ಮಂಗಳೂರು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಸಮಾಲೋಚನಾ ಸಭೆ ಗುರುವಾರ ಕುಲಶೇಖರದ ಶ್ರೀ ಸೂರ್ಯನಾರಾಯಣ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು: ಮಂಗಳೂರು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಸಮಾಲೋಚನಾ ಸಭೆ ಗುರುವಾರ ಕುಲಶೇಖರದ ಶ್ರೀ ಸೂರ್ಯನಾರಾಯಣ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ದ.ಕ. ಹಾಲು ಒಕ್ಕೂಟ ಕಾರ್ಯಕ್ಷಮತೆ, ಗುಣಮಟ್ಟ ಹಾಗೂ ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲಿಯೂ ರಾಜ್ಯದಲ್ಲೇ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಈ ಸಾಧನೆಯ ಹಿಂದೆ ಜಿಲ್ಲೆಯ ಹೈನುಗಾರರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಮೂಲ್ಯ ಸಹಕಾರ ಮತ್ತು ಬದ್ಧತೆ ಕಾರಣ. ಮುಂದೆಯೂ ಇದೇ ರೀತಿಯ ಸಹಕಾರವನ್ನು ನೀಡುವ ಮೂಲಕ ಒಕ್ಕೂಟದ ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಜಿಲ್ಲೆಯ ಹೆಸರನ್ನು ಇನ್ನಷ್ಠು ಎತ್ತರಕ್ಕೆ ಕೊಂಡೊಯ್ಯಲು ಕೈಜೋಡಿಸಬೇಕು ಎಂದು ಕರೆ ನೀಡಿದರು.ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಹೈನುಗಾರರ ಮಕ್ಕಳಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ಪ್ರಥಮ ಸ್ಥಾನ ಪಡೆದ ಮಂಗಳೂರು ತಾಲೂಕಿನ ಇರುವೈಲು ಹಾಲು ಉತ್ಪಾದಕರ ಸಂಘ ಹಾಗೂ ದ್ವಿತೀಯ ಸ್ಥಾನ ಪಡೆದ ಮುಚ್ಚೂರು ಹಾಲು ಉತ್ಪಾದಕರ ಸಂಘಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ನಿರ್ದೇಶಕರಾದ ನಂದರಾಮ ರೈ, ಸವಿತಾ ಎನ್. ಶೆಟ್ಟಿ , ವ್ಯವಸ್ಥಾಪಕ ನಿರ್ದೇಶಕ ಜೆ.ಜೈಕುಮಾರ್, ವ್ಯವಸ್ಥಾಪಕ ರವಿರಾಜ ಉಡುಪ, ಜಾನೆಟ್ ರೊಸಾರಿಯೋ ಇದ್ದರು.
ನಿರ್ದೇಶಕ ಸುಚರಿತ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ಸುಧಾಕರ ರೈ ವಂದಿಸಿದರು. ಸುಚಿತ್ರ ನಿರೂಪಿಸಿದರು.