ್ಜಾಲ ಪತ್ರಿಕೆ ಸತತ 14ನೇ ವರ್ಷದಲ್ಲಿ ಮುಂದುವರಿದಿದೆ. 2013ರಲ್ಲಿ ಪಾಕ್ಷಿಕವಾಗಿ ಆರಂಭಿಸಿದ ಆರ್ಸೊ ಸಾಹಿತ್ಯ ಪತ್ರಿಕೆ ಪ್ರಸ್ತುತ ಮಾಸ ಪತ್ರಿಕೆಯಾಗಿ 12ನೇ ವರ್ಷದಲ್ಲಿ ಪ್ರಕಟವಾಗುತ್ತಿದೆ. ತಮ್ಮದೇ ಕಿಟಾಳ್ ಪ್ರಕಾಶನದ ಮೂಲಕ ಈವರೆಗೆ 15ಕ್ಕೂ ಮಿಕ್ಕಿ ಮೌಲಿಕ ಸಾಹಿತ್ಯ ಕೃತಿಗಳನ್ನು ಪೆರ್ನಾಲ್ ಪ್ರಕಟಿಸಿದ್ದಾರೆ.